ಕಳಪೆ ಈರುಳ್ಳಿ ಬೀಜ ಮಾರಾಟ ಮಾಡಿದ್ದರಿಂದ ಬೆಳೆನಷ್ಟವಾಗಿ ಲಕ್ಷಾಂತರ ರೂಪಾಯಿ ಲುಕ್ಸಾನಾಗಿದೆ ಎಂದು ಆರೋಪಿಸಿ ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ, ಕೆಂಚಯ್ಯನಹಟ್ಟಿ, ಬಡಗೊಲ್ಲರಹಟ್ಟಿ. ಪಿಲಾಜನಹಳ್ಳಿ, ಹಾಲ್ ಮಾದೇನಹಳ್ಳಿ, ನಾಯ್ಕರಕೊಟ್ಟಿಗೆ, ಶೇಷಪ್ಪನಹಳ್ಳಿ ಸೇರಿದಂತೆ
ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ವತಿಯಿಂದ ನಕಲಿ ಈರುಳ್ಳಿ ಬೀಜ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಭಾನುವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು. |
ಅನೇಕ ಗ್ರಾಮಗಳ ನೂರಾರು ರೈತರು ಪರಿಹಾರ ನೀಡಲು ಒತ್ತಾಯಿಸಿ ಹೋಬಳಿಯ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ಎದುರು ಭಾನುವಾರ ಅಂಗಡಿ ಮಾಲೀಕನಿಗೆ ಘೇರಾವು ಮಾಡಿದರು.
ಆರೋಪ: ಈರುಳ್ಳಿ ಬೀಜಕ್ಕೆ ಹಿರಿಯೂರು ಹೆಸರುವಾಸಿಯಾಗಿದ್ದು ಕಳೆದ ಜುಲೈನಲ್ಲಿ ಹಿರಿಯೂರಿನಲ್ಲಿ ಬೀಜ ದೊರೆಯದ ಕಾರಣ ಹುಳಿಯಾರು ಹೋಬಳಿಯ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ಅಂಗಡಿಯಲ್ಲಿ ಸಿಕ್ಕ ಜಿಂದಾಲ್ ಕಂಪನಿಯ ಬೀಜಕ್ಕೆ ದುಬಾರಿ ಬೆಲೆ ತೆತ್ತಿದ್ದೆವು. ಬೀಜ ಉತ್ತಮವಾಗಿ ಮೊಳಕೆಯೊಡೆದು ಬೆಳೆದಿದ್ದರೂ ಫಸಲು ಮಾತ್ರ ಕಮ್ಮಿ ಹಾಗೂ ಕಳಪೆಯದಾಗಿದೆ ಎಂಬುದು ರೈತರ ಆರೋಪ.
ಈರುಳ್ಳಿ ಗಡ್ಡೆ ರೋಗ ಪೀಡಿತವಾಗಿದ್ದು ಕೆಂಪು ಬಣ್ಣಕ್ಕೆ ತಿರುಗಿದೆ ಅಲ್ಲದೆ ಗಾತ್ರ ತೀರ ಕಿರಿದಾಗಿದೆ. ಈ ಈರುಳ್ಳಿ ಪಕೋಡಕ್ಕೂ ಲಾಯಕ್ಕಾಗದೆ ಬಂದಿದ್ದ ಅಲ್ಪಸ್ವಲ್ಪ ಬೆಳೆಯನ್ನು ಮಾರಾಟಕ್ಕೆ ಬೆಂಗಳೂರಿಗೆ ಹೋಗಿ ಅಲ್ಲಿನ ವರ್ತಕರು ಕೂಡ ಕೊಳ್ಳದೆ ಲಾರಿ ಬಾಡಿಗೆಗೂ ಸಮಸ್ಯೆಯಾಯಿತು ಎಂದು ಯಲ್ಲದಕೆರೆ ರೈತ ಹೊರಕೇರಪ್ಪ ಆಕ್ರೋಶವ್ಯಕ್ತಪಡಿಸಿದರು. ಕಳಪೆ ಬೀಜ ಇದಕ್ಕೆ ಕಾರಣವಾಗಿದ್ದು ಅಂಗಡಿಯವರು ನಮ್ಮ ನಷ್ಟವನ್ನು ಭರಿಸಬೇಕೆಂದು ಒತ್ತಾಯಿಸಿದರು.
ಅಂಗಡಿ ಮಾಲೀಕ ಡಿ.ಎ.ವೆಂಕಟಾಚಲ ಈ ಬಗ್ಗೆ ಸ್ಪಷ್ಠನೆ ನೀಡಿದ್ದು, ಬಳ್ಳಾರಿಯ ಭಾರ್ಗವ ಏಜನ್ಸಿಯಿಂದ ಜಿಂದಾಲ್, ಜೆ.ಎಸ್.ಸಿ-ಎನ್-53 ತಳಿಯ ಬೀಜಗಳು ಇದಾಗಿದ್ದು , ಈ ಹಿಂದೆ ಉತ್ತಮ ಬೆಳೆ ಬಂದಿದ್ದ ಕಾರಣ ಮತ್ತೆ ಇದೇ ಬೀಜವನ್ನು ತಂದು ಮಾರಾಟ ಮಾಡಲಾಗಿತ್ತು. ಇದೀಗ ತಲೆದೊರಿರುವ ಸಮಸ್ಯೆಯ ಬಗ್ಗೆ ರೈತರ ಎದುರಿಗೆ ಕಂಪನಿಯ ಮಾರಾಟ ಪ್ರತಿನಿಧಿ ಗೋಪಾಲ್ ಅವರೊಂದಿಗೆ ಮಾತನಾಡಿದ್ದು, ಇದೇ 25 ರಂದು ರೈತರ ಜಮೀನುಗಳಿಗೆ ಭೇಟಿ ನೀಡಿ ನಷ್ಟವಾಗಿದ್ದಲ್ಲಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಇದಕ್ಕೊಪ್ಪದ ರೈತರು ಅದುವರಗೂ ಹಣಕ್ಕೆ ಗ್ಯಾರಂಟಿ ನೀಡಿ ಎಂದಾಗ ಅಂಗಡಿ ಮಾಲೀಕನೇ ಮುಖಂಡರಿಗೆ ಖಾಲಿಚಕ್ ನೀಡುವುದರ ಮುಖಾಂತರ ಸಮಸ್ಯೆಗೆ ತೆರೆ ಎಳೆದಿದರು.
ಪ್ರತಿಭಟನೆಯಲ್ಲಿ ದ್ಯಾಮಣ್ಣ, ಅನಂದ್ ಕುಮಾರ್, ಮಧುಸೂದನ್, ಮಂಜುನಾಥ್, ಗಜೇಂದ್ರ, ಸಿ.ಅವಿನಾಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ