ಕೆಲವು ತಿಂಗಳುಗಳಿಂದ ಏರಿಕೆ ಕಂಡು 19ಸಾವಿರದ ಗಡಿಯಾಚೆಗೆ ಜಿಗಿತಗೊಂಡಿದ್ದ ಕೊಬ್ಬರಿ ಧಾರಣೆ ಇಳಿಮುಖಗೊಂಡು ಕಳೆದೆರಡು ವಾರದಿಂದ 16ಸಾವಿರ ಆಸುಪಾಸಿನ ಬೆಲೆಯಲ್ಲಿ ಸ್ಥಿರವಾಗಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ಷಿಂಟಲ್ ಕೊಬ್ಬರಿಗೆ 16,200ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬೆಲೆಯ 19ಸಾವಿರದ ಗಡಿದಾಟಿ , 20ಸಾವಿರಕ್ಕೆ ಏರಿಕೆಯಾಗುತ್ತದೆಂಬ ರೈತರ ಊಹೆ ಬುಡಮೇಲಾಗುವಂತಾಗಿದೆ.
ಕೊಬ್ಬರಿ ಬೆಲೆ ಇದುವರೆಗೂ ಹೆಚ್ಚೆಂದರೆ 8ಸಾವಿರ ತಲುಪಿದ್ದೇ ಗರಿಷ್ಠ ಬೆಲೆಯಾಗಿದ್ದು, ಪ್ರತಿಬಾರಿಯೂ 5 ರಿಂದ 6 ಸಾವಿರ ಬೆಲೆಯಿದ್ದು ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಮಾರುವ ಪರಿಸ್ಥಿತಿಯಿತ್ತು. ಸದಾ ನಿರಾಸೆಯ ಮಡುವಿನಲ್ಲೇ ನಿಟ್ಟುಸಿರು ಬಿಡುತ್ತಿದ್ದ ರೈತನಿಗೆ ಪ್ರಸ್ತುತ ಬೆಲೆ ಸಂತಸ ತಂದಿದೆ.
ಕೊಬ್ಬರಿಯ ಇತಿಹಾಸದಲ್ಲೇ 10ಸಾವಿರದ ಗಡಿದಾಟದಿದ್ದ ಕೊಬ್ಬರಿಗೆ ಈ ಬಾರಿ ಶುಕ್ರದೆಸೆ ತಿರುಗಿ ಉತ್ತಮ ಬೆಲೆ ಬಂದು 19 ಸಾವಿರದ ಗಡಿ ದಾಟಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಲ್ಲದೆ ದೀಪಾವಳಿ ಸಮಯದಲ್ಲಿ 20 ಸಾವಿರ ಗಡಿದಾಟಲಿದೆ ಎಂಬ ಮಾತೆ ರೈತರನ್ನು ಮತ್ತು ವರ್ತಕರನ್ನು ಆಶ್ಚರ್ಯ ಪುಳುಕಿತರನ್ನಾಗಿ ಮಾಡಿತ್ತು.
ಕೊಬ್ಬರಿ ಬೆಲೆ ಮತ್ತಷ್ಟು ಇಳಿಕೆಯಾಗುತ್ತದೆಂಬ ಆತಂಕದಲ್ಲಿ ಕೊಬ್ಬರಿ ಸುಲಿಯಲು ಮುಂದಾಗಿರುವ ರೈತರು. |
ಆದರೆ ಇದೀಗ ಅದರ ಬೆನ್ನಲ್ಲೇ ಕಳೆದ ಮೂರ್ನಾಲ್ಕು ವಾರದಿಂದ ಕೊಬ್ಬರಿ ಬೆಲೆಯಲ್ಲಿ ಇಳಿಕೆಯಾಗುತ್ತಾ ಸಾಗಿ 16ಸಾವಿರದಲ್ಲಿಗೆ ಬಂದಿದ್ದು, ಬೆಲೆ ಹೆಚ್ಚಾಗುತ್ತದೆ ಎಂದುಕೊಂಡಿದ್ದ ತೆಂಗುಬೆಳೆಗಾರರಿಗೆ ಈ ರೀತಿ ಬೆಲೆ ಇಳಿಕೆಯಾಗುತ್ತಿರುವುದು ಆತಂಕ ಉಂಟುಮಾಡಿದೆ.
ಸದ್ಯ ಹಬ್ಬಹರಿದಿನಗಳ ಸಾಲೆಲ್ಲಾ ಮುಗಿದು ಮುಂದಿನ ಸಂಕ್ರಾಂತಿ ವರೆಗೆ ಇನ್ನಾವುದೇ ಹಬ್ಬ ಇಲ್ಲದಿದ್ದು ನಾಗಾಲೋಟದಲ್ಲಿದ್ದ ಬೆಲೆ ಸ್ಥಿರವಾಗಿ 16ಸಾವಿರ ಅಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಏರಿಕೆ ಏನಕ್ಕೆ: ಪ್ರಸಕ್ತ ವರ್ಷ ಉತ್ಪಾದೆನೆ ಕುಂಠಿತವಾಗಿದ್ದೇ ಬೆಲೆ ಏರಿಕೆಗೆ ಕಾರಣವಾಗಿತ್ತು. ಸುಡುಬಿಸಿಲು ಹಾಗೂ ಅಂತರ್ಜಲ ಬತ್ತಿ ಹೋದ ಕಾರಣ ನೀರಿನ ಸಮಸ್ಯೆ ತಲೆದೂರಿದ್ದಲ್ಲದೆ, ತೆಂಗಿನ ಮರಗಳಿಗೆ ನುಸಿರೋಗ, ಕಾಂಡಸೋರುವ ರೋಗ ಹಾಗೂ ಸುಳಿ ಒಣಗುವ ರೋಗ ವ್ಯಾಪಿಸಿ ಸುಳಿ ಒಣಗಿ ನೆಲಕ್ಕುರುಳುವ ತೆಂಗನ್ನು ಉಳಿಸಿಕೊಳ್ಳುವುದೇ ರೈತರಿಗೆ ದುಸ್ಥರವಾಗಿತ್ತು. ತೆಂಗನ್ನು ತೊರೆದು ಇನ್ನಿತರ ಬೆಳೆಗಳತ್ತ ಮುಖಮಾಡುವಂತಾಗಿತ್ತು. ತೆಂಗಿನ ಸ್ಥಾನ ದಾಳಿಂಬೆ ಆಕ್ರಮಿಸಿ ತೆಂಗು ಕಡಿಮೆಯಗುವಂತೆ ಸ್ಥಿತಿಯಲ್ಲಿ ಕೊಬ್ಬರಿ ಕೈಹಿಡಿದಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
ಇಂತಹ ವಿಷಮ ಸ್ಥಿತಿಯಲ್ಲಿ ಕೊಬ್ಬರಿಗೆ ಉತ್ತಮ ಬೆಲೆ ಬಂದ ಹಿನ್ನಲೆಯಲ್ಲಿ ಮತ್ತೆ ತೆಂಗಿನ ಮರಗಳ ಆರೈಕೆಗೆ ಬೆಳೆಗಾರರು ಮತ್ತೆ ಮುಂದಾಗಿದ್ದು, ಇದೀಗ ಮತ್ತೆ ಕೊಬ್ಬರಿಗೆ ಬೆಲೆ ಇಳಿಕೆಯಾಗುತ್ತಾ ಸಾಗುತ್ತಿದ್ದು, ಮತ್ತೆಲ್ಲಿ ಈ ಹಿಂದೆಯಿದ್ದ ನಾಲ್ಕೈದು ಸಾವಿರ ರೂನತ್ತ ಬಂದು ಬಿಡುತ್ತದೆ ಎಂಬ ಭಯ ಮೂಡುವಂತಾಗಿದೆ.
ಕೊಟ್ಯಾಂತರ ರೂಪಾಯಿ ವಹಿವಾಟಿನ ಕೊಬ್ಬರಿ ಮಾರುಕಟ್ಟೆಯ ಬೆಲೆ ನಿಯಂತ್ರಣ ಹೆಚ್ಚುಕಮ್ಮಿ ರವಾನೆದಾರರ ಕೈಯಲ್ಲೇ ಇದ್ದು,ಇತ್ತೀಚೆಗೆ ಇ-ಟೆಂಡರ್ ಮೂಲಕ ವಹಿವಾಟು ಪ್ರಾರಂಭವಾಗಿದ್ದೇ ಕೊಬ್ಬರಿ ಬೆಲೆ ದಿಢೀರ್ ಹೆಚ್ಚಳಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.
ಒಟ್ಟಾರೆ ಒಂದು ಸಮಯದಲ್ಲಿ ಉತ್ತಮ ಬೆಲೆಯಿಲ್ಲದೆ ಸೂರಗಿದ್ದ ಕೊಬ್ಬರಿಗೆ ಅದೃಷ್ಠವೆಂಬಂತೆ ಉತ್ತಮ ಬೆಲೆ ಬಂದಿರುವುದು ಆಶಾದಾಯಕ ಬೆಳೆಣಿಗೆಯಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆಯೇ ಎಂದು ಕಾಯುವ ಸ್ಥಿತಿ ರೈತರದ್ದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ