ದೇಹ ದಂಡನೆ, ತ್ಯಾಗ ಬಲಿದಾನ ಹಾಗೂ ಶೋಕದ ಸಂಕೇತವಾಗಿ ಮುಸ್ಲಿಂ ಸಮುದಾಯದವರು ಆಚರಿಸಿಕೊಂಡು ಬಂದಿರುವ ಮೊಹರಂ ಹಬ್ಬವನ್ನು ಹೋಬಳಿಯ ಕೆಂಕೆರೆ,ವೈ.ಎಸ್.ಪಾಳ್ಯ,ದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಮೊಹರಂ ಆಚರಣೆಯ ಅಂಗವಾಗಿ ಅಗ್ನಿಕುಂಡ ಹಾಯುವ ಕಾರ್ಯ ನಡೆಯಿತು. |
ಮಹಮ್ಮದ್ ಪೈಗಂಬರ್ ರ ಮೊಮ್ಮಕ್ಕಳಾದ ಹಸೇನ್ ಹುಸೇನ್‍ರ ಹತ್ಯೆಯ ನೆನಪಿನ ಪ್ರತೀಕವಾಗಿ ಹತ್ತುದಿನಗಳ ಕಾಲ ಹಬ್ಬದ ಆಚರಣೆ ನಡೆಯಲಿದ್ದು, ಮೊದಲು ಚಂದ್ರನನ್ನು ನೋಡಿ ಅಂದು ಅಗ್ನಿಕುಂಡ ಹಾಯುವ ಸ್ಥಳ ಗುರ್ತಿಸಿ, ಪೂಜೆ ಸಲ್ಲಿಸಿ ಅಗ್ನಿ ಹಾಕುತ್ತಾರೆ. ನಂತರ ಹಸೇನ್-ಹುಸೇನ್‍ರ ಪ್ರತೀಕವಾಗಿ ತಮ್ಮ ದೇವರ ಬಿರುದುಗಳನ್ನು ಪ್ರತಿಷ್ಠಾಪಿಸಿ ಮಂಟಪ ಕಟ್ಟಿರುತ್ತಾರೆ. ಅದರ ಜೊತೆಗೆ ಪೀರ್ ದೇವರನ್ನು ಸಹ ಪ್ರತಿಷ್ಠಾಪಿಸಿ ಪೂಜೆ ಪ್ರಾರಂಭಿಸಿ ನಿತ್ಯ ಊರಿನ ಬೀದಿಗಳಲ್ಲಿ ಧೂಪದ ಹಾಗೂ ಫೀರ್ ದೇವರ ಮೆರವಣಿಗೆ ಹಾಗೂ ಅಳ್ಳೆಬೊವ ವೇಷತೊಟ್ಟ ವ್ಯಕ್ತಿಯೊಂದಿಗೆ ಗ್ರಾಮದ ಮನೆಮನೆಗಳಿಗೆ ತೆರಳಿ ಕಾಣಿಕೆ,ತೆಂಗಿನಕಾಯಿ ಪಡೆಯುವ ಕಾರ್ಯ ಮಾಡುತ್ತಾರೆ.
ಇದೇ ಸಂಪ್ರದಾಯದಂತೆ ಮೊಹರಂ ಕಡೇದಿನದ ಮುನ್ನಾದಿನವಾದ ಸೋಮವಾರ ಸಂಜೆ ಅಗ್ನಿಕುಂಡ ಹಾಯುವುದು ಹಾಗೂ ಚಾಟಿಯಿಂದ ಹೊಡೆಸಿಕೊಳ್ಳುವ ಮೂಲಕ ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು. ತಮಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹರಕೆಯೊತ್ತ ಯುವಕರು ಫಕೀರರಾಗಿ ಅಗ್ನಿಕುಂಡ ಹಾಯುವಲ್ಲಿ ಮುಂದಾಗಿ, ತಮ್ಮ ದೇವರ ಬಿರುದುಗಳನ್ನು ಹಿಡಿದು ಹಸೇನ್ ಹುಸೇನ್‍ರನ್ನು ಪ್ರತಿಷ್ಠಾಪಿಸಿದ್ದ ಮಂಟಪದ ಜೊತೆ ಅಗ್ನಿಕುಂಡದ ಜಾಗದಲ್ಲಿಗೆ ಬಂದು ಪೂಜೆ ಸಲ್ಲಿಸಿ, ಜಯಕಾರ ಹಾಕುತ್ತಾ ಅಗ್ನಿಕುಂಡವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ತಮಟೆಯ ಜೋರಾದ ಎರಡೇಟಿನ ನಾದದೊಂದಿಗೆ ಅಗ್ನಿಕುಂಡ ಹಾಯ್ದರು. ಆದರೆ ಮಹಿಳೆಯರು ಮಾತ್ರ ಅಗ್ನಿ ಹಾಯದೆ, ಹಿಂದಿನ ಸಂಪ್ರದಾಯದಂತೆ ಅಗ್ನಿಕುಂಡಕ್ಕೆ ಉಪ್ಪು ಹಾಕಿ ನಮಸ್ಕರಿಸಿಕೊಂಡರು.
ಅಗ್ನಿಕುಂಡ ಹಾಯ್ದ ನಂತರ ಮೆರವಣಿಗೆ ಪ್ರಾರಂಭಿಸಿ ಊರಿನ ಹಿಂದೂ ದೇವಾಲಯದಲ್ಲಿಗೆ ಹೋಗಿ ಅಲ್ಲಿ ಕೆಲಕಾಲ ಚಾಟಿಯಿಂದ ಮೈಗೆ ಹೊಡೆದುಕೊಳ್ಳುವ ಮೂಲಕ ದೇಹದಂಡನೆ ಮಾಡಿ ನಂತರ ಮಕ್ಕಳು,ಯುವಕರೆಲ್ಲಾ ಸೇರಿ ಕುಣಿಯುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಕೆಲ ಹಿಂದೂಗಳ ಮನೆಯವರು ಸಕ್ಕರೆ,ಕಡ್ಲೆ, ಪುರಿಯನ್ನು ಎಡೆಯಾಗಿ ನೀಡಿ ಮುಸ್ಲಿಂ ಗುರುಗಳಿಂದ ತಿದ್ದಿಸಿಕೊಂಡಿದ್ದು ಕಂಡು ಬಂತು.
ಈವೇಳೆ ಗ್ರಾಮದ ಮುಸ್ಲಿಂ ಮುಖಂಡರು,ಯುವಕರು ಹಾಗೂ ಹುಳಿಯಾರಿನ ಕೆಲ ಮುಸ್ಲಿಂ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು, ಸಡಗರದಿಂದ ಹಬ್ಬದ ಆಚರಣೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ