ಅಗತಾನೆ ಜನಿದ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯ ಪೊದೆಯಲ್ಲಿ ಅನಾಥವಾಗಿ ಮಲಗಿಸಿ ಹೋಗಿರುವ ಹೃದಯ ವಿದ್ರಾವಕ ಘಟನೆ ಹೋಬಳಿಯ ಯಗಚಿಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಹುಳಿಯಾರು ಹೋಬಳಿ ಯಗಚಿಹಳ್ಳಿಯ ರಸ್ತೆ ಬದಿಯಲ್ಲಿ ಪತ್ತೆಯಾದ ನವಜಾತ ಹೆಣ್ಣುಶಿಶು. |
ಹುಳಿಯಾರು-ಶಿರಾ ಮಾರ್ಗದಲ್ಲಿನ ಯಗಚಿಹಳ್ಳಿ ಬಳಿ ಈ ಶಿಶು ಪತ್ತೆಯಾಗಿದ್ದು, ಮಗುವನ್ನು ಪ್ಲಾಸ್ಟಿಕ್ ಕವರೊಂದರಲ್ಲಿ ಹಾಕಿ ಯಾರೋ ಎಸೆದು ಹೋಗಿದ್ದಾರೆ. ಶನಿವಾರ ಬೆಳಿಗ್ಗೆ ಪಾದಚಾರಿಯೊಬ್ಬರು ನೋಡಿದ್ದು ಪೋಲಿಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಪಿಎಸೈ ವೈ.ಘೋರ್ಪಡೆ ಕೂಡಲೇ ತಮ್ಮೊಂದಿಗೆ ಆರೋಗ್ಯ ಇಲಾಖೆಯವರನ್ನು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಗುವಿನ ಮೇಲಿದ್ದ ರಕ್ತ ಹಸಿಯಾಗಿದ್ದು, ಅದರ ಚಲನವಲನಗಳನ್ನು ಗಮನಿಸಿದ ಆರೋಗ್ಯ ಇಲಾಖೆಯವರು ಹೆರಿಗೆಯಾಗಿ ಒಂದೆರೆಡು ಗಂಟೆಯಾಗಿರಬಹುದು ಎಂದಿದ್ದಾರೆ. ಕೂಡಲೇ ಮಗುವನ್ನು ಸ್ವಚ್ಚಗೊಳಿಸಿ ಅಗತ್ಯ ಚಿಕಿತ್ಸೆ ನೀಡಿ ನಂತರ ಮಗುವನ್ನು ಚಿ.ನಾ.ಹಳ್ಳಿಯ ಮಕ್ಕಳ ಕಲ್ಯಾಣ ಇಲಾಖೆಯಲ್ಲಿಗೆ ಕಳುಹಿಸಿ ಕೊಡಲಾಯಿತು. ಅನಾಥವಾಗಿ ಬಿದ್ದಿದ್ದ ಮಗುವನ್ನು ನೋಡಿದ ಗ್ರಾಮಸ್ಥರು ಹೆಣ್ಣುಮಗುವೆಂದು ಇಂತಹ ಹೀನಕೃತ್ಯವೆಸಗಿದ ತಾಯಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮಗು ಯಾರದು, ಇಲ್ಲಿ ಏಕೆ ಎಸೆದು ಹೋಗಿದ್ದಾರೆ ಎಂಬ ಯಕ್ಷಪ್ರಶ್ನೆಗಳು ಎಲ್ಲರ ಮನದಲ್ಲಿ ಕಾಡುತ್ತಿದ್ದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ