ತಮ್ಮೂರಿನ ಗ್ರಾಮಪಂಚಾಯ್ತಿ ರಾಜಕೀಯದಿಂದ ಬೇಸತ್ತು ಗ್ರಾಮಾಭಿವೃದ್ದಿಯ ಕನಸು ಹೊತ್ತ ಪತ್ರಿಕಾ ಏಜೆಂಟ್ ತಾನೂ ಕೂಡ ಅಖಾಡಕ್ಕಿಳಿಯುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಮನೆಮನೆಗೆ ಹಾಕುವ ಪೇಪರ್ ಬಾಯ್ ಕಮ್ ಪತ್ರಿಕಾ ಏಜೆಂಟ್ ಆಗಿರುವ 23 ವರ್ಷ ವಯಸ್ಸಿನ ಕೆ.ಸಿ.ಬಸವರಾಜು ಕೆಂಕೆರೆ 1 ನೇ ಬ್ಲಾಕ್ ನಿಂದ ಸಾಮಾನ್ಯ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯಿತಿಯ ಅಖಾಡದಲ್ಲಿ ಪತ್ರಿಕಾ ವಿತರಕರನೊಬ್ಬ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಇದೇ ಮೊದಲು. ಗ್ರಾಮದಲ್ಲಿ ಕಳೆದ 5 ವರ್ಷದಿಂದ ಪತ್ರಿಕೆಯ ವಿತರಕರಾಗಿರುವ ಈತ ಅಣ್ಣಾಹಜಾರೆಯಿಂದ ಆದರ್ಶ ಹಾಗೂ ರಾಜಕೀಯದ ಗಂಧಗಾಳಿಯಿಲ್ಲದ ಕೇಜ್ರಿವಾಲ್ ರಿಂದ ಪ್ರೇರಿತನಾಗಿದ್ದು ಗ್ರಾಮದ ಅಭ್ಯುದಯಕ್ಕಾಗಿ ಚುನಾವಣೆಗೆ ನಿಲ್ಲಲ್ಲು ಮುಂದಾಗಿದ್ದು ತನ್ನ ಜನಪ್ರಿಯತೆಯನ್ನು ಓರೆಗೆ ಹಚ್ಚಲು ಇಚ್ಚಿಸಿದ್ದಾರೆ. ಘಟಾನುಘಟಿಗಳ ಅಭ್ಯರ್ಥಿಗಳ ಮಧ್ಯೆ ಈತನ ಸ್ಪರ್ಧೆ ಗ್ರಾಮದಲ್ಲಿ ಗಮನ ಸೆಳೆದಿದೆ. ಯಾವುದೇ ಹಣ ಹೆಂಡ ಹಂಚದೆ ಮತಯಾಚನೆಗೆ ಮುಂದಾಗಿರುವ ಈತ ವಾರ್ಡ್ ನ ಜನತೆ ಮತ ನೀಡಿ ಜಯ ತಂದು ಕೊಟ್ಟಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವದಕ್ಕೆ ಪ್ರಥಮಾದ್ಯತೆ ನೀಡುವುದಾಗಿ ಹೇಳಿದ್ದಾರೆ.
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070