ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಶ್ರೀ ರಂಗನಾಥ ಲಿಕ್ಕರ್ ಷಾಪ್ ತೆರವು ವಿವಾದದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ತುಮಕೂರು ಜಿಲ್ಲಾ ಅಬಕಾರಿ ಅಯುಕ್ತರೇ ಖುದ್ದು ಸ್ಥಳಕ್ಕೆ ಬಂದು ಮತ್ತೊಮ್ಮೆ ಮರುಆಳತೆ ಮಾಡಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ದಿ ಟೌನ್ ಕೋಪರೇಟಿವ್ ಸೊಸೈಟಿಯ ಕಟ್ಟಡದಲ್ಲಿರುವ ಎನ್.ಜಿ. ನಾಗರಾಜ್ ಎಂಬುವರಿಗೆ ಸೇರಿದ್ದ ಶ್ರೀ ರಂಗನಾಥ ಲಿಕ್ಕರ್ ಷಾಪ್ ನಿಂದ ಪ್ರತಿನಿತ್ಯ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಇದಕ್ಕೆ ಹೊಂದಿಕೊಂಡಂತಿರುವ ದೇವಾಲಯಗಳಿಗೆ ಆಗಮಿಸುವ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಮುಂದಿನ ಅವಧಿಗೆ ನವೀಕರಿಸದೆ ಸ್ಥಳಾಂತರಿಸಬೇಕೆಂದು ಸೊಸೈಟಿಯವರು, ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಹೋರಾಟ ನಡೆಸುತ್ತಲೇ ಬಂದಿದ್ದರು.ಸಾರ್ವಜನಿಕ ಆಕ್ಷೇಪಣಾರ್ಹ ಸ್ಥಳದಲ್ಲಿನ ಮಧ್ಯದಂಗಡಿಯ ಮರುಅಳತೆ ಕಾರ್ಯ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುನಿತಾ ಅವರ ಸಮ್ಮುಖದಲ್ಲಿ ನಡೆಯಿತು. |
ಕಡೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಅಬಕಾರಿ ಇಲಾಖೆ ಅಬಕಾರಿ ಉಪಅಯುಕ್ತರ ಮೂಲಕ ಸ್ಥಳ ಪರಿಶೀಲನೆ ನಡೆಸಿ ಮದ್ಯದಂಗಡಿಯಿಂದ ವಿವಿಧ ದೇವಾಲಯಗಳಿಗೆ ಹಾಗೂ ರಾಜ್ಯ ಹೆದ್ದಾರಿಗೆ ಇರುವ ಅಂತರವನ್ನು ಅಳತೆ ಮಾಡಿಸಿದ್ದರು. ಸ್ಥಳಾಂತರಿಸಲು ಅದೇಶವಾಗಿದಾಗ್ಯೂ ಸಹ ಮದ್ಯದಂಗಡಿಯವರು ತಕರಾರು ಅರ್ಜಿ ಸಲ್ಲಿಸುತ್ತ ಹಾಗೂ ರಾಜಕೀಯ ಒತ್ತಡಗಳ ಮೂಲಕವೇ ಕಳೆದೊಂದು ವರ್ಷದಿಂದ ಲಿಕ್ಕರ್ ಶಾಪ್ ನಡೆಸುತ್ತಾ ಬಂದಿದ್ದರು.
ಈ ಹಿಂದೆ ಅಬಕಾರಿ ಉಪಅಯುಕ್ತರು ಖುದ್ದು ನಡೆಸಿದ ಅಳತೆ ಬಗ್ಗೆಯೂ ತಕರಾರು ತೆಗೆದಿದ್ದರಿಂದ ಆಯುಕ್ತರ ಆದೇಶದ ಮೇರೆಗೆ ಇಂದು ಮತ್ತೊಮ್ಮೆ ಮರು ಅಳತೆ ನಡೆಯಿತು. ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುನಿತಾ ಸ್ಥಳಕ್ಕಾಗಮಿಸಿ ಅಳತೆ ಕಾರ್ಯ ನಡೆಸಿದರು. ಈ ಬಾರಿಯ ಅಳತೆಯಲ್ಲೂ ಸಹ ಯಾವುದೇ ಬದಲಾವಣೆಯಿಲ್ಲದೆ ಹಿಂದಿನ ಅಳತೆಯಂತೆ ಸರಿಯಿದಿದ್ದು ಕಂಡುಬಂತು. ಅಬಕಾರಿ ನಿಯಮದನ್ವಯ ಯಾವುದೇ ಒಂದು ಮದ್ಯದಂಗಡಿ ದೇವಾಲಯಗಳಿಂದ ೧೦೦ ಮೀ ಹಾಗೂ ರಾಷ್ಟ್ರೀಯಹೆದ್ದಾರಿಯಿಂದ ೨೨೦ ಮೀ ದೂರವಿರಬೇಕೆಂಬ ನಿಯಮಾನುಸಾರ ಈಗಲಾದರೂ ವಿವಾದಿತ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಡಿಸಿ ಅವರಲ್ಲಿ ಸಾರ್ವಜನಿಕರು ಮನವಿ ಮಾಡಿದರು.
ಇದೇ ವೇಳೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಅಬಕಾರಿ ಡಿಸಿ ಕೋರ್ಟ್ ಆದೇಶದಂತೆ ತಾವು ಮದ್ಯದಂಗಡಿಯಿಂದ ವಿವಿಧ ದೇವಾಲಯಗಳಿರುವ ಅಂತರವನ್ನು ಅಳತೆ ಮಾಡಿಸಿ ಮಾಹಿತಿ ಪಡೆದಿದ್ದು ಅದರ ದಾಖಲೆ ಸಿದ್ದಪಡಿಸಿ ಶೀಘ್ರವೇ ಕೋರ್ಟ್ ಗೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಿಪಟೂರು ಉಪ ಅಧೀಕ್ಷಕ ತಿಪ್ಪೇಸ್ವಾಮಿ, ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್, ಸೊಸೈಟಿ ಅಧ್ಯಕ್ಷ ಹೆಚ್.ಆರ್.ದೇವಾನಂದ್, ಹೆಚ್.ವಿ.ವಿಜಯಮ್ಮ, ದುರ್ಗಾಪರಮೇಶ್ವರಿ ದೇವಾಲಯದ ಕನ್ವಿನೀಯರ್ ವಿಶ್ವನಾಥ್, ಮಧ್ಯದಂಗಡಿ ಗುತ್ತಿಗೆದಾರ ನಾಗರಾಜ್ ಇನ್ನಿತರರಿದ್ದರು.
--------------------------------
ಮದ್ಯದಂಗಡಿಯಿಂದ ಗ್ರಾಮದೇವತೆ ಹುಳಿಯಾರಮ್ಮ ದೇವಾಲಯಕ್ಕೆ ೪೬.೪ ಮೀ, ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ೯೬.೩ ಮೀ, ಬೀರಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ೯೩.೭ ಮೀ ಹಾಗೂ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಗೆ ೧೧೭ ಮೀ ಅಂತರವಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ