ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಬುಧವಾರದಂದು ಅಪಾರಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗೊರಪ್ಪಗಳ ದೋಣಿ ಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಹುಳಿಯಾರು ಸಮೀಪದ ಟಿ.ಎಸ್.ಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಗೊರಪ್ಪಗಳ ಸಮ್ಮುಖದಲ್ಲಿ ನಡೆದ ದೋಣಿಸೇವೆ. |
ದೋಣಿ ಸೇವೆಯ ಅಂಗವಾಗಿ ಚೌಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದ ಮುಂಭಾಗದಲ್ಲಿ ಕರಿಕಂಬಳಿ ಹಾಸಿ ಅದರ ಮೇಲೆ ಬಾಳೆ ಎಲೆ ಹಾಗೂ ಗೊರಪ್ಪಗಳ ದೋಣಿಯನ್ನಿಟ್ಟು, ಬಾಳೆಹಣ್ಣು ಸೇರಿದಂತೆ ಇನ್ನಿತರ ಪದಾರ್ಥಗಳಿಂದ ಸಿದ್ದಗೊಳಿಸಿದ ಪ್ರಸಾದವನ್ನು ತುಂಬಿ ಪೂಜೆ ಸಲ್ಲಿಸಲಾಯಿತು. ಮೈಲಾರದೇವರ ಪ್ರತಿಸ್ವರೂಪ ಎಂದೇ ನಂಬಿರುವ ಗೊರಪ್ಪಗಳ ಹಣೆಗೆ ಅರಿಶಿನದ ತಿಲಕವನ್ನಿಟ್ಟು ಪೂಜೆಸಿ, ಜೈಕಾರ ಹಾಕಲಾಯಿತು. ನಂತರ ಗೊರಪ್ಪಗಳಿಗೆ ಮೈಲಾರದೇವರ ಅವಾಹನೆಯಾಗಿ ಕುಪ್ಪಳಿಸುತ್ತಾ ಅಚ್ ಅಚ್ ಎಂದು ಸದ್ದು ಮಾಡಿಕೊಂಡು ಎಡೆಹಾಕಿದ್ದ ಸ್ಥಳವನ್ನು ಪ್ರದಕ್ಷಿಣೆ ಹಾಕಿದರು. ನಂತರ ವಾದ್ಯಕ್ಕೆ ತಕ್ಕಂತೆ ಕುಪ್ಪಳಿಸುತ್ತಾ ದೋಣಿಯಲ್ಲಿ ತುಂಬಿದ್ದ ಪ್ರಸಾದವನ್ನು ಸ್ವೀಕರಿಸಿದರು.
ಗೊರಪ್ಪಗಳು ಅತ್ತಿಂದಿತ್ತ ವೀರಾವೇಶದಿಂದ ಕುಪ್ಪಳಿಸುತ್ತಿದ್ದನ್ನು ದೋಣಿ ತುಂಬಿಸುವ ಸೇವೆಯಲ್ಲಿ ನೆರೆದಿದ್ದ ಜನ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಈವೇಳೆಗೆ ದೇವಾಲಯ ಸಮಿತಿಯವರು, ಊರಿನ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ