ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಹೃದಯಭಾಗದಲ್ಲಿದ್ದ ಶ್ರೀರಂಗನಾಥ ಲಿಕ್ಕರ್ ಶಾಪ್‍ನ ಸ್ಥಳಾಂತರಕ್ಕೆ ನಡೆದಿದ್ದ ಕಾನೂನು ಹೋರಾಟಗಳೆಲ್ಲಾ ಅಂತೂ ಕೊನೆಗೊಂಡಿದ್ದು ಇದೀಗ ಅಬಕಾರಿ ಉಪ ಆಯುಕ್ತರು ಸ್ಥಳಾಂತರಕ್ಕೆ ಅಂತಿಮ ಆದೇಶ ಹೊರಡಿಸಿದ್ದು, ಸ್ಥಳಾಂತರಕ್ಕೆ ಕ್ಷಣಗಣನೆ ನಡೆದಿದೆ.
ಏನಿದು ವಿವಾದ : ಪಟ್ಟಣದ ಹುಳಿಯಾರಮ್ಮ ದೇವಾಲಯದ ಹತ್ತಿರದ ದಿಟೌನ್ ಕೋಪರೇಟಿವ್ ಸೊಸೈಟಿಯ ಕಟ್ಟಡದಲ್ಲಿ ಎನ್.ಜಿ.ನಾಗರಾಜರಾವ್ ಅವರಿಗೆ ಸೇರಿದ್ದ ಮದ್ಯದಂಗಡಿ ಕಳೆದ 40 ವರ್ಷಗಳಿಂದ ಇದ್ದು, ಅಬಕಾರಿ ನಿಯಮ ಉಲ್ಲಂಘಿಸಿ ಆಕ್ಷೇಪಣಾರ್ಹ ಸ್ಥಳದಲ್ಲಿರುವ ಇದನ್ನು ತೆರವುಗೊಳಿಸುವಂತೆ ಕಟ್ಟಡದ ಮಾಲೀಕರಾದ ಟೌನ್ ಕೋಅಪರೇಟಿವ್ ಸೊಸೈಟಿಯವರು 2002 ರಿಂದ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು.
ಹುಳಿಯಾರು ಪಟ್ಟಣದಲ್ಲಿ ವಿವಾದಿತ ಸ್ಥಳದಲ್ಲಿರುವ ರಂಗನಾಥ ಲಿಕ್ಕರ್ ಶಾಪ್. |
ಸನ್ನದು ಸ್ಥಳವು ಜನನಿಬಿಡ ಸ್ಥಳವಾಗಿದ್ದು,ಪಕ್ಕದಲ್ಲೇ ನಾಲ್ಕು ದೇವಾಲಯಗಳು,ಸಾರ್ವಜನಿಕ ಆಸ್ಪತ್ರೆ ಅಲ್ಲದೆ ಹೆದ್ದಾರಿಯು ಹಾದುಹೋಗಿದ್ದು ಅಬಕಾರಿ ನಿಯಮದ ಷರತ್ತುಗಳು ಉಲ್ಲಂಘಿಸಿ ಲಿಕ್ಕರ್ ಶಾಪ್ ನಡೆಯುತ್ತಿದ್ದು ಅದನ್ನು ಸ್ಥಳಾಂತರಿಸುವಂತೆ ಪಟ್ಟುಹಿಡಿದಿದ್ದರು.
ಹುಳಿಯಾರಮ್ಮ ದೇವಸ್ಥಾನ ಸಮಿತಿ,ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್,ಬೀರಲಿಂಗೇಶ್ವರ ದೇವಾಲಯ ಸಮಿತಿ , ಸೀತಾರಾಮ ಪ್ರತಿಷ್ಠಾನ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ ಘಟಕ,ಜಯಕರ್ನಾಟಕ ಘಟಕ, ರೈತಸಂಘದವರು, ಪಂಚಾಯ್ತಿ ಸದಸ್ಯರು ಸಹ ಸೊಸೈಟಿಯ ಹೋರಾಟಕ್ಕೆ ಕೈಜೋಡಿಸಿ ಲಿಕ್ಕರ್ ಶಾಪ್ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಅಬಕಾರಿ ನಿಯಮದ ಅನ್ವಯ ದೇವಾಲಯಗಳಿಂದ 100 ಮೀ ಒಳಗೆ ಹಾಗೂ ರಾಷ್ಟ್ರೀಯಹೆದ್ದಾರಿಯಿಂದ 220 ಮೀ ಒಳಗೆ ಯಾವುದೇ ಮದ್ಯದಂಗಡಿ ಇರಬಾರದೆಂಬ ನಿಯಮವನ್ನು ಎತ್ತಿ ಹಿಡಿದು ಸನ್ನದನ್ನೇ ರದ್ದು ಪಡಿಸಬೇಕೆಂದು ಅಬಕಾರಿ ಸಚಿವರವರೆಗೂ ಪ್ರಕರಣ ಸಾಗಿತ್ತು.
ಆ ದೂರಿನ ಅನ್ವಯ ವಿಚಾರಣೆಗಳೂ ಸಹ ನಡೆಯುತ್ತಾ ಸಾಗಿ, ವಿವಾದ ತಾರಕಕ್ಕೇರಿ ಅಬಕಾರಿ ಡಿಸಿಯವರೇ ಖುದ್ದು ಸ್ಥಳಕ್ಕೆ ಬಂದು ಆಳತೆ ಮಾಡಿ ಹೋಗುವಂತಾಗಿದ್ದರೂ ಸಹ ಒಂದಲ್ಲ ಒಂದು ತಕರಾರು ನಡೆದು ಸ್ಥಳಾಂತರ ಕಾರ್ಯ ನಡೆಯದೆ ಹಾಗೆಯೇ ಮುಂದೋಗುತ್ತಿತ್ತು.ಇದೀಗ ಕೊನೆಗೂ ವಿವಾದಿತ ಸ್ಥಳದಲ್ಲಿದ್ದ ಮದ್ಯದಂಗಡಿಗೆ ಕೊನೆಗಾಲ ಬಂದಿದೆ.
ಸನ್ನದನ್ನು ಸ್ಥಳಾಂತರಿಸುವಂತೆ ಹೊರಡಿಸಿರುವ ಆದೇಶ ಪ್ರತಿ. |
ದೂರು ಪ್ರತಿದೂರು, ಹೇಳಿಕೆ ಪ್ರತಿಹೇಳಿಕೆ ಇವುಗಳೆಲ್ಲಾ ವಿಚಾರಣೆ ನಡೆದು ತಹಸೀಲ್ದಾರ್ ವರದಿ, ತಾಲ್ಲೂಕು ಹಾಗೂ ಜಿಲ್ಲಾ ನೊಂದಣಾಧಿಕಾರಿಗಳ ವರದಿ, ಚಿ.ನಾ.ಹಳ್ಳಿ ಅಬಕಾರಿ ನಿರೀಕ್ಷಕರ ವರದಿ,ತಿಪಟೂರು ಅಬಕಾರಿ ಉಪಅಧೀಕ್ಷಕರ ವರದಿ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಇವರುಗಳ ವರದಿ ಆದರಿಸಿ ಅಂತಿಮವಾಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಡಿಸೆಂಬರ್ 28ರ ಒಳಗೆ ಬೇರೊಂದು ನಿರಾಕ್ಷೇಪಣಾ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿದ್ದ ಮದ್ಯದಂಗಡಿ ತೆರವಿಗೆ ಅಬಕಾರಿ ಡಿಸಿಯವರು ಹೊರಡಿಸಿರುವ ಆದೇಶವನ್ನು ಪಟ್ಟಣದ ದೇವಾಲಯ ಸಮಿತಿಯವರು, ಸಂಘ ಸಂಸ್ಥೆಯವರು ,ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್, ಉಪನಿರೀಕ್ಷಕ ಜಗದೀಶ್ ಮತ್ತು ಸಿಬ್ಬಂದಿಯವರು ಶುಕ್ರವಾರ ಖುದ್ದಾಗಿ ಬಂದು ಲಿಖಿತ ಆದೇಶ ಪ್ರತಿಯನ್ನು ಜಾರಿ ಮಾಡಿ ಹೋಗಿದ್ದಾರೆ.
---------
ವಿವಾದಿತ ಸ್ಥಳದಲ್ಲಿದ್ದ ಈ ಮದ್ಯದಂಗಡಿಯಿಂದ 46.4 ಮೀ ಅಂತರದಲ್ಲಿ ಗ್ರಾಮದೇವತೆ ಹುಳಿಯಾರಮ್ಮ ದೇವಿ ದೇವಾಲಯ, 96.3 ಮೀ ಅಂತರದಲ್ಲಿ ಮುಜರಾಯಿಗೆ ಸೇರಿದ ಪುರಾಣ ಪ್ರಸಿದ್ದ ಶ್ರೀರಂಗನಾಥಸ್ವಾಮಿ ಸನ್ನಿಧಿ, 93.7 ಮೀ ದೂರದಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಹಾಗೂ 116 ಮೀ ಅಂತರದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯಿಂದ 116 ಮೀ ಅಂತರದಲ್ಲಿದ್ದು ಕರ್ನಾಟಕ ಅಬಕಾರಿ ಸನ್ನದುಗಳು 1967 ನಿಯಮ 5ರಂತೆ ಅಕ್ಷೇಪಣಾ ಸ್ಥಳದಲ್ಲಿರುತ್ತದೆ.
------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ