ಮತಯಾಚನೆಯಲ್ಲಿ ಗುರ್ತಿನ ಚಿಹ್ನೆಗೆ ಒತ್ತು
---------
ವರದಿ: ಡಿ.ಆರ್.ನರೇಂದ್ರಬಾಬು
---------
ಹುಳಿಯಾರು : ಹೋಬಳಿ ವ್ಯಾಪ್ತಿಯ ಎಲ್ಲಾ ಪಂಚಾಯ್ತಿಗಳಲ್ಲಿ ಚುನಾವಣೆ ರಂಗೇರಿದ್ದು ಪ್ರಚಾರ ಭರದಿಂದ ಸಾಗಿದೆ. ಪಂಚಾಯ್ತಿಯ ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಹಾಗೂ ಅವರ ಚಿಹ್ನೆಗಳನ್ನು ನೀಡಿದ್ದೆ ತಡ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಹಾಗೂ ಚಿಹ್ನೆಯನ್ನೊಳಗೊಂಡ ಕರಪತ್ರ ಮುದ್ರಿಸಿಕೊಂಡು ತಮ್ಮತಮ್ಮ ಬ್ಲಾಕ್ ಗಳ ಮನೆಮನೆ ಬಾಗಿಲಿಗೆ ತೆರಳಿ ತಮಗೆ ಓಟು ಕೊಡಿ ಎಂದು ನಾಮೇಲು ತಾಮೇಲು ಎಂಬಂತೆ ಮತಯಾಚನೆ ಮಾಡುತ್ತಿದ್ದಾರೆ. ತಮ್ಮದೇ ಆದ ಲೆಕ್ಕಾಚಾರದಂತೆ ಸಂಬಂಧಪಟ್ಟ ಮತದಾರರ ಮನೆಗಳಿಗೆ ಎಡತಾಕುತ್ತಿರುವ ಅಭ್ಯರ್ಥಿಗಳು ಮತದಾರರ ಮನಗೆಲ್ಲಲ್ಲು ಹರಸಾಹಸ ಮಾಡುತ್ತಿದ್ದಾರೆ.
ಹುಳಿಯಾರಿನಲ್ಲಿ ಅಭ್ಯರ್ಥಿಯೊಬ್ಬರು ಮುಂಜಾನೆಯೇ ಬಸ್ ನಿಲ್ದಾಣದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿರುವುದು. |
ಪಟ್ಟಣದಲ್ಲಿ ಬೆಳಿಗ್ಗೆಯೇ ಪ್ರಚಾರ ಕೈಗೊಳ್ಳುತ್ತಿರುವ ಅಭ್ಯರ್ಥಿಗಳು ಕೈಯ್ಯಲ್ಲಿ ಮತದಾರರ ಪಟ್ಟಿ ಹಾಗೂ ಕರಪತ್ರ ಹಿಡಿದು ಮತದಾರರ ಭೇಟಿಯಲ್ಲಿ ತೊಡಗಿದ್ದಾರೆ. ಮತದಾರರ ಪಟ್ಟಿಯಂತೆ ಮನೆಯಲ್ಲಿರುವ ಎಲ್ಲರನ್ನೂ ಸಂಪರ್ಕಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಜನ ಮಧ್ಯಾಹ್ನದ ವೇಳೆ ತೋಟದ ಕೆಲಸಗಳಿಗೆ ಹೋಗಿರುತ್ತಾರೆಂಬುದನ್ನು ಅರಿತ ಕೆಲ ಸದಸ್ಯರು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಅವರುಗಳ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ
ಜಾತಿ ಲೆಕ್ಕಾಚಾರ : ಸ್ಥಳೀಯ ಚುನಾವಣೆಗಳಲ್ಲಿ ಅಭ್ಯರ್ಥಿಯ ಪ್ರತಿಷ್ಠೆ ಹಾಗೂ ಜಾತಿಯ ಮತಗಳೇ ನಿರ್ಣಾಯಕವಾಗಲಿದ್ದು ಹೆಚ್ಚಿನ ಅಭ್ಯರ್ಥಿಗಳು ಅಯಾಯಾ ಬ್ಲಾಕ್ ಗಳಲ್ಲಿರುವ ತಮ್ಮದೇ ಜಾತಿಯ ಮತಗಳ ಆಧಾರದ ಮೇಲೆ ಸ್ಪರ್ಧೆಗಿಳಿದಿದ್ದಾರೆ. ಇನ್ನುಳಿದ ಜಾತಿಯವರ ಮತಗಳನ್ನು ಸೆಳೆಯಲು ಅಯಾಯಾ ಜಾತಿ ಮುಖಂಡರುಗಳ ಬೆಂಬಲಕೋರುತ್ತಾ ಅವರೊಂದಿಗೆ ತೆರಳಿ ಇನ್ನುಳಿದ ಜಾತಿಯಲ್ಲೂ ಮತಯಾಚಿಸುತ್ತಿದ್ದಾರೆ.
ರಾಜಕೀಯ ತಂತ್ರಗಾರಿಕೆಯೊಂದಿಗೆ ಕಣಕಿಳಿದಿರುವ ಅಭ್ಯರ್ಥಿಗಳು ಮದ್ಯ , ಮಾಂಸದ ಬಾಡೂಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಾನ್ ವೆಜ್ ಹೋಟೆಲ್ ಗಳಲ್ಲಿ ಬಿರಿಯಾನಿ , ಕಬಾಬ್ ಗೆ ಬಾರಿ ಬೇಡಿಕೆ ಏರಿದ್ದು ಮೀನೂಟಕ್ಕೂ ಇನ್ನಿಲ್ಲದ ಬೇಡಿಕೆ ಕಂಡುಬಂದಿದೆ. ಗುಟ್ಕಾ, ಬೀಡಾ, ಸಿಗರೇಟ್ ಗೂ ಡಿಮ್ಯಾಂಡ್ ಉಂಟಾಗಿದ್ದು ಬೀಡಿಸೇದುವರ ಬಾಯಲ್ಲೂ ಕೂಡ ಕಿಂಗ್ ಸಿಗರೇಟ್ ಉರಿಯುತ್ತಿದೆ.
ಪಟ್ಟಣದ ೫ ನೇ ಬ್ಲಾಕ್ ನಲ್ಲಿ ಕಾಲೋನಿ, ೬ ನೇ ಬ್ಲಾಕ್ ನ ಶಂಕರಪುರದ ಕೆರೆ ಜಾಗದಲ್ಲಿರುವವರಿಗೆ ಹಾಗೂ ೧೦ ನೇ ಬ್ಲಾಕ್ ವಠಾರಗಳಲ್ಲಿ ಬಾಡೂಟದ ಓಲೈಕೆಯೊಂದಿಗೆ ಮತಯಾಚನೆ ಕಂಡುಬಂದರೆ, ೧ ನೇ ಬ್ಲಾಕ್ ನ ಗಾಂಧೀಪೇಟೆಯ ಶೆಟ್ರು ಬೀದಿಯಲ್ಲಿ , ೭ ನೇ ಬ್ಲಾಕ್ ನ ಬ್ರಾಹ್ಮಣ ಬೀದಿಗಳಲ್ಲಿ ಮತಯಾಚನೆ ಚಿಕ್ಕಾಸು ಖರ್ಚಿಲ್ಲದೆ ಕೇವಲ ಕೈಮುಗಿಯುವುದಕಷ್ಟೆ ಸೀಮಿತವಾಗಿದೆ.
ಚಿಹ್ನೆಗೆ ಮಹತ್ವ : ಆಟೋವನ್ನು ಚಿಹ್ನೆಯಾಗಿ ಪಡೆದವರು ಆಟೋದಲ್ಲಿ ಸಂಚರಿಸುತ್ತಾ ಮತಯಾಚಿಸಿದರೆ, ವಿಶಲ್ , ಹಣ್ಣಿನಬುಟ್ಟಿ , ಪೋನ್,ಉಂಗುರ,ಟಾರ್ಚ್ ನಂತಹ ಗುರುತುಳ್ಳ ಅಭ್ಯರ್ಥಿಗಳು ಅವುಗಳನ್ನು ಪ್ರದರ್ಶಿಸಿಕೊಂಡು ಸಾಗುತ್ತಾ ಮತದಾರರ ಗಮನ ಸೆಳೆಯುತ್ತಿದ್ದಾರೆ. ಗ್ರಾಮದ ಯಾವುದೇ ಮನೆ , ಅಂಗಡಿಗಳಲ್ಲಿ ಹತ್ತಾರೂ ಅಭ್ಯರ್ಥಿಗಳ ಕರಪತ್ರಗಳೇ ರಾರಾಜಿಸುತ್ತಿರುವುದು ಕಂಡುಬರುತ್ತಿದೆ.
ಗೆಲುವಿನ ಲೆಕ್ಕಾಚಾರ : ಹಳ್ಳಿಗಳ ಅರಳಿಕಟ್ಟೆ, ಟೀ ಅಂಗಡಿಗಳಲ್ಲಿ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರದ ಮಾತುಗಳದ್ದೆ ಸದ್ದಾಗಿದ್ದು, ತಮ್ಮತಮ್ಮಲ್ಲೇ ಅಭ್ಯರ್ಥಿಗಳ ಬಗ್ಗೆ ಮಾತಾಡುತ್ತಾ ಆತನ ಜಾತಿ, ಈ ಹಿಂದೆ ಮಾಡಿದ ಕಾರ್ಯಗಳು ಹಾಗೂ ಅಭ್ಯರ್ಥಿಯ ಹಿಂದಿನ ಬೆಂಬಲಿಗರು ಸೇರಿದಂತೆ ಇನ್ನಿತರ ವಿಷಯಗಳನ್ನು ಕ್ರೂಡೀಕರಿಸಿ ಆ ಅಭ್ಯರ್ಥಿ ಗೆಲ್ಲುತ್ತಾನೆ , ಇಲ್ಲ ಈ ಅಭ್ಯರ್ಥಿ ಗೆಲ್ಲುತ್ತಾನೆ ಎಂದು ಹೇಳುತ್ತಿರುವುದು ಕಂಡುಬರುತ್ತಿದೆ.
ಬ್ಯುಸಿಯಾದ ಹೋಟೆಲ್ ಗಳು : ಹುಳಿಯಾರು ಪಟ್ಟಣದಲ್ಲಿ ಸದಾಕಾಲ ವಿರಳ ಗ್ರಾಹಕರಿಂದ ಕೂಡಿರುತ್ತಿದ್ದ ಹೋಟೆಲ್ ಗಳು ಹರಟೆಕಟ್ಟೆಗಳಾಗಿ ಬ್ಯುಸಿಯಾಗಿದ್ದು ಕಂಡುಬರುತ್ತಿದೆ. ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಹೋಟೆಲ್ ಗಳಲ್ಲಿ ಮಾಡಿಸಿದ್ದಾರೆ. ಕೆಲ ಹಳ್ಳಿಕಡೆಯ ಅಭ್ಯರ್ಥಿಗಳು ಸಹ ತಮ್ಮ ಹಿಂಬಾಲಕರನ್ನು ಹುಳಿಯಾರಿನ ಹೋಟೆಲ್ ಗಳಿಗೆ ಕರೆದುಕೊಂಡು ಬಂದು ಊಟ ಕೊಡಿಸಿಕೊಡು ವಾಪಸ್ಸ್ ಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.
ಒಟ್ಟಾರೆ ಹಣ ಖರ್ಚು ಮಾಡುವುದಕ್ಕೆ ಜಗ್ಗದ ಅಭ್ಯರ್ಥಿಗಳು ಗೆದ್ದೇ, ಗೆಲ್ಲಲು ಸಾಕಷ್ಟು ತಂತ್ರಗಾರಿಕೆ ಹೂಡುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ