ಹುಳಿಯಾರು ಪಟ್ಟಣದ ಬಂಗಾರದ ಅಂಗಡಿಯೊಂದಕ್ಕೆ ಕಾಲುಂಗುರ ಕೊಳ್ಳಲು ಬಂದ ಮಹಿಳೆಯೊಬ್ಬಳು ಡಬ್ಬಿಯಲ್ಲಿನ ಬೆಳ್ಳಿಯ ಆಭರಣಗಳನ್ನು ಕೈಚಳಕ ತೋರಿ ಬಚ್ಚಿಟ್ಟುಕೊಂಡಿದ್ದನ್ನು ಸಿಸಿ ಟಿವಿ ಮೂಲಕ ಪತ್ತೆ ಮಾಡಿ ವಾಪಸ್ ಪಡೆದ ಪ್ರಕರಣ ಮಂಗಳವಾರ ನಡೆದಿದೆ.
ಹುಳಿಯಾರಿನ ಶ್ರೀದುರ್ಗಾಂಬ ಜ್ಯೂಯಲರಿ ಅಂಗಡಿಯಲ್ಲಿ ಬೆಳ್ಳಿ ಆಭರಣ ಕದಿಯಲು ಮುಂದಾಗಿ ಸಿಕ್ಕಿ ಬಿದ್ದ ಮಹಿಳೆ. |
ಪಟ್ಟಣದ ರಾಜ್ ಕುಮಾರ್ ರಸ್ತೆಯಲ್ಲಿನ ಹೆಚ್.ಆರ್. ಶಂಕರ್ ಅವರ ಶ್ರೀದುರ್ಗಾಂಬ ಜ್ಯೂಯಲರಿ ಅಂಗಡಿಗೆ ಬೆಳ್ಳಿ ಕಾಲುಂಗುರ ಕೊಳ್ಳುವ ನೆಪದಲ್ಲಿ ಮಹಿಳೆಯೊಬ್ಬಳು ನಾನಾ ರೀತಿಯ ಬೆಳ್ಳಿಯ ಕಾಲುಂಗುರಗಳನ್ನು ತೋರಿಸಲು ಕೇಳಿದಳು. ಅಂಗಡಿಯಲ್ಲಿ ಸಾಕಷ್ಟು ದಟ್ಟಣೆ ಇದ್ದುದರಿಂದ ಕಾಲುಂಗುರ ಗೆಜ್ಜೆಯ ಬಾಕ್ಸನ್ನು ತೂಕ ಮಾಡಿ ಇಡಿ ಪೆಟ್ಟಿಗೆಯನ್ನೇ ಅಂಗಡಿಯಾತ ಆಕೆಗೆ ನೀಡಿದ್ದಾನೆ. ಆಭರಣದ ಬಾಕ್ಸ್ ಪಡೆದ ಆಕೆ , ಅಂಗಡಿಯಲ್ಲಿ ಹೆಚ್ಚು ಜನರಿದ್ದುದನ್ನು ಗಮನಿಸಿ ತನ್ನ ಕೈಚಳಕದಿಂದ ಅದರಲ್ಲಿದ್ದ ಕೆಲ ಕಾಲುಂಗುರಗಳನ್ನು ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡು ನಂತರ ತನಗೆ ಯಾವುದೇ ಆಭರಣ ಬೇಡವೆಂದು ಬಾಕ್ಸ್ ವಾಪಸ್ ಅಂಗಡಿಯಾತನಿಗೆ ನೀಡಿದ್ದಾಳೆ.
ಬಾಕ್ಸ್ ಪಡೆದ ಆಂಗಡಿಯಾತ ತೂಕ ಹಾಕಿದಾಗ ತೂಕದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಆಕೆಯನ್ನು ಕೇಳಿದಾಗ ತಾನು ಅದರಿಂದ ಏನನ್ನು ತೆಗೆದುಕೊಂಡಿಲ್ಲ ನೀವು ಹೇಗೇ ಕೊಟ್ಟರೋ ಹಾಗೇ ಇದೆ ಸುಮ್ಮನೇ ನನ್ನನ್ನು ಅಪಾದಿಸಬೇಡಿ ಎಂದಿದ್ದಾಳೆ. ಎಷ್ಟೇ ಬಾರಿ ಕೇಳಿದರೂ ಮಹಿಳೆ ಒಪ್ಪದಿದ್ದಾಗ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ನೋಡಿದಾಗ ಆಕೆ ಆಭರಣದ ಬಾಕ್ಸ್ ನಿಂದ ಕಾಲುಂಗುರಗಳನ್ನು ತನ್ನ ರವಿಕೆಯಲ್ಲಿ ಹಾಕಿಕೊಳ್ಳುವ ದೃಶ್ಯ ಕಂಡು ಬಂದು, ಆಕೆಯ ಕೈಚಳಕ ಬಯಲಾಗಿದೆ. ಮಹಿಳೆ ತಾನು ಹುಳಿಯಾರು ಸಮೀಪದ ಟಿ.ತಾಂಡ್ಯದ ಪಕ್ಕದ ಬಸವಾಪಟ್ಟಣದ ರಾಧಮ್ಮ ಎಂದು ಆಕೆ ಹೇಳಿಕೊಂಡಿದ್ದು ವಿಚಾರಣೆಗಾಗಿ ಪೋಲಿಸ್ ಆಕೆಯನ್ನು ಠಾಣೆಯಲ್ಲಿಗೆ ಕರೆದೊಯ್ದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ