ಹುಳಿಯಾರು ಹೋಬಳಿಯ ಕೆಂಕೆರೆ ಹಾಗೂ ಲಿಂಗಪ್ಪನಪಾಳ್ಯದಲ್ಲಿ ಬೀಗಹಾಕಿದ್ದ ಕೆಲವು ಮನೆಗಳ ಬೀಗ ಮುರಿದು ಸರಣಿ ಮನೆಗಳ್ಳತನ ಮಾಡಿ, ನಗ-ನಾಣ್ಯ ದೋಚಿರುವ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ಕೆಂಕೆರೆ ಗ್ರಾಮದ ರಾಮಲಿಂಗಯ್ಯ, ಚನ್ನಬಸವಯ್ಯ ಹಾಗೂ ಬುಡೇನ್ ಸಾಬ್ ಅವರ ಮನೆ ಹಾಗೂ ಪುರದಮಠಗೇಟ್ ನ ಗೌರಮ್ಮ ಅವರ ಚಿಲ್ಲರೆ ಅಂಗಡಿಯ ಬೀಗ ಮುರಿದು ಕಳವು ಮಾಡಲಾಗಿದೆ. ಲಿಂಗಪ್ಪನಪಾಳ್ಯದಲ್ಲಿ ದನದ ಕೊಟ್ಟಿಗೆ ಸೇರಿದಂತೆ 4 ಖಾಲಿಮನೆಗಳ ಬೀಗ ಮುರಿದು ಕಳವಿಗೆ ಯತ್ನಿಸಿದ್ದಾರೆ. ಮನೆಗಳಿಗೆ ಬೀಗ ಹಾಕಿರುವುದನ್ನು ಗಮನಿಸಿದ್ದ ಕಳ್ಳರು ಈ ಕೃತ್ಯ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆಡೆಗೆ ಹೋಗಿದ್ದರಿಂದ ಇಂತಹ ಘಟನೆ ನಡೆದಿದೆ. ರಾಮಲಿಂಗಯ್ಯ ಅವರ ಮನೆಯ ಬಾಗಿಲ ಡೋರ್ ಲಾಕ್ ಕಿತ್ತು ಒಳನುಗ್ಗಿರುವ ಕಳ್ಳರು ಗಾಡ್ರೇಜ್ ಬೀರ್ ನ ಬೀಗ ಸಹ ಮುರಿದು ಅದರಲ್ಲಿದ್ದ ನಗದು ಹಾಗೂ ಒಡವೆಯನ್ನು ದೊಚಿದ್ದಾರೆಂದು ದೂರು ನೀಡಿದ್ದಾರೆ. ಚನ್ನಬಸವಯ್ಯ ಅವರ ಮನೆಯ ಬೀಗ ಕಿತ್ತಿರುವ ಕಳ್ಳರು ಒಡವೆಯೊಂದಿಗೆ ಪರಾರಿಯಾಗಿದ್ದರೆ, ಗೌರಮ್ಮನವರ ಚಿಲ್ಲರೆ ಅಂಗಡಿಯಲ್ಲಿ ಚಿಲ್ಲರೆ ಹಣ, ಸಿಗರೇಟ್ ಪ್ಯಾಕ್ ಸೇರಿದಂತೆ ಇನ್ನಿತ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ವಿಷಯ ತಿಳಿದ ಸಿಪಿಐ ಜಿ.ಎಸ್.ಜಯಕುಮಾರ್ ,ಪಿಎಸೈ ವೈ.ಘೋರ್ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕೆಂಕೆರೆ ಸಮೀಪದ ಹೊನ್ನಯ್ಯನಪಾಳ್ಯದಲ್ಲಿ ಮನೆಯೊಂದರ ಹತ್ತಿರ ಬೆಳೆದಿದ್ದ ಗಂಧದಮರ ಕಳ್ಳತನವಾದ ಬೆನ್ನಲ್ಲೇ , ಈಗ ಮತ್ತೆ ಈರೀತಿ ಸರಣಿ ಕಳ್ಳತನವಾಗಿರುವುದು ಪೊಲೀಸರ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ತಾ.ಪಂ.ಸದಸ್ಯ ನವೀನ್ ತಿಳಿಸಿದ್ದಾರೆ. ನೈಟ್ ಬೀಟ್ ಗೆ ಸರಿಯಾಗಿ ಬರುತ್ತಾರೋ ಇಲ್ಲವೋ ಎಂಬುದು ಸಹ ತಿಳಿಯುತ್ತಿಲ್ಲ, ಪ್ರತಿ ಗ್ರಾಮಗಳಿಗೆ ನೈಟ್ ಬೀಟ್ ಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಹಾಕುವಂತೆ ಒತ್ತಾಯಿಸಿದ್ದಾರೆ.
ಜಾಗೃತರಾಗುವಂತೆ ಮನವಿ: ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಬೀಗಹಾಕಿದ ಮನೆ, ಅಂಗಡಿಗಳ ಬೀಗ ಮುರಿದು ಕೈಗೆ ಸಿಕ್ಕಿದನ್ನು ದೋಚುತ್ತಿದ್ದಾರೆ. ಈ ಬಗ್ಗೆ ನಾಗರೀಕರು ಎಚ್ಚೆತ್ತು ಕೊಳ್ಳಬೇಕು. ತಾವು ಮನೆಬಿಟ್ಟು ಸಂಬಂಧಿಕರ ಮನೆಗೆ ಅಥವಾ ಪ್ರವಾಸಗಳಿಗೆ ಹೋಗುವ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ತಿಳಿಸಿ ಹೋಗಿ, ಇಲ್ಲವಾದರೆ ಮನೆಯಲ್ಲಿ ಒಬ್ಬರಾದರೂ ಇರಬೇಕು. ತಮ್ಮ ಗ್ರಾಮದಲ್ಲಿ ಅಥವಾ ಮನೆಯ ಅಕ್ಕಪಕ್ಕದಲ್ಲಿ ಅನುಮಾನಸ್ಪದ ವ್ಯಕ್ತಿಗಳು, ಕೆಲ ಉಪಕಸುಬನ್ನು ಮಾಡುವ ಕುಟುಂಬದವರು ಕಂಡುಬಂದರೆ ಠಾಣೆಗೆ ತಿಳಿಸಬೇಕು ಎಂದು ಸಿಪಿಐ ಜಯಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ