ಹುಳಿಯಾರು ಹೋಬಳಿ ವ್ಯಾಪ್ತಿಯ ಸಾಕಷ್ಟು ರೈತರು ಹಿಂಗಾರು ಬೆಳೆಯಾದ ರಾಗಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಹಾಗೆ ಸಾವೆಗೂ ಅಷ್ಟೇ ಪ್ರಾಶಸ್ತ್ಯ ಕೊಟ್ಟು ಬೆಳೆಯುವ ಪರಿಪಾಟವಿದ್ದು, ಈ ಬಾರಿ ತಡವಾಗಿ ಮಳೆಯಾದ ಕಾರಣ ರಾಗಿ ಕೈಕೊಟ್ಟರೂ ಸಹ ಹಿಂಗಾರುಬೆಳೆಯಾಗಿ ಸಾವೆ ರೈತರಿಗೆ ನೆರವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೆರ್ ನಷ್ಟು ಸಾವೆ ಬಿತ್ತಲಾಗಿದ್ದು ಉತ್ತಮವಾಗಿ ಬೆಳೆ ಬಂದಿದ್ದು, ಭರದಿಂದ ಕಟಾವು ಸಾಗಿದ್ದು ಅನ್ನದಾತನ ಕೈಹಿಡಿದಿದೆ.
![]() |
ಹುಳಿಯಾರಿ ಎಪಿಎಂಸಿಯ ಅಂಗಡಿಯೊಂದರಲ್ಲಿ ಸಾವೆ ಮಾರಾಟ ಮಾಡುತ್ತಿರುವ ರೈತ. |
ರಾಗಿ,ಸಾವೆ, ನವಣೆ,ಸಜ್ಜೆ ಮುಂತಾದವುಗಳಲ್ಲಿ ಅಧಿಕ ಪೋಷ್ಟಿಕಾಂಶವಿದ್ದು ಸಿರಿಧಾನ್ಯವೆಂದು ಪರಿಗಣಿಸಿರುವ ಸಾವೆ ಎಲ್ಲಾ ಹಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟಬಾಧೆಯಿಂದ ಮುಕ್ತವಾಗಿರುವ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಲಾಭದ ಬೆಳೆಯಾಗಿದೆ. ಇದನ್ನು ತಾಲ್ಲೂಕಿನ ಹುಳಿಯಾರು, ಶೆಟ್ಟಿಕೆರೆ ಹೋಬಳಿ ಸೇರಿದಂತೆ ಹೊಸದುರ್ಗ, ಕಡೂರು,ತಿಪಟೂರು,ಅರಸೀಕೆರೆ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಅಧಿಕ ಪೋಷ್ಠಿಕಾಂಶವಿರುವ ಸಾವೆ ಬಳಸಿದಲ್ಲಿ ಡಯಾಬಿಟಿಸ್, ಬಿಪಿ, ಬೊಜ್ಜು ಮುಂತಾದವುಗಳು ನಿಯಂತ್ರಣಕ್ಕೆ ಬರುತ್ತವೆ. "ಸಾವಕ್ಕಿ ಅನ್ನ ಉಂಡರೆ ಮೊಣಕಾಲು ನೋವು ಇಲ್ಲ " ಎಂಬ ಮಾತು ರೈತರಲ್ಲಿ ಚಾಲ್ತಿಯಲ್ಲಿದ್ದು , ಸಾವೆ ಬೆಳೆಯನ್ನು ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡಲಾಗುವುದಿದ್ದು , ಕಡಿಮೆ ಮಳೆಯಲ್ಲಿ ಬೆಳೆಯುವ ಇವು ಹೆಚ್ಚಿನ ಆರೈಕೆಯಿಲ್ಲದೆ, ರೋಗರುಜಿನಿ ಭಯವಿಲ್ಲದ ಬೆಳೆಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ರಾಗಿ ಪ್ರತಿಕ್ವಿಂಟಾಲ್ ಗೆ 1300 ರೂ ಹಾಗೂ ಸಾವೆ ಪ್ರತಿಕ್ವಿಂಟಾಲ್ ಗೆ 2300ರೂ ಇದ್ದು, ರಾಗಿಗಿಂತ ಸಾವೆಗೆ ಅಧಿಕ ಬೆಲೆಯಿದ್ದರೂ ಸಹ ಈ ಭಾಗದ ರೈತರು ಸಾವೆಗಿಂತ ಹೆಚ್ಚಾಗಿ ರಾಗಿ ಬೆಳೆಯತ್ತ ತಮ್ಮ ಒಲವು ತೋರುತ್ತಾರೆ. ರಾಗಿನಂತರ ನವಣೆ ಬದಲು ಸಾವೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಅಧಿಕ ಬೆಲೆ ಬಂದರೂ ಕೂಡ ಸಾವೆ ಬದಲು ರಾಗಿಗೆ ಒತ್ತುಕೊಡಲು ಕಾರಣ ಸಾವೆ ಹುಲ್ಲನ್ನು ರಾಸುಗಳಿಗೆ ಮೇವಾಗಿ ಹಾಕುವುದಿಲ್ಲ. ರಾಗಿಹುಲ್ಲಿನಜೊತೆ ಸೇರಿಸಿ ಹಾಕಬೇಕಿದೆ. ಇದರಿಂದ ಸಾವೆಗೆ ಹೆಚ್ಚು ಬೆಲೆಯಿದ್ದರೂ ರಾಸುಗಳ ಮೇವಿನ ದೃಷ್ಠಿಯಿಂದ ಈ ಭಾಗದಲ್ಲಿ ರಾಗಿಗೆ ಸಾವೆಗಿಂತ ಅಧಿಕ ಪ್ರಾಶಸ್ತ್ಯವಿದೆ.
ಹುಳಿಯಾರು ಮಾರುಕಟ್ಟೆ ಸಾವೆಗೆ ಹೆಸರುವಾಸಿಯಾಗಿದ್ದು ರಾಗಿಯಷ್ಟೇ ಬೇಡಿಕೆ ಸಾವೆಗಿದ್ದು ರಾಗಿಗಿಂತಲೂ ಅಧಿಕ ಬೆಲೆ ಸಾವೆಗೆ ಸಿಗುತ್ತಿದೆ.ಕಳೆದೊಂದು ವಾರದಿಂದ ಮಾರುಕಟ್ಟೆಗೆ ಸಾವೆ ಆವಕ ಆರಂಭವಾಗಿದ್ದು , ಸುಮಾರು 900 ಕ್ವಿಂಟಾಲ್ ಸಾವೆ ಮಾರಾಟವಾಗಿದ್ದು, ಗರಿಷ್ಠ 2500, ಕನಿಷ್ಠ 2300 ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ. ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ,ಮಾರ್ಚ್‍ವರೆಗೆ ಸಾವೆಯ ಆವಕ ಹೆಚ್ಚಿರುತ್ತದೆ ಎನ್ನುತ್ತಾರೆ ಇಲ್ಲಿನ ರವಾನೆದಾರರಾದ ಸಪ್ತಗಿರಿ ಟ್ರೇಡರ್ಸ್ ನ ಮಾಲೀಕ ಎಲ್.ಆರ್. ಬಾಲಾಜಿ.ಮಾರುಕಟ್ಟೆಯಲ್ಲಿ 12 ರಿಂದ 15 ಮಂದಿ ಸಾವೆ ಖರೀದಿದಾರರಿದ್ದು , ಒಬ್ಬ ರವಾನೆದಾರರಿದ್ದು ಇಲ್ಲಿ ಖರೀದಿಯಾಗುವ ಬೆಳೆ ಪ್ರಮುಖವಾಗಿ ಕೊಲ್ಲಾಪುರ,ಪೂನಾ,ಶಹಾಪುರ,ನಾಸಿಕ್, ತಮಿಳುನಾಡಿನ ಥೇಣಿ ಭಾಗಕ್ಕೆ ರವಾನೆಯಾಗುತ್ತದೆ.
ಒಟ್ಟಾರೆ ಈ ಭಾಗದಲ್ಲಿ ಸಾಂಪ್ರದಾಯಕ ಬೆಳೆಯಾದ ರಾಗಿ ಬದಲು ದುಪ್ಪಟ್ಟು ಬೆಲೆಯ ಸಾವೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ನಡೆದಲ್ಲಿ , ಮಳೆಯಿಲ್ಲದಿದ್ದರೂ ಬೆಳೆ ನಷ್ಟವಿಲ್ಲದೆ ಕೈಹತ್ತುವ ಸಾವೆ ರೈತರನ್ನು ಕೃಹಿಡಿಯಲಿದೆ.
------------
ಸಾವೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ದು ತಿಮ್ಲಾಪುರ ಸೇರಿದಂತೆ ಹೋಬಳಿಯ ಇತರೆಡೆ 50 ಹೆಕ್ಟೇರ್ ಪ್ರದೇಶಕ್ಕಾಗುವಷ್ಟು ಸಾವೆಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿ ಸಾವೆ ಬೆಳೆಯುವಂತೆ ರೈತರನ್ನು ಕೃಷಿ ಇಲಾಖೆ ಮೂಲಕ ಉತ್ತೇಜಿಸಲಾಗಿದೆ : ತಿಪ್ಪೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ