ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಆದಿಶಕ್ತಿ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ದೇವಿ , ಶ್ರೀಬಸವೇಶ್ವರ ಸ್ವಾಮಿ ಹಾಗೂ ಮೈಲಾರದೇವರ ಬೆಟ್ಟದ ಚೌಡಮ್ಮನವರ ಸಮ್ಮುಖದಲ್ಲಿ ಮಂಗಳವಾರದಂದು ಅಪಾರ ಸಂಖ್ಯೆ ಭಕ್ತರ ಶ್ರದ್ಧಾಭಕ್ತಿಯ ನಡುವೆ ವಿಶೇಷವಾಗಿ ಮಹಾಚಂಡಿಕಾ ಹೋಮ ನಡೆಯಿತು.
ಹುಳಿಯಾರು ಹೋಬಳಿ ಟಿ.ಎಸ್.ಹಳ್ಳಿ ಯಲ್ಲಿ ನಡೆದ ಮಹಾಚಂಡಿಕಾ ಹೋಮಕ್ಕೆ ಒಣಮೆಣಸಿನಕಾಯಿಯನ್ನು ಸಮರ್ಪಿಸುತ್ತಿರುವುದು. |
ಹುಳಿಯಾರು ಹೋಬಳಿ ಟಿ.ಎಸ್.ಹಳ್ಳಿ ಯಲ್ಲಿ ನಡೆದ ಮಹಾಚಂಡಿಕಾ ಹೋಮದ ಪೂರ್ಣಾಹುತಿಗೆ ಪೂಜಾದ್ರವ್ಯಗಳನ್ನು ಸಮರ್ಪಿಸಲು ಗ್ರಾಮಸ್ಥರು ಸರತಿ ಸಾಲಿನಲ್ಲಿ ನಿಂತಿರುವುದು. |
ಚೌಡೇಶ್ವರಿದೇವಿಯ ದುರ್ಗಿಹೋಮದ ಮಂಡಲ ಪೂಜೆ ಅಂಗವಾಗಿ ಕಳೆದ 48 ದಿನದಿಂದಲೂ ವಿಶೇಷ ಪೂಜೆ ನಡೆಯುತ್ತ ಬಂದಿದ್ದು, ಸೋಮವಾರದಂದು ಗಣಪತಿಹೋಮ,ರುದ್ರಹೋಮ ನಡೆದಿತ್ತು. ಚಂಡಿಕಾ ಮಾತೆಯನ್ನು ಶ್ರದ್ಧಾಭಕ್ತಿಯಿಂದ ನಿಷ್ಕಲ್ಮಶ ಮನಸ್ಸು ಹಾಗೂ ಏಕಾಗ್ರಚಿತ್ತದಿಂದ ಧ್ಯಾನಿಸಿದರೆ ಭಕ್ತರಿಗೆ ಮಾತ್ರವಲ್ಲ ಈಡಿ ಲೋಕಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನಲೆಯಲ್ಲಿ ಈ ದಿನ ಮಹಾಚಂಡಿಕಾಹೋಮ ಆಯೋಜಿಸಲಾಗಿತ್ತು. ಹೋಮಕ್ಕೆ ಎಲ್ಲೆಡೆ ವಿವಿಧ ಬಗೆಯ ತೈಲ, ತುಪ್ಪಾ, ಎಲ್ಲಾ ರೀತಿಯ ದವಸ ಧಾನ್ಯ, ವಿವಿಧರೀತಿಯ ಹಣ್ಣು ಹೂ ಸೇರಿದಂತೆ ಇನ್ನಿತರ ಪರಿಕರಗಳನ್ನು ಉಪಯೋಗಿಸುತ್ತಾರೆ. ಆದರೆ ಇಲ್ಲಿ ನಡೆದ ಹೋಮದಲ್ಲಿ ಈ ಎಲ್ಲಾ ವಸ್ತುಗಳ ಜೊತೆಗೆ ಅರ್ಧ ಕ್ವಿಂಟಾಲ್ ಒಣಮೆಣಸಿನಕಾಯಿಯನ್ನು ಬಳಸಿ ಹೋಮಕುಂಡಕ್ಕೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಹೋಮಕ್ಕೆ ವೈದಿಕರು ಮೆಣಸಿನಕಾಯಿ ಸಮರ್ಪಿಸುತ್ತಿದ್ದರೆ ಅದನ್ನು ಕಂಡ ಭಕ್ತರಲ್ಲಿ ಒಂದೆಡೆ ಆಶ್ಚರ್ಯ ಹಾಗೂ ಕುತೂಹಲ ಮನೆ ಮಾಡಿತ್ತು.
ಹೋಮದ ಅಂಗವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ದೇವಿಗೆ ಕುಂಕುಮಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ವಿದಿವಿಧಾನಗಳನ್ನು ನಡೆಸಲಾಗಿತ್ತು. ಸೀಗೇಹಳ್ಳಿ ನಾಗರಾಜಚಾರ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಮಹಾಚಂಡಿಕಾ ಹೋಮ ಪ್ರಾರಂಭಗೊಂಡು ವಿವಿಧ ಹೋಮಾದಿ ಸಹಿತ ಪೂಜಾಕೈಂಕರ್ಯ ನಡೆಸಲಾಯಿತು. ನಂತರ ದೇವಾಲಯದ ಮುಂಭಾಗದಲ್ಲಿ ಕುಂಬಳಕಾಯಿ ಹೊಡೆದು ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಲಾಯಿತು. ಮುತೈದೆಯರಿಗೆ ಬಾಗೀನ ನೀಡಿ,ನಂತರ ಮಹಾಮಂಗಳಾರತಿ ನಡೆಸಲಾಯಿತು. ಆಗಮಿಸಿದ್ದ ಭಕ್ತರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗುಡಿಗೌಡರಾದ ಪರಮೇಶ್ವರಯ್ಯ,ಚಂದ್ರಯ್ಯ,ದೊಡ್ಡಯ್ಯ,ಜಗದೀಶಯ್ಯ,ಹನುಮಯ್ಯ , ಕೆಂಚಪ್ಪ , ತಾಂಡವಾಚಾರ್ , ನಾಗರಾಜಚಾರ್ ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ