ಆಯ್ಕೆಗೆ ನಾನಾ ರೀತಿಯ ಕಸರತ್ತು
ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯ್ತಿಯೆಂದೆ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾ.ಪಂ ಚುನಾವಣೆಗೆ ರಂಗೇರಿದ್ದು ೩೯ ಸ್ಥಾನಗಳ ಪಂಚಾಯ್ತಿಗೆ ಒಟ್ಟು ೧೯೦ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕಡೆ ಕ್ಷಣದಲ್ಲಿ ಕಂಡುಬಂದ ಅಭ್ಯರ್ಥಿಗಳು. |
ಹುಳಿಯಾರಿನಲ್ಲಿ ಜೂನ್ ೨ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನಾಮಪತ್ರಸಲ್ಲಿಕೆಗೆ ಆಕಾಂಕ್ಷಿಗಳ ಮಹಾ ಪೂರವೇ ಕಂಡುಬಂದು ಪಂಚಾಯ್ತಿ ಆವರಣ ಅಭ್ಯರ್ಥಿಗಳ ಹಾಗೂ ಬೆಂಬಲಿಗರಿಂದಲೇ ತುಂಬಿತುಳುಕುತ್ತಿತ್ತು. ಕಳೆದ ೧೫ ರಿಂದ ಪ್ರಾರಂಭವಾಗಿದ್ದ ನಾಮಪತ್ರಸಲ್ಲಿಕೆಗೆ ಕಡೆ ದಿನವಾದ ಶುಕ್ರವಾರವೂ ಸೇರಿ ನಿರೀಕ್ಷೆಗೂ ಮೀರಿ ಬರೋಬರಿ ೧೯೦ ಉಮೇದುವಾರಿಕೆಗಳು ಸಲ್ಲಿಕೆಯಾಗಿರುವುದು ಚುನಾವಣೆಯ ತೀವ್ರತೆಗೆ ಸಾಕ್ಷಿಯಾಗಿದೆ.
ಇಲ್ಲಿನ ಚುನಾವಣೆ ಎಂದರೆ ರಾಜಕೀಯ ನಾಯಕರುಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು ಹೇಗಾದರೂ ಸರಿ , ಯಾವ ದಾರಿಯಲ್ಲಾದರೂ ಸರಿ ಅಧಿಕಾರದ ಗದ್ದುಗೆ ಏರಬೇಕೆಂಬ ತಹತಹಿಕೆಯಿಂದ ನಾನಾರೀತಿಯ ಕಸರತ್ತಿಗೆ ದಾರಿ ಮಾಡಿಕೊಟ್ಟಿದೆ.ಹಿಂದಿನ ಚುನಾವಣೆಗಳಲ್ಲಿ ಪಂಚಾಯ್ತಿ ಅಧ್ಯಕ್ಷ ಗದ್ದುಗೆ ಏರುವವರಿಗೆ ಬೆಂಬಲಿಸುವ ಸದಸ್ಯರಿಗೆ ಶುಕ್ರದೆಸೆ ತಿರುಗಿದ್ದರೆ, ಅಧ್ಯಕ್ಷ ಸ್ಥಾನದವರಿಗೆ ಲಕ್ಷಾಂತರ ರೂ ವೆಚ್ಚಕ್ಕೆ ದಾರಿ ಮಾಡಿಕೊಟ್ಟಿತ್ತು. ಸದಸ್ಯರಾದವರಿಗೆ ನಾನಾರೀತಿಯ ಆಕಾಂಕ್ಷೆಗಳು ಸರ್ವೆ ಸಾಮಾನ್ಯವಾಗಿದ್ದು ಪ್ರತಿ ಚುನಾವಣೆಯಲ್ಲೂ ಉಮೇದುವಾರಿಕೆದಾರರ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ.
ಕ್ಷೇತ್ರದ ವ್ಯಾಪ್ತಿ : ಪಟ್ಟಣದ ಜನಸಂಖ್ಯೆ ಈಗಾಗಲೇ ೨೦ಸಾವಿರ ಗಡಿ ತಲುಪಿದ್ದು ೨೦೧೧ ಜನಗಣತಿಯಂತೆ ೧೫,೪೧೩ ಜನಸಂಖ್ಯೆ ಹೊಂದಿರುತ್ತದೆ . ಪಟ್ಟಣ ಪಂಚಾಯ್ತಿ ಆಗಬೇಕಿದ್ದ ಹುಳಿಯಾರು ರಾಜಕೀಯ ಕಾರಣದಿಂದಾಗಿ ಗ್ರಾಮ ಪಂಚಾಯ್ತಿಯಾಗಿ ಮುಂದುವರೆದಿದ್ದು ಅಭಿವೃದ್ದಿಗೆ ಹಿನ್ನಡೆಯಾಗಲು ಕಾರಣವಾಗಿದೆ. ಪಟ್ಟಣವನ್ನು ಒಟ್ಟು ೧೩ ಬ್ಲಾಕ್ ಗಳಾಗಿ ವಿಂಗಡಿಸಲಾಗಿದ್ದು ಇದುವರೆಗೂ ೩೩ ಸದಸ್ಯರು ಪ್ರತಿನಿಧಿಸುತ್ತಿದ್ದರು. ಈ ಬಾರಿ ಹೆಚ್ಚಿನ ಜನಸಂಖ್ಯೆಯ ಬ್ಲಾಕ್ ಗಳನ್ನು ಪುನರ್ ವಿಂಗಡಿಸಿ ೬ ಸದಸ್ಯರುಗಳ ಹೆಚ್ಚಳ ಮಾಡಿದ್ದರಿಂದ ಒಟ್ಟು ೩೯ ಮಂದಿ ಸದಸ್ಯರ ಆಯ್ಕೆ ನಡೆಯಬೇಕಾಗಿದೆ.
ಆಕಾಂಕ್ಷಿಗಳ ಸಂಖ್ಯೆ : ಕಡೆಯ ದಿನ ಕಡೆಯ ಕ್ಷಣದವರೆಗೂ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಕಂಡುಬಂದರು. ಅಂತಿಮವಾಗಿ ಪಟ್ಟಣದ ೧ನೇ ಬ್ಲಾಕ್ ನ ೨ ಸ್ಥಾನಗಳಿಗೆ ೨೦ ಮಂದಿ , ೨ ನೇ ಬ್ಲಾಕ್ ನ ೨ ಸ್ಥಾನಗಳಿಗೆ ೧೩ ಮಂದಿ, ೩ ನೇ ಬ್ಲಾಕ್ ನ ೩ ಸ್ಥಾನಗಳಿಗೆ ೧೩ ಮಂದಿ, ೪ನೇ ಬ್ಲಾಕ್ ನ ೨ ಸ್ಥಾನಗಳಿಗೆ ೮ ಮಂದಿ, ೫ ನೇ ಬ್ಲಾಕ್ ನ ೪ ಸ್ಥಾನಗಳಿಗೆ ೧೬ ಮಂದಿ, ೬ ನೇ ಬ್ಲಾಕ್ ನ ೩ ಸ್ಥಾನಗಳಿಗೆ ೧೩ ಮಂದಿ, ೭ ನೇ ಬ್ಲಾಕ್ ನ ೩ ಸ್ಥಾನಗಳಿಗೆ ೧೦ ಮಂದಿ, ೮ ನೇ ಬ್ಲಾಕ್ ನ ೪ ಸ್ಥಾನಗಳಿಗೆ ೧೫ ಮಂದಿ, ೯ ನೇ ಬ್ಲಾಕ್ ನ ೪ ಸ್ಥಾನಗಳಿಗೆ ೨೧ ಮಂದಿ, ೧೦ನೇ ಬ್ಲಾಕ್ ನ ೪ ಸ್ಥಾನಗಳಿಗೆ ೩೨ ಮಂದಿ, ೧೧ ನೇ ಬ್ಲಾಕ್ ನ ೨ ಸ್ಥಾನಗಳಿಗೆ ೮ ಮಂದಿ, ೧೨ ನೇ ಬ್ಲಾಕ್ ನ ೨ ಸ್ಥಾನಗಳಿಗೆ ೫ ಮಂದಿ, ೧೩ ನೇ ಬ್ಲಾಕ್ ನ ೪ ಸ್ಥಾನಗಳಿಗೆ ೧೬ ಮಂದಿ ನಾಮಪತ್ರಸಲ್ಲಿಸಿದ್ದಾರೆ.
ಪಂಚಾಯ್ತಿಯಲ್ಲಿ ಕಳೆದಬಾರಿ ಸದಸ್ಯರಾಗಿದ್ದವರ ಪೈಕಿ ೨೮ಕ್ಕೂ ಹೆಚ್ಚು ಮಂದಿ ಈ ಬಾರಿ ಕಣದಲ್ಲಿದ್ದು ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿರುವಲ್ಲಿ ಅನುಮಾನವೇ ಇಲ್ಲ. ಒಟ್ಟಾರೆ ಯಾರೇ ಚುನಾಯಿತರಾದರು ಪಟ್ಟಣವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದರೆ ಸಾಕೆಂಬುದು ಮತದಾರರ ನಿರೀಕ್ಷೆಯಾಗಿದೆ.
----------
ಒಟ್ಟು ೧೩ ಬ್ಲಾಕ್ ಗಳಿಗೆ ೧೯೦ ನಾಮಪತ್ರ ಸಲ್ಲಿಕೆಯಾಗಿದ್ದು ೨೩ರ ಶನಿವಾರ ನಾಮಪತ್ರ ಪರಿಶೀಲನೆ , ೨೫ರ ಸೋಮವಾರ ಉಮೇದುವಾರಿಕೆ ವಾಪಸ್ಸ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂದು ಮಧ್ಯಾಹ್ನ ೩ ಗಂಟೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಚಿಹ್ನೆ ವಿತರಿಸಲಾಗುವುದು : ಶಿವಾನಂದ್ , ರಿಟರ್ನಿಂಗ್ ಅಫೀಸರ್ .
------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ