ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ವಿಶಾಖಿ ಮಳೆಗೆ ಇತ್ತೀಚೆಗೆ ರಾಗಿ ಬೆಳೆಗೆ ಕಾಣಿಸಿಕೊಂಡಿದ್ದ ಹಸಿರುಹುಳಗಳ ಬಾಧೆ ಸ್ವಲ್ಪ ಪ್ರಮಾಣದಲ್ಲಿ ತಗ್ಗುವಂತಾಗಿದೆ ಎನ್ನಲಾಗಿದೆ.
ಮಳೆ ನಕ್ಷತ್ರಗಳಿಗೆ ರೈತರು ಅವರದ್ದೇ ಧಾಟಿಯಲ್ಲಿ ವ್ಯಾಖ್ಯಾನಿಸುವುದು ರೂಢಿಯಲ್ಲಿದ್ದು ,ಕೆಲವೊಂದು ಮಳೆಬಂದರೆ ಬೆಳೆಗೆ ಅನುಕೂಲ, ಕೆಲವದರಿಂದ ಕೇಡುಗಾಲ ಎಂಬ ನಂಬಿಕೆ ಮನೆ ಮಾಡಿದೆ. ಹಿಂಗಾರು ಕೊನೆಘಟ್ಟದ ಬೆಳೆಗಳಿಗೆ ವಿಶಾಖಮಳೆ ಅಂತಿಮವಾಗಿದ್ದು ವಿಶಾಖಮಳೆ ಬಂದೇಬರುತ್ತದೆಂಬ ಆಶಾಭಾವನೆ ರೈತರಲ್ಲಿದೆ.
ಹುಳಿಯಾರು ಹೋಬಳಿಯಲ್ಲಿ ವಿಶಾಖಮಳೆಬಂದು ರಾಗಿಗೆ ಬಿದ್ದದ್ದ ಹಸಿರುಹುಳುಗಳು ನಾಶವಾಗಿರುವುದನ್ನು ವೀಕ್ಷಿಸುತ್ತಿರುವ ರೈತ. |
ವಿಶಾಖಮಳೆಗೆ ವಿಷ ಮಳೆ ಎಂದು ಕರೆಯಲಾಗುವುದಿದ್ದು, "ವಿಶಾಖಿ ಮಳೆಬಂದು ಹುಳುಗಳ ಬಾಯಿಗೆಲ್ಲಾ ವಿಷಹಾಕ್ತು "ವಿಶಾಖಮಳೆ ಪಿಚಾಚಿ ಇದ್ದಂತೆ" ಎಂಬ ನಾಣ್ನುಡಿಗಳಿವೆ. ಈ ಮಳೆ ಬರುವ ಹಂತದಲ್ಲಿ ಬೆಳೆ ಕಟಾವು ಸ್ಥಿತಿಗೆ ಬಂದಿದ್ದು ಹುಳುಗಳಬಾಧೆ ಕೂಡ ಕಾಟಕಾಡುತ್ತೆ. ಈ ಮಳೆ ಬಂದಲ್ಲಿ ಮರಿಹಂತದ ಕೀಟಗಳು ಸಾಯುತ್ತವೆ ಎಂಬ ಪ್ರತೀತಿ ಇದೆ.
ಹರಳು, ತೊಗರಿ ಸೇರಿದಂತೆ ಮತ್ತಿತರರ ದ್ವಿದಳಧಾನ್ಯಗಳ ಬೆಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಹುಳುಗಳಬಾಧೆ ಕಳೆದೆರಡು ವರ್ಷಗಳಿಂದ ರಾಗಿ ಬೆಳೆಗೂ ವ್ಯಾಪಿಸಿತ್ತು. ಈ ಸಂಬಂಧ ವಿವಿಧ ವಿಜ್ಞಾನಿಗಳ ತಂಡ ಸಹ ಹೋಬಳಿ ವ್ಯಾಪ್ತಿಯ ಹುಳುಭಾದಿತ ತಾಕುಗಳಿಗೆ ಭೇಟಿನೀಡಿ ಔಷದೋಪಚಾರದ ಬಗ್ಗೆ ತಿಳುವಳಿಕೆ ನೀಡಿದ್ದರು. ಆದರೆ ಔಷಧಿ ಸಿಂಪಡಣೆಯನ್ನು ರೈತರು ಸಾಮೂಹಿಕವಾಗಿ ಅನುಸರಿಸದ ಹಿನ್ನಲೆಯಲ್ಲಿ ಹುಳುಗಳಭಾದೆ ಮುಂದುವರಿದಿತ್ತು. ಕೆಲವು ರೈತರು ದುಬಾರಿ ಬೆಲೆಯ ಔಷಧಿ ತಂದು ಸಿಂಪಡಣೆ ಮಾಡಿ ಕೈಸುಟ್ಟುಕೊಂಡಿದ್ದರು. ಇದೀಗ ಹೋಬಳಿ ವ್ಯಾಪ್ತಿಯ ಕೆಲವೆಡೆ ಬಂದ ಸೊನೆಮಳೆಗೆ ರಾಗಿ ಇನ್ನಿತರ ಬೆಳೆಗಳಿಗೆ ಬಿದ್ದಿದ್ದ ಹುಳುಗಳು ನಾಶವಾಗಿವೆ ಎಂದು ಕೆಲವು ರೈತರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರೋಗ ಹಾಗೂ ಕೀಟಭಾದೆಗಳಿಗೆ ಮಾರಕ ಎಂದು ನಂಬಿಕೆಯಿರುವ ವಿಶಾಖಮಳೆ ಬಂದು ರೈತರ ಆತಂಕವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ