ಎಸ್.ಎಸ್.ಎಲ್.ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ತಾವು ಫೇಲಾದೆ ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಮತ್ತೊಮ್ಮೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಂಡು ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸುವಂತೆ ಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಸ್.ಈಶ್ವರಯ್ಯ ತಿಳಿಸಿದರು.
ಹುಳಿಯಾರಿನ ಬಸವೇಶ್ವರಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಕೆ.ಎಸ್.ಈಶ್ವರಯ್ಯ ಮಾತನಾಡಿದರು. |
ಜಿಲ್ಲಾಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹುಳಿಯಾರಿನ ಬಸವೇಶ್ವರಪ್ರೌಢಶಾಲೆಯಲ್ಲಿ ಸೋಮವಾರ ಅಯೋಜಿಸಿದ್ದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ತಾನು ಫೇಲಾಗಲಿ ಎಂದು ಬರೆದಿರುವುದಿಲ್ಲ ಕೆಲ ಸಮಯ ಯಾವುದೋ ಒಂದು ವಿಷಯ ಕಠಿಣವೆಂದು ಅದರ ಬಗ್ಗೆ ಹೆಚ್ಚು ಆಸಕ್ತಿ ತೋರದೆ ಹೋದಾಗ ಫೇಲಾಗಿರುತ್ತಾರೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ಗಣಿತವನ್ನು ಕಷ್ಟವೆಂದು ಹೆಚ್ಚು ಅಭ್ಯಾಸಿಸದೆ ಫೇಲಾಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಕಷ್ಟ ಎನ್ನದೆ, ತಮ್ಮ ಸಮಸ್ಯೆಯನ್ನು ಶಿಕ್ಷಕರ ಬಳಿ ಹೇಳಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು. ವಿದ್ಯಾರ್ಥಿಗಳು ತಮ್ಮನ್ನು ತಾವು ನಂಬಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದರೆ ಉತ್ತೀರ್ಣರಾಗಬಹುದು ಎಂದರು.
ಈ ವೇಳೆ ಟಿ.ಆರ್.ಎಸ್.ಆರ್ ಶಾಲೆಯ ಮುಖ್ಯಶಿಕ್ಷಕ ರಮೇಶ್, ಸಂಪನ್ಮೂಲ ಶಿಕ್ಷಕರಾದ ಎಲ್.ಗೋವಿಂದಪ್ಪ,ಗೋವಿಂದರಾಜು,ನಟರಾಜ್,ಕೆ.ಬಿ.ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಮುಂದಿನ ೧೫ ದಿನಗಳ ಕಾಲ ಈ ತರಬೇತಿ ಕಾರ್ಯ ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳು ಬಂದು ಸೇರಬಹುದಾಗಿದೆ ಮುಖ್ಯ ಶಿಕ್ಷಕ ರಮೇಶ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ