ಹಿಂಗಾರು ಬೆಳೆಗಳಾದ ರಾಗಿ,ಜೋಳ,ಸಾಮೆ ಸೇರಿದಂತೆ ಇನ್ನಿತ ಬೆಳೆಗಳು ಇನ್ನೇನು ಕಟಾವಿಗೆ ಬರಲಿದ್ದು ಸದ್ಯ ಹೋಬಳಿಯ ಸುತ್ತಮುತ್ತಲ ಕೆಲ ಭಾಗಗಳಲ್ಲಿ ಈಗಾಗಲೇ ಸಾಮೆ ಬೆಳೆ ಕಟಾವು ಮಾಡುತ್ತಿದ್ದು. ಇದರೊಂದಿಗೆ ರಸ್ತೆಗಳೆಲ್ಲಾ ಕಣಗಳಾಗಿ ಒಕ್ಕಣೆಯನ್ನು ರಸ್ತೆಯಲ್ಲೇ ಮಾಡಲು ರೈತರು ಮುಂದಾಗಿದ್ದಾರೆ.
ಹುಳಿಯಾರು-ಚಿ.ನಾ.ಹಳ್ಳಿ ಮಾರ್ಗ ಮಧ್ಯದ ಹೆದ್ದಾರಿಯಲ್ಲಿ ಸಾಮೆಹುಲ್ಲನ್ನು ಹಾಕಿ ಒಕ್ಕಣೆ ಮಾಡುತ್ತಿರುವುದು. |
ಕಣಕ್ಕೂ ರೈತರಿಗೂ ಅವಿನಾಭಾವ ಸಂಬಂಧವಿದ್ದು, ಈ ಹಿಂದೆ ಒಕ್ಕಣೆ ಮಾಡಲು ತಮ್ಮಹೊಲದಲ್ಲೇ ಸಗಣಿಬಗ್ಗಡದಿಂದ ಕಣಗಳನ್ನು ಮಾಡಿಕೊಂಡು ರೋಣುಗಲ್ಲುನ್ನು ಬಳಸಿ ಬೆಳೆಯ ತೆನೆಯಲ್ಲಿ ಮುಡುಪಾಗಿದ್ದ ಕಾಳುಗಳನ್ನು ಬೇರ್ಪಡಿಸಿ ಒಂದೆಡೆ ಶೇಖರಿಸಿಕೊಳ್ಳುತ್ತಿದ್ದರು. ಇಂತಹ ಒಂದು ಸಂಸ್ಕೃತಿ ಕೂಲಿ ಆಳುಗಳ ಸಮಸ್ಯೆ ಹಾಗೂ ದನಗಳಿಲ್ಲದ ಕಾರಣ ಮರೆಯಾಗುತ್ತಿದೆ.
ಕೆಲವರ ಬಳಿ ರೋಣಗಲ್ಲು ಇದ್ದರೂ ಸಹ ಮಳೆಯಿಲ್ಲದೆ ಮೇವಿನ ಸಮಸ್ಯೆ ತಲೆದೂರಿ ರೈತರ ಬಳಿ ರಾಸುಗಳ ಸಂಖ್ಯೆ ಕ್ಷಿಣಿಸಿದೆ. ಬೇಸಾಯ ಸಹಿತ ಟ್ರ್ಯಾಕ್ಟರ್ ಮೂಲಕವೇ ಸಾಗುತ್ತಿದ್ದು , ಹುಲ್ಲು ತುಳಿಸುವ ಕಾರ್ಯ ಸಹ ಕೆಲವೆಡೆ ಇದರಲ್ಲೇ ನಡೆಯುತ್ತಿದೆ. ರೈತರು ಜೋಡಿಎತ್ತಿಲ್ಲದೆ ಕೃಷಿಗೆ ಬೇಕಾದ ಸಲಕರಣೆಗಳನ್ನು ಹೊಂದಿಸಲಾಗದೆ ತಾವು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಲು ಕಣದ ಬದಲು ಡಾಂಬರು ರಸ್ತಯನ್ನೇ ಅವಲಂಬಿಸುವ ಮೂಲಕ ಹಿಂದಿನಿಂದ ನಡೆದುಕೊಂಡು ಬಂದ ಕಣದ ಸಂಸ್ಕøತಿಯನ್ನು ಕೈಬಿಟ್ಟಿದ್ದಾರೆ.
ಮೂರ್ನಾಲ್ಕು ಕುಟುಂಬಗಳ ರೈತರು ಒಂದೆಡೆ ಕಣ ಮಾಡಿ ಅದರಲ್ಲಿ ತಾವು ಬೆಳೆದ ಬೆಳೆಗಳನ್ನು ಹಾಕಿ ಎಲ್ಲರೂ ಒಟ್ಟಾಗಿ ಹುಲ್ಲುತುಳಿಸುವ, ತೂರುವ, ಹುಲ್ಲನ್ನು ತೆಕ್ಕೆಮಾಡುವ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುವ ಮೂಲಕ ತಮ್ಮಲ್ಲಿನ ಒಗ್ಗಟ್ಟನ್ನು ಬಿಂಬಿಸುತ್ತಿದ್ದರು ಆದರೆ ಇಂದು ಅದು ಇಲ್ಲದಂತಾಗುತ್ತಿದೆ.
ಈ ಹಿಂದೆ ಪಾರಂಪರಿಕವಾಗಿ ಉಪಯೋಗಿಸುತ್ತಿದ್ದ ಕಣದ ಚಿತ್ರ. |
ಹೋಬಳಿಯಲ್ಲಿ ಈಗಾಗಲೇ ಸಾಮೆಬೆಳೆ ಕಟಾವಿಗೆ ಬಂದಿದ್ದು, ಇದೀಗ ಕೆಲ ರೈತರು ಕಣ ಮಾಡುವಲ್ಲಿ ಆಸಕ್ತಿ ತೋರದೆ ರಸ್ತೆಗೆ ರಾಗಿಹುಲ್ಲು,ಸಾಮೆಹುಲ್ಲು,ಜೋಳದ ತೆಗೆಯನ್ನು ಹಾಕಿ ಒಕ್ಕಣೆ ಮಾಡತ್ತಿದ್ದಾರೆ. ಹುಳಿಯಾರಿನಿಂದ ಚಿ.ನಾ.ಹಳ್ಳಿಗೆ ಹೋಗುವ ಮಾರ್ಗ ಮಧ್ಯದ ಹೆದ್ದಾರಿಗೆ ಸಾಮೆ ಹುಲ್ಲನ್ನು ಹಾಕಿ ಒಕ್ಕಣೆ ಮಾಡುತ್ತಿದ್ದು, ಇದರಿಂದ ಅನೇಕ ತರ ಸಮಸ್ಯೆಗಳು ತಲೆದೂರಿವೆ. ಸಾಮೆಹುಲ್ಲು ನುಣುಪಾಗಿದ್ದು ಇದರ ಮೇಲೆ ವಾಹನಗಳು ಹಾದುಹೋಗುವಾಗ ಕೆಲ ಸಮಯ ಜಾರಿಕೆಯಾಗುವ ಸಂಭವ ಹೆಚ್ಚಿದ್ದರೆ, ಬೈಕ್ ಇದರ ಮೇಲೆ ಹೋದರೆ ಬೈಕ್ ಚಕ್ರಕ್ಕೆ ಈ ಹುಲ್ಲು ಸಿಕ್ಕಿಹಾಕಿಕೊಂಡು ಸಂಚರಿಸಲು ತೊಂದರೆಯಾಗುತ್ತಿದೆ.ಕೆಲ ವಾಹನಗಳು ಹುಲ್ಲಿನ ಮೇಲೆ ಹೋಗಲಾರದೆ ರಸ್ತೆ ಬದಿಯಲ್ಲಿ ಹೋಗುವಂತಾಗಿದೆ.
ರಸ್ತೆ ಮೇಲೆ ಹುಲ್ಲುಹಾಕಿ ಅದರ ಮೇಲೆ ವಾಹನಗಳು ಓಡಾಡಿದ ಬಳಿಕ ಬಿದ್ದಂತಹ ಸಾಮೆಯನ್ನು ರಸ್ತೆ ಬದಿಯೇ ತೂರುವುದರಿಂದ ಅದರಲ್ಲಿನ ಧೂಳು ರಸ್ತೆಯಲ್ಲಿ ಸಂಚರಿಸುವವರ ಕಣ್ಣಿಗೆ ಬೀಳುವುದಲ್ಲದೆ, ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಎಡೆಮಾಡಿಕೊಡುತ್ತದೆ.
ಅಪಾಯ ಕಟ್ಟಿಟ್ಟಬುತ್ತಿ: ರಸ್ತೆಯಲ್ಲಿ ಒಕ್ಕಣೆಕಾರ್ಯ ಮಾಡುವುದರಿಂದ ಇಲ್ಲಿ ಕೆಲಸ ಮಾಡುವ ರೈತರಿಗೆ ಅಪಾಯ ಯಾವಾಗ ಬಂದೆರಗುತ್ತದೋ ತಿಳಿಯದಾಗಿದೆ. ಹೆದ್ದಾರಿಯಾಗಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತಿರುತ್ತವೆ,ಕೆಲ ಸಮಯ ವಾಹನಗಳು ಬರುವ ಶಬ್ದ ತಿಳಿಯದೆ ಹೋದಾಗ
ಅಪಘಾತಗಳು ಸಹ ಸಂಭವಿಸಿ ರೈತರು ಪ್ರಾಣತೆತ್ತಬೇಕಾಗುತ್ತದೆ. ಈ ಬಗ್ಗೆ ರೈತರು ಗಮನಗೊಡಬೇಕಿದೆ.
ರಸ್ತೆ ಒಕ್ಕಣೆಯಿಂದ ಆರೋಗ್ಯಕ್ಕೂ ಹಾನಿಕರವಾಗಿದ್ದು ವೇಗವಾಗಿ ಚಲಿಸುವ ವಾಹನಗಳಿಂದ ಬೆಳೆ ನಷ್ಟ ಉಂಟಾಗುವುದಲ್ಲದೆ, ಚಕ್ರಗಳಲ್ಲಿರುವ ಗಲೀಜೆಲ್ಲಾ ಕಾಳಿನೊಂದಿಗೆ ಬೆರತು ಆರೋಗ್ಯಕ್ಕೂ ಮಾರಕವಾಗಲಿದೆ. ಸರ್ಕಾರ ರೈತರ ಒಕ್ಕಣೆ ಕಾರ್ಯಕ್ಕಾಗಿ ಲಕ್ಷಾಂತರೂ ವೆಚ್ಚ ಮಾಡಿ ಕಾಂಕ್ರಿಟ್ ಕಣಗಳನ್ನು ಪ್ರತಿ ಗ್ರಾಮಗಳಲ್ಲಿ ಮಾಡಿಸಿದ್ದರೂ ಸಹ ಅವುಗಳನ್ನು ಬಳಸದೆ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿರುವುದು ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ರೈತರೇ ಸ್ವತ: ತಾವೇ ಎಚ್ಚೆತ್ತು ರಸ್ತೆಯಲ್ಲಿ ಒಕ್ಕಣೆ ಕಾರ್ಯ ಮಾಡುವ ಬದಲು ಹೊಲದಲ್ಲಿ ಕಣ ಮಾಡಿಕೊಂಡು ಅಥವಾ ಸರ್ಕಾರಿಂದ ಮಾಡಿಕೊಟ್ಟಿರುವ ಕಾಂಕ್ರಿಟ್ ಕಣಗಳಲ್ಲಿ ಒಕ್ಕಣೆ ಕಾರ್ಯ ಮಾಡಿಕೊಳ್ಳುವ ಮೂಲಕ ರಸ್ತೆಯಲ್ಲಿ ಉಂಟಾಗುವ ತೊಂದರೆಯನ್ನು ತಪ್ಪಿಸಬೇಕಾಗಿದೆ. ಪೋಲಿಸರು ಈ ಬಗ್ಗೆ ರೈತರಿಗೆ ತಿಳಿಹೇಳುವ ಮೂಲಕ ಮುಂದಾಗುವ ಅಪಘಾತಗಳನ್ನು ತಪ್ಪಿಸಬೇಕಿದೆ.
ಒಟ್ಟಾರೆ ರೈತರು ತಾವು ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿದ್ದ ಕಣಕ್ಕಾಗಿ ಹೊಲದಲ್ಲಿ ಜಾಗಮಾಡಿಕೊಳ್ಳದೆ ರಸ್ತೆಯನ್ನು ಆಶ್ರಯಿಸಿಕೊಳ್ಳುತ್ತಿರುವುದು ದುರಂತವಾಗಿದೆ.
-----------
ಹಿಂದೆ ಜಮೀನು ಜಾಸ್ತಿಯಿತ್ತು, ಬೆಳೆನೂ ಜಾಸ್ತಿಯಾಗುತ್ತಿತ್ತು ಆಗ ಹೊಲದಲ್ಲೇ ಕಣ ಮಾಡಿ ಒಕ್ಕಲು ಮಾಡುತ್ತಿದ್ದೆವು, ಆದ್ರೆ ಈಗ ಅಂಗೈಯಗಲ್ಲ ಜಾಗವಿದ್ದು ಬೆಳೆಯೂ ಕಡಿಮೆಯಾಗಿದ್ದು ಅಲ್ಪಸ್ವಲ್ಪ ಬೆಳೆಯನ್ನು ಒಕ್ಕಲು ಮಾಡಲು ರಸ್ತೆಯನ್ನೇ ಆಶ್ರಯಿಸುವಂತಾಗಿದೆ: ಗಂಗಾನಾಯ್ಕ. ರೈತ
---------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ