ಹುಳಿಯಾರು ಪಟ್ಟಣಕ್ಕೆ ಸುಸ್ಸಜ್ಜಿತ ಬಸ್ ನಿಲ್ದಾಣ, ವಿಜ್ಞಾನ ಕಾಲೇಜು, ಗ್ರಾ.ಪಂ ನ್ನು ಪಟ್ಟಣ ಪಂಚಾಯ್ತಿಯಾಗಿಸುವಂತೆ, ಕೆರೆ ಅಂಗಳದ ನಿರಾಶ್ರಿತರಿಗೆ ವಸತಿ ಕಲ್ಪಿಸಿಕೊಡುವಂತೆ, ರೈತಸಂಘಕ್ಕೆ ನಿವೇಶನ ಮಂಜೂರು ಮಾಡಿಸುವಂತೆ, ಪೋಲಿಸ್ ವಸತಿಗೃಹಗಳ ನಿರ್ಮಾಣ, ಗಾಂಧಿಭವನಕ್ಕೆ ಬೋಜನಶಾಲೆ ನಿರ್ಮಾಣ,ಅಲೆಮಾರಿ ಜನಾಂಗಕ್ಕೆ ನಿವೇಶನ ಸೇರಿದಂತೆ ಇನ್ನಿತರ ಬೇಡಿಕೆಗಳ ಹಾಗೂ ಅನೇಕ ಸಮಸ್ಯೆಗಳ ಸರಮಾಲೆಯನ್ನೇ ಸಂಸದ ಮುದ್ದಹನುಮೇಗೌಡರ ಮುಂದೆ ಸಾರ್ವಜನಿಕರು ಬಿಚ್ಚಿಟ್ಟರು.
ಹುಳಿಯಾರಿನಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಮುದ್ದಹನುಮೇಗೌಡರು ಉದ್ಘಾಟಿಸಿದರು. |
ಸಂಸರದ ನಡೆ ಹಳ್ಳಿಯಡೆಗೆ ಕಾರ್ಯಕ್ರಮದಂತೆ ಹುಳಿಯಾರಿಗೆ ಗುರುವಾರ ಸಂಜೆ ಆಗಮಿಸಿದ್ದ ಸಂಸದರಿಗೆ ಇಲ್ಲಿನ ಸಂಘಸಂಸ್ಥೆಯವರು, ಸಾರ್ವಜನಿಕರು ತಮ್ಮ ಹತ್ತಾರು ಸಮಸ್ಯೆಗಳನ್ನೊಳಗೊಂಡ ಅಹವಾಲುಗಳನ್ನು ಸಲ್ಲಿಸಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದರು ಮಾತನಾಡಿ, ಹುಳಿಯಾರಿನಲ್ಲಿನ ಸಮಸ್ಯೆಗಳ ಬಗ್ಗೆ ತಮಗೆ ತಿಳಿದಿದೆ ಅವುಗಳನ್ನು ಹಂತಹಂತವಾಗಿ ಬಗೆಹರಿಸುವ ಕಡೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದರು. ಸಂಸದರಾಗಿ ಗೆದ್ದಮೇಲೆ ಜನರ ಸಂಪರ್ಕಕ್ಕೆ ಸಿಗುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಲು ತಾವು ಹೊರಟಿದ್ದು, ಇದೇನಪ್ಪಾ ಮುದ್ದುಹನುಮೇಗೌಡರು ಈರೀತಿ ತಮ್ಮ ಗ್ರಾಮಕ್ಕೆ ಬರುತ್ತಾರೆ ಎಂಬಂತಾಗುವಂತೆ ಸದಾ ನಿಮ್ಮ ಗ್ರಾಮಗಳಿಗೆ ಬರುತ್ತೇನೆ, ನಿಮ್ಮಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕ ಪರಿಹಾರಗಳನ್ನು ಮಾಡಿಕೊಡುವೆ ಎಂಬ ಭರವಸೆ ನೀಡಿದರು.
ಸಂಸದರಾದವರು ದೆಹಲಿಯಲ್ಲಿರದೇ ಕ್ಷೇತ್ರದ ಹಳ್ಳಿಗಳಿಗೂ ಬಂದು ಕೆಲಸ ಮಾಡಬಹುದು ಎಂಬುದನ್ನು ತೋರಿಸುವ ಕಾರ್ಯಕ್ಕೆ ತಾನು ಮುಂದಾಗಿದ್ದು ಸರ್ಕಾರವೆ ಜನರ ಮುಂದೆ ಬರಬೇಕೆ ಹೊರತು ಜನಗಳು ಅಧಿಕಾರಿಗಳ ಹಿಂದೆ ಸುತ್ತಸುತ್ತುವುದಲ್ಲ ಎಂದರು. ನಿಮ್ಮಿಂದ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅಯಾಯಾ ಇಲಾಖೆಗಳಿಗೆ ಅವುಗಳನ್ನು ಕಳುಹಿಸಿ ಅದಕ್ಕೆ ಸಂಬಂಧಿಸಿದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೆ ಜೊತೆಯಲ್ಲೇ ಇದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಮಗೆ ಬರುವ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರದಲ್ಲೇ ಬಗೆಹರಿಸುವಂತೆ ಸೂಚಿಸಿದರು.
ಈ ವೇಳೆ ತಹಶೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣಮೂರ್ತಿ, ಪಿಡಿಓ ರಮೇಶ್, ಜಿ.ಪಂ.ಸದಸ್ಯೆ ಮಂಜುಳಾ,ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೆಂಕಟಾಛಲಪತಿಶೆಟ್ರು, ಮುಖಂಡರಾದ ಸಾಸಲು ಸತೀಶ್, ಸಿದ್ರಾಮಣ್ಣ, ರಹಮತ್ತುಲ್ಲಾ, ಹೊಸಳ್ಳಿ ಅಶೋಕ್, ಪ್ರಸನ್ನಕುಮಾರ್ ಸೇರಿದಂತೆ ಇತರರಿದ್ದರು. ಹುಳಿಯಾರು ಪಟ್ಟಣ ಸೇರಿದಂತೆ ದೊಡ್ಡಬಿದರೆ, ಬರಕನಹಾಲ್, ಗಾಣಧಾಳು, ಕೆಂಕೆರೆ,ಯಳನಡು, ಕೋರಗೆರೆ, ತಿರುವiಲಾಪುರ ಗ್ರಾಮಗಳಿಗೆ ಭೇಟಿಯಿತ್ತ ಸಂಸದರಿಗೆ ಎಲ್ಲೆಡೆ ಕಾದಿದ್ದ ಜನರು ನೂರಾರು ಸಮಸ್ಯೆಗಳನ್ನೊಳಗೊಂಡ ಅನೇಕ ಅಹವಾಲುಗಳು ನೀಡಿದ್ದು, ಅವುಗಳ ಬಗ್ಗೆ ಶೀಘ್ರ ಗಮನಹರಿಸಿ ಪರಿಹರಿಸುವ ಭರವಸೆ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ