ಕೃಷಿಸಾಲವನ್ನು ದುಂದು ವೆಚ್ಚ ಮಾಡದೆ, ಕೃಷಿ ಚಟುವಟಿಕೆಗಳಿಗೇ ಬಳಸಿ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ತಿಳಿಸಿದರು.
ಹುಳಿಯಾರು ಹೋಬಳಿ ಗಾಣಧಾಳು ಪ್ರಾ.ಕೃ.ಸ.ಸಂಘದಲ್ಲಿ ಸಿಂಗದಹಳ್ಳಿ ರಾಜ್ ಕುಮಾರ್ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡಿದರು. |
ಹೋಬಳಿಯ ಗಾಣಧಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದಿಂದ ಕೃಷಿಗಾಗಿ ಪಡೆದ ಸಾಲವನ್ನು ರೈತರು ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಇನ್ನಿತರ ಕೃಷಿಗೆ ಪೂರಕವಾದ ವಸ್ತುಗಳನ್ನು ಕೊಂಡುಕೊಳ್ಳಲು ಉಪಯೋಗಿಸಿಕೊಂಡು, ಫಸಲು ಬಂದ ಮೇಲೆ ಸಾಲವನ್ನು ಮರುಪಾವತಿ ಮಾಡಿ ಎಂದರು. ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕೃಷಿಗಾಗಿ ಸಾಲ ಪಡೆದ ರೈತ ಮರಣ ಹೊಂದಿದಲ್ಲಿ ರೂ. ಒಂದು ಲಕ್ಷದವರೆಗೆ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ಮಾತನಾಡಿ ಬಡ್ಡಿ ರಹಿತ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕ್ ನೀಡುತ್ತಾ ಬಂದಿರುವುದು ರೈತರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಸುಮಾರು ನೂರು ರೈತರಿಗೆ ಹಾಗೂ ಏಳು ಸ್ವಸಹಾಯ ಗುಂಪುಗಳಿಗೆ ಸುಮಾರು ರೂ.45 ಲಕ್ಷ ಸಾಲ ವಿತರಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಜಿ.ಟಿ.ಜಯದೇವಪ್ಪ, ಆರ್.ಕರಿಯಣ್ಣ, ತ್ಯಾಗರಾಜು, ಲಚ್ಚಾನಾಯ್ಕ, ಎಂ.ಎಲ್.ರಾಮಯ್ಯ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ರಂಗಸ್ವಾಮಿ, ದಯಾನಂದ್ ಇತರರು ಇದ್ದರು. ಸಂಘದ ವ್ಯವಸ್ಥಾಪಕ ಪಾಲಾಕ್ಷಯ್ಯ ಸ್ವಾಗತಿಸಿ, ಮಲ್ಲೇಶ್ ನಿರೂಪಿಸಿ, ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ