ವರದಿ:ಡಿ.ಆರ್.ನರೇಂದ್ರ ಬಾಬು
ಹುಳಿಯಾರು : ಸದ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೂ ಚುನಾವಣೆ ಕಾವು ತಟ್ಟಿದ್ದು ಗ್ರಾಮ ರಾಜಕೀಯದಲ್ಲಿ ಬ್ಯುಸಿಯಾಗಿರುವ ರೈತಾಪಿ ಜನರು ಮಾರುಕಟ್ಟೆ ಕಡೆ ತಿರುಗಿ ನೋಡುತ್ತಿಲ್ಲವಾದ್ದರಿಂದ ವಹಿವಾಟು ವಿರಳವಾಗಿದ್ದು ಅಂಗಡಿದಾರರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದು, ಎಪಿಎಂಸಿ ಬಿಕೋ ಎನ್ನುತ್ತಿದೆ.
ಹುಳಿಯಾರು ಎಪಿಎಂಸಿಯಲ್ಲಿ ವಹಿವಾಟು ವಿರಳವಾಗಿದ್ದು ಬಿಕೋ ಎನ್ನುತಿರುವ ದೃಶ್ಯ. |
ಪಟ್ಟಣದ ಮಾರುಕಟ್ಟೆ ಕಾಳು,ಕಡ್ಡಿ ಹಾಗೂ ಕೊಬ್ಬರಿಗೆ ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ಧಿಯಾಗಿದ್ದು ಹುಳಿಯಾರು ಹೋಬಳಿ ಸೇರಿದಂತೆ ಸುತ್ತಮುತ್ತಲ ಹಂದನಕೆರೆ, ಕಂದಿಕೆರೆ ಹಾಗೂ ಹಿರಿಯೂರು ಹೋಬಳಿಯ ಹಳ್ಳಿಯ ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಇದೀಗ ಮುಂಗಾರು ಹಂಗಾಮು ಪ್ರಾರಂಭಗೊಂಡಿರುವುದಲ್ಲದೆ, ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಉತ್ತಮ ಹದಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದಲ್ಲದೆ ಹಳ್ಳಿ ರಾಜಕೀಯದ ಕಾರಣವೂ ಸೇರಿ ಎಪಿಎಂಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಸದ್ಯ ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಹಾಗೂ ಹುಣಸೆ ಬೀಜದ ವ್ಯಾಪಾರ ವಿರಳವಾಗಿ ನಡೆಯುತ್ತಿರುವುದು ಬಿಟ್ಟರೆ ಯಾವುದೇ ರೀತಿಯ ವಹಿವಾಟಿಲ್ಲದಂತಾಗಿದ್ದು ಅಂಗಡಿದಾರರು ಕಾದುಕೂರುವಂತಾಗಿದೆ. ಹುಣಸೆಹಣ್ಣು ಪ್ರತಿ ಕ್ವಿಂಟಾಲ್ ೪೫೦೦ ರಿಂದ ೫೦೦೦ ಹಾಗೂ ಹುಣಸೆಬೀಜ ಪ್ರತಿ ಕ್ವಿಂಟಾಲ್ ೧೪೫೦ರಿಂದ ೧೫೦೦ ರೂ ಇದೆ. ಈ ಭಾಗದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಪ್ರತಿ ಕೆಜಿ ೭೦ ರಿಂದ ೮೦ರೂ ಇದ್ದರೂ ಸಹ ಮಾರಲು ಯಾವುದೇ ರೈತರು ಮಾರುಕಟ್ಟೆ ಬರುತ್ತಿಲ್ಲ. ಅಲಸಂದೆ ಕ್ವಿಂಟಾಲ್ ಗೆ ೪೦೦೦ ದಿಂದ ೪೫೦೦ರೂ, ತೊಗರಿ ಕ್ವಿಂಟಾಲ್ ಗೆ ೫೦೦೦ರೂ, ರಾಗಿ ೧೨೦೦ರಿಂದ ೧೪೭೦ ಹಾಗೂ ಸಾವೆ ೨೦೦೦ ದಿಂದ ೨೮೦೦ ರೂಯಿದ್ದರೂ ವಹಿವಾಟು ಮಾತ್ರ ವಿರಳವಾಗಿದೆ. ಇನ್ನೂ ಜುಲೈ ಪ್ರಾರಂಭದವರೆಗೂ ಇದೇ ರೀತಿ ಪರಿಸ್ಥಿತಿ ಇರುವುದಾಗಿ ಸಪ್ತಗಿರಿ ಟ್ರೇಡರ್ಸ್ ನ ಮಾಲೀಕ ಎಲ್.ಆರ್. ಬಾಲಾಜಿ ತಿಳಿಸುತ್ತಾರೆ.
ಮುಂಗಾರು ಪ್ರಾರಂಭವಾಯಿತೆಂದರೆ ರೈತರು ಹೊಲದ ಕೆಲಸಗಳತ್ತ ಮುಖಮಾಡಿ ಮಾರುಕಟ್ಟೆಯತ್ತ ಬರುತ್ತಿಲ್ಲ ಈಗ ಏನಿದ್ದರೂ ಗೊಬ್ಬರದ ಅಂಗಡಿಯವರಿಗೆ ಹೆಚ್ಚಿನ ಡಿಮ್ಯಾಂಡಿದ್ದು ಪಟ್ಟಣದ ಗೊಬ್ಬರದ ಅಂಗಡಿಗಳಲ್ಲಿ ರೈತರು ಹೆಚ್ಚು ಕಂಡುಬರುತ್ತಿದ್ದಾರೆ. ಹೆಸರುಕಾಳು ಬೆಳೆ ಚೆನ್ನಾಗಿ ಬಂದು ರೈತರ ಕೈಸೇರಿದ ನಂತರ ಹೆಸರುಕಾಳು ಮಾರಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎಪಿಎಂಸಿಯತ್ತ ಧಾವಿಸುತ್ತಾರೆ.
ಬೆಲೆಗಳಲ್ಲಿ ಏರಿಳಿತ ; ರೈತರು ತಾವು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲವೆಂದು ಗೊಣಗುತ್ತಾರೆ. ಆದರೆ ಇದೀಗ ಉತ್ತಮ ಬೆಲೆಯಿದ್ದರೂ ಸಹ ಮಾರಲು ರೈತರ ಬಳಿ ದಾಸ್ತಾನು ಇಲ್ಲದಂತಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಒಮ್ಮೆಲೇ ಮಾರುಕಟ್ಟೆ ತಂದು ಮಾರಲು ಮುಂದಾಗುವುದರಿಂದ ಸ್ವಾಭಾವಿಕವಾಗಿ ಬೆಲೆ ಕುಸಿತಗೊಂಡು ರೈತರ ಪರಿಶ್ರಮಕ್ಕೆ ತಕ್ಕಪ್ರತಿಫಲ ಇಲ್ಲದಂತಾಗುತ್ತದೆ. ಇದೀಗ ಮಾತ್ರ ಬೆಲೆ ಹೆಚ್ಚಳವಿದರೂ ಸಹ ರೈತರ ಬಳಿ ಮಾಲು ಇಲ್ಲದೆ ಕಣ್ ಕಣ್ ಬಿಡುವಂತಾಗಿದೆ. ಸದ್ಯ ಹೆಸರುಕಾಳು ಪ್ರತಿ ಕೆಜಿ ೭೦ ರಿಂದ ೮೦ರೂಗೆ ಮಾರಾಟವಾಗುತ್ತಿದ್ದು ಈಬಾರಿಯ ಮುಂಗಾರು ಬೆಳೆಬಂತು ಅನುವಷ್ಟರಲ್ಲಿ ಬೆಲೆಯಲ್ಲಿ ಕುಸಿತ ಕಂಡು ೨೦ರಿಂದ ೩೦ರೂಗೆ ಬಂದರೂ ಬರುವ ಸಾಧ್ಯತೆ ಹೆಚ್ಚಿದೆ.
ಈ ಮಾರುಕಟ್ಟೆಯಲ್ಲಿ ಹತ್ತಾರು ಜನ ಹಮಾಲಿಗಳು ಕೂಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಅಂಗಡಿಗಳಿಗೆ ರೈತರು ಕಾಳುಕಡ್ಡಿ ತುಂಬಿದ ಚೀಲಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹಾಕುವ, ತೂಕ ಮಾಡುವ ಮೂಲಕ ಕೂಲಿ ಸಂಪಾದಿಸುತ್ತಿದ್ದರೆ. ಇದೀಗ ಬರುವ ಮಾಲು ಕಡಿಮೆಯಾಗಿದ್ದು ಹಮಾಲಿಗಳು ಸಹ ಸುಮ್ಮನೆ ಕೈಕಟ್ಟಿ ಕೂರುವಂತಾಗಿದೆ.
ಎಪಿಎಂಸಿಗೆ ಬರುತ್ತಿರುವ ಅವಕ ಇಳಿಮುಖವಾಗುವದರೊಂದಿಗೆ ಕೂಲಿಗಳ ಅನ್ನಕ್ಕೂ ತತ್ವಾರವಾಗಿರುವುದು ಶೋಚನೀಯವಾಗಿದೆ.
--------------------
ಈ ಭಾಗದಲ್ಲಿ ಒಳ್ಳೆ ಮಳೆಯಾಗಿರುವುದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ.ಹೆಸರು,ಅಲಸಂದೆ,ಎಳ್ಳಿಗೆ ಈ ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದು ಜುಲೈ ಪ್ರಾರಂಭದಿಂದಲೆ ದಾಖಲೆ ವಹಿವಾಟು ನಡೆಯುವ ನಂಬಿಕೆಯಿದೆ :ಗಜಣ್ಣ,ವರ್ತಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ