ಗ್ರಾಮ ಹಾಗೂ ತಮ್ಮ ಸಮುದಾಯದವರಿಗೆ ತೊಡಕುಗಳಾಗದಂತೆ ಮಾಸ್ತಮ್ಮ ಕಾಯುತ್ತಾಳೆಂಬ ನಂಬಿಕೆಯಿಂದ ಹಿಂದಿನಿಂದ ಪೂರ್ವಿಕರು ರೂಢಿಸಿಕೊಂಡು ಬಂದಿದ್ದ ಮಾಸ್ತಪ್ಪ-ಮಾಸ್ತಮ್ಮನ ಹಬ್ಬವನ್ನು ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ,ಕೆ.ಸಿ.ಪಾಳ್ಯ, ನಂದಿಹಳ್ಳಿ,ಸಾದರಹಳ್ಳಿ, ಸಾಲ್ಕಟ್ಟೆ,ಶೆಟ್ಟಿಕೆರೆ ಗ್ರಾಮಗಳಲ್ಲಿ ಅಗ್ನಿವಂಶಕುರುಬ ಜನಾಂಗದ ಬಂಧುಗಳು ಒಟ್ಟಾಗಿ ಸೇರಿ ಪಟ್ಟಣದ ಬೀರದೇವರಕಟ್ಟೆ ಬಳಿಯ ಮಾಸ್ತಮ್ಮದೇವಿ ಸನ್ನಿಧಾನದಲ್ಲಿ ಶ್ರದ್ದಾಭಕ್ತಿಯಿಂದ ಭಾನುವಾರ ಆಚರಿಸಿದರು.
ಹುಳಿಯಾರಿನ ಬೀರದೇವರೆಕಟ್ಟೆ ಹತ್ತಿರ ಮಾಸ್ತಮ್ಮ ದೇವಿ ದೇವಾಲಯದಲ್ಲಿ ಮಾಸ್ತಮ್ಮ ದೇವಿ ದರ್ಶನಕ್ಕೆ ಸೇರಿದ್ದ ಭಕ್ತ ಸಮೂಹ. |
ಅಗ್ನಿವಂಶ ಕುರುಬ ಸಮುದಾಯದವರು ಮಾಸ್ತಮ್ಮದೇವಿಯನ್ನು ತಮ್ಮ ಮನೆದೇವತೆ ಎಂದು ನಂಬಿದ್ದು, ಕಾರ್ತೀಕ ಮಾಸದಲ್ಲಿ ಈ ಹಬ್ಬದ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಹಬ್ಬದ ಅಂಗವಾಗಿ ಮುಂಜಾನೆಯೇ ಬಿದರೆಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿ ಗಂಗೆ ತಂದು ಮಾಸ್ತಮ್ಮದೇವಿಗೆ ಅಭಿಷೇಕ ಮಾಡಿ ಅಮ್ಮನವರನ್ನು ಅಲಂಕರಿಸಲಾಯಿತು. ಕುರುಬ ಸಮುದಾಯದ ಕುಟುಂಬದವರು ತಮ್ಮ ಹರಕೆಯಂತೆ ಕುರಿ, ಕೋಳಿಯನ್ನು ಬಲಿ ನೀಡಿ, ಆರತಿ ಮಾಡಿ, ಪನಿವಾರ ವಿತರಿಸಿದರು. ಬಲಿ ನೀಡಿದ ಕುರಿ,ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ತಯಾರಿಸಿ ಸಂಜೆ ಪುನ: ದೇವಾಲಯದಲ್ಲಿಗೆ ತಂದು ಎಲ್ಲರೂ ಸೇರಿ ಒಟ್ಟಾಗಿ ಸ್ವೀಕರಿಸಿದರು. ಈ ವೇಳೆ ಗುಡಿಗೌಡರು, ಗ್ರಾಮದ ಮುಖಂಡರು ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ