ವಿಷಯಕ್ಕೆ ಹೋಗಿ

ಹೋಬಳಿಯಾದ್ಯಂತ ಮುಂಗಾರು ಬಿತ್ತನೆ ಪ್ರಗತಿ

ವರದಿ ; ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಹತ್ತದಿನೈದು ದಿನಗಳಿಂದ ಹದ ಮಳೆಯಾದ ಹಿನ್ನಲೆಯಲ್ಲಿ ಈ ಭಾಗದ ಮುಂಗಾರಿನ ಪ್ರಮುಖ ಬೆಳೆಯಾದ ಹೆಸರು ಸೇರಿದಂತೆ ತೊಗರಿ,ಎಳ್ಳು ಹಾಗೂ ಇತರ ಬೆಳೆಗಳ ಬಿತ್ತನೆ ಕಾರ್ಯ ಹೆಚ್ಚು ಪ್ರಗತಿಯಲ್ಲಿದ್ದು , ಎಲ್ಲೆಡೆ ಹೆಸರು,ಎಳ್ಳಿನ ಗಿಡಗಳು ಚಿಗುರೊಡೆದು ನಳನಳಿಸುತ್ತಿವೆ.
ಈ ಬಾರಿ ಪೂರ್ವ ಮುಂಗಾರಿನಲ್ಲಿ ಹದಮಳೆಯಾದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಹೆಸರುಬಿತ್ತನೆ ಮಾಡಲು ಮುಂದಾಗಿದ್ದರು. ಹೋಬಳಿಯ ದಸೂಡಿ,ರಂಗನಕೆರೆ, ಹೊಯ್ಸಳಕಟ್ಟೆ, ಗಾಣಧಾಳು,ಕೆಂಕೆರೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಬಿತ್ತನೆ ಮಾಡಿದ್ದು ಇದೀಗ ಹೆಸರು ಸೊಗಸಾಗಿ ಚಿಗುರೊಡೆದು ನಿಂತಿದ್ದರೆ, ಹೋಬಳಿಯ ಯಳನಡು, ತಿರುಮಲಾಪುರ, ಸೀಗೆಬಾಗಿ, ಬರಕನಹಾಳ್ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕಳೆದೊಂದು ವಾರದಿಂದ ಬಿತ್ತನೆ ಮಾಡುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೧೧೨೫ ಹೆಕ್ಟೇರ್ ನಷ್ಟು ಹೆಸರು, ೧೧೦ ಹೆಕ್ಟೇರ್ ತೊಗರಿ, ೫೪ ಹೆಕ್ಟೇರ್ ಅಲಸಂದೆ, ೫೧ ಹೆಕ್ಟರ್ ಎಳ್ಳು, ೫೦ ಹೆಕ್ಟೇರ್ ಜೋಳದ ಬಿತ್ತನೆಯಾಗಿದೆ. ಮೇ ತಿಂಗಳ ಅಂತ್ಯದವರೆಗೆ ಮುಂಗಾರು ಬೆಳೆಗಳನ್ನು ಬಿತ್ತುವುದಿದ್ದು ಇನ್ನೂ ಹಲವು ಮಂದಿ ರೈತರು ಬಿತ್ತನೆ ಮಾಡುತ್ತಿದ್ದಾರೆ.
ಕಳೆದ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತಾದರೂ ಸಹ ಹೆಸರು ಕಾಯಿಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟು ಹೆಸರಿನ ಇಳುವರಿ ಕುಂಠಿತವಾಗುವಂತೆ ಮಾಡಿತ್ತು. ರೈತರು ಹಾಕಿದ ಬೀಜ,ಗೊಬ್ಬರ, ಬೇಸಾಯದ ಕೂಲಿಗೆ ಸಮನಾಗುವಂತೆ ಹೆಸರುಕಾಳು ಕೈಸೇರಿದ್ದವು. ಈ ಬಾರಿ ಸೂಕ್ತ ಸಮಯದಲ್ಲಿ ಮಳೆಯಾಗುತ್ತಿದ್ದು ಅದೇ ರೀತಿ ಮುಂದೆಯೂ ಸಹ ಮಳೆ ಬಂದರೆ ಹೆಸರು ಹುಲುಸಾಗಿ ಬೆಳೆದು ಕಾಯಿಕಟ್ಟುವುದಲ್ಲದೆ, ಯಾವುದೇ ಕೀಟಬಾಧೆಯಿಲ್ಲದೆ ಹೆಚ್ಚಿನ ಇಳುವರಿಯಾಗುವ ಮೂಲಕ ರೈತರ ಕೈ ಸೇರಲಿದೆ.
ಕಾರ್ಮಿಕರ ಕೊರತೆ: ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಬಳಿ ಜಾನುವಾರುಗಳ ಸಂಖ್ಯೆ ಕೂಡ ಸಾಕಷ್ಟು ಕಡಿಮೆ ಇದೆ. ಹೀಗಾಗಿ ಟ್ರಾಕ್ಟರ್‌ಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಹೊಲವನ್ನು ಸ್ವಚ್ಛಗೊಳಿಸದೆ ಹಾಗೆಯೇ ಹೆಸರು ಕಾಳು ಚೆಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಉಳುಮೆ ಮಾಡಿಸುತ್ತಿದ್ದಾರೆ.
ಎಲ್ಲೆಡೆ ಹೆಸರು ಬಿತ್ತನೆ ಬರದಿಂದ ಸಾಗುತ್ತಿದ್ದು ಕೆಲ ರೈತರು ಈ ಹಿಂದೆ ಸಂಗ್ರಹಿಟ್ಟುಕೊಂಡಿದ್ದ ಹೆಸರುಕಾಳುಗಳನ್ನು ಬಿತ್ತನೆಗೆ ಬಳಸುತ್ತಿದ್ದರೆ ಮತ್ತೆ ಕೆಲ ರೈತರು ಬಿತ್ತನೆ ಬೀಜದ ಹೆಸರು ಕಾಳುಗಳ ಹುಡುಕಾಟ ನಡೆಸಿದ್ದಾರೆ. ಬೀಜದ ಹೆಸರುಕಾಳು ಮಾರುಕಟ್ಟೆಯಲ್ಲಿ ಸಿಗಬಹುದೆಂದು ಕೆಲ ರೈತರು ಮುಖ ಮಾಡಿದ್ದು ಪ್ರತಿ ಕೆಜಿ ಹೆಸರು ಕಾಳಿಗೆ ೭೦ ರಿಂದ ೧೦೦ ಬೆಲೆ ಕೇಳಿ ವಾಪಸ್ಸಾಗುತ್ತಿದ್ದಾರೆ. ತಾವು ಹೆಸರು ಕಾಳನ್ನು ಬೆಳೆದು ಮಾರಲು ಬಂದಾಗ ಮಾತ್ರ ಕೆಜಿಗೆ ೨೫ ರಿಂದ ೩೦ ರೂ ಇರುತ್ತೆ ಆದರೆ ಇದೀಗ ದುಪ್ಪಟ್ಟು ಬೆಲೆಯಾಗಿದ್ದು ನಾವು ಬೆಳೆದು ಮಾರಿದ ಬೆಳೆಗೆ ದುಪ್ಪಟ್ಟು ಹಣಕೊಡುವಂತಾಗಿದೆಯಲ್ಲಾ ಎಂಬುದು ರೈತರ ಮಾತಾಗಿದೆ.
ಒಟ್ಟಾರೆ ಪೂರ್ವ ಮುಂಗಾರು ಉತ್ತವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಎಲ್ಲೆಡೆ ಮುಂಗಾರು ಬೆಳೆ ಹೆಸರನ್ನು ಚೆಲ್ಲಿಸಿರುವಂತೆ ಮುಂದೆ ಬರಲಿರುವ ಮಳೆಗಳೂ ಸಹ ಸೂಕ್ತ ಸಮಯಕ್ಕೆ ಬಂದರೆ ಬಿತ್ತಿದ ಹೆಸರು ರೈತರ ಕೈಸೇರಿ ರೈತರ ಬಾಳು ಹಸನಾಗಲಿದೆ.
---------------
ಹೆಸರುಕಾಳು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇಲ್ಲಿನ ಹೆಸರಿಗೆ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಬೇಡಿಕೆಯಿದ್ದು, ಹುಳಿಯಾರು ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಖರೀದಿ ಆಗುತ್ತದೆ : ಬಾಲಾಜಿ, ಧಾನ್ಯ ರವಾನೆದಾರ, ಹುಳಿಯಾರು.
--------------

ರೈತರಿಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿಜಿಎಸ್-೯ ತಳಿಯ ಬಿತ್ತನೆ ಬೀಜದ ಹೆಸರಿನ ೫ ಕೆಜಿ ಬ್ಯಾಗ್ ಗೆ ಸಬ್ಸಿಡಿದರ ೩೯೦ಕ್ಕೆ ನೀಡುತ್ತಿದ್ದು, ಇದರ ಜೊತೆಗೆ ಬಿಆರ್ ಜಿ-೧ ತಳಿಯ ತೊಗರಿ, ಸಿ೧೫೨ ತಳಿಯ ಅಲಸಂದೆಯನ್ನು ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದೇವೆ : ತಿಫ್ಫೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...