ಗ್ರಾ.ಪಂ.ಯ ಚುನಾವಣೆಯಲ್ಲಿ ಅಂತಿಮವಾಗಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಚಿಹ್ನೆಯನ್ನು ಚುನಾವಣಾಧಿಕಾರಿಗಳು ಸೋಮವಾರ ಪ್ರಕಟಗೊಳಿಸುತ್ತಿದ್ದಂತೆಯೆ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಕರಪತ್ರ ಮುದ್ರಿಸಲು ಪ್ರಿಂಟಿಂಗ್ ಪ್ರೆಸ್ ಗಳಲ್ಲಿಗೆ ಮುಗಿಬಿದಿದ್ದಾರೆ.
ಹುಳಿಯಾರಿನ ಪ್ರಿಂಟಿಂಗ್ ಪ್ರೆಸ್ ಒಂದರ ಮುಂದೆ ಬೈಕ್ ಗಳು ಸಾಲುಗಟ್ಟಿ ನಿಂತಿರುವುದು.
|
ಕಳೆದ ತಿಂಗಳೆಲ್ಲಾ ಮದುವೆ ಹಾಗೂ ಜಾತ್ರಾ ಆಹ್ವಾನ ಪತ್ರಿಕೆಗಳನ್ನು ಪುರುಸೊತ್ತಿಲ್ಲದೆ ಮುದ್ರಿಸಿದ್ದ ಪ್ರಿಂಟಿಂಗ್ ಪ್ರೆಸ್ ನವರಿಗೆ ಇದೀಗ ಬಂದ ಚುನಾವಣೆ ಹಬ್ಬವಾಗಿ ಮತ್ತೊಂದು ಅವಕಾಶ ಕಲ್ಪಿಸಿದೆ. ಕಳೆದೊಂದು ವಾರದಿಂದ ಚುನಾವಣಾ ಕಾವು ಏರುತ್ತಲೇ ಬಂದಿದ್ದರೂ ಸಹ ಗುರುತಿನ ಚಿಹ್ನೆ ಇರುವ ಕರಪತ್ರವಿಲ್ಲದೆ ಪ್ರಚಾರದ ಅಬ್ಬರ ಅಷ್ಟಾಗಿ ಕಂಡುಬಂದಿರಲಿಲ್ಲ. ಇದೀಗ ಚಿಹ್ನೆ ಕೈಗೆ ಸಿಗುತ್ತಿದ್ದಂತೆಯೆ ಸೋಮವಾರ ಸಂಜೆಯೇ ಅಭ್ಯರ್ಥಿಗಳು ಪ್ರೆಂಟಿಂಗ್ ಪ್ರೆಸ್ ಗೆ ಧಾವಿಸಿ ತಮ್ಮ ಹೆಸರು , ಚಿಹ್ನೆ ಹಾಗೂ ಪೋಟೋವನ್ನು ನೀಡಿ ಶೀಘ್ರವೇ ಸಿದ್ದಪಡಿಸಿಕೊಡುವಂತೆ ಪ್ರೆಸ್ ನವರ ಹಿಂದೆ ಬಿದಿದ್ದಾರೆ. ನಾಳೆವರೆಗೂ ಕಾಯಲು ತಯಾರಿಲ್ಲದ ಕೆಲ ಅಭ್ಯರ್ಥಿಗಳು ಹಣ ಎಷ್ಟಾದರೂ ಸರಿ ಈ ಕೂಡಲೇ ಮುದ್ರಿಸಿ ಕೊಡಿ ಎಂದು ದುಂಬಾಲು ಬಿದಿದ್ದು, ಪ್ರೆಸ್ ನವರಿಗೆ ತಲೆನೋವಾಗಿ ಪರಿಣಮಿಸಿದೆ. ಕರಪತ್ರ ಕೈಗೆ ಸಿಗುವುದು ತಡವಾದಲ್ಲಿ ಪ್ರಚಾರಕ್ಕೂ ಅಡಚಣೆಯಾಗುತ್ತದೆಂದು ಪಟ್ಟಣದ ಶ್ರೀಕಾಳಿಕಾಂಬ , ಶ್ರೀಮಾರುತಿ ಹಾಗೂ ದುರ್ಗಾಂಬ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಅಭ್ಯರ್ಥಿಗಳು ಅಲ್ಲಾಡದಂತೆ ಕಾದುಕೂತಿದ್ದರು.
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯ್ತಿಯ ಅಭ್ಯರ್ಥಿಗಳು ಸೇರಿದಂತೆ ಬುಕ್ಕಾಪಟ್ಟಣ, ಪಂಚನಹಳ್ಳಿ ಭಾಗದಿಂದಲೂ ಸಹ ಅಭ್ಯರ್ಥಿಗಳು ಹುಳಿಯಾರಿಗೆ ಬಂದು ಕರಪತ್ರ ಮಾಡಿಸುತ್ತಿದ್ದು, ಎಲ್ಲಾ ಪ್ರಿಂಟಿಂಗ್ ಪ್ರೆಸ್ ಗಳಲ್ಲೂ ಚುನಾವಣೆಯ ಕರಪತ್ರಗಳು ಬಿಡುವಿಲ್ಲದಂತೆ ಮುದ್ರಣವಾಗುತ್ತಿದೆ. ಮದುವೆ, ನಾಮಕರಣ ಹಾಗೂ ಇನಿತರ ಕಾರ್ಯಗಳ ಪತ್ರಿಕೆಗಳನ್ನು ಮಾಡಿಸುವವರಿಗೆ ಅವಕಾಶವೇ ಇಲ್ಲದಂತಾಗಿ ಎಲೆಕ್ಷನ್ ಸೀಸನ್ ಮುಗಿದ ಮೇಲೆ ಏನಿದ್ದರು ಬನ್ನಿ ಎಂದು ವಾಪಸ್ಸ್ ಕಳುಹಿಸುತ್ತಿದ್ದಾರೆ. ಪ್ರತಿನಿತ್ಯ ಸಂಜೆ ೭ ಗಂಟೆ ವೇಳೆಗೆ ಬಾಗಿಲು ಮುಚ್ಚುತ್ತಿದ್ದ ಪ್ರಿಂಟಿಂಗ್ ಪ್ರೆಸ್ ಗಳು ಸೋಮವಾರದಂದು ರಾತ್ರಿ ಪೂರ ಬಿಡುವಿಲ್ಲದೆ ಕೆಲಸ ನಿರ್ವಹಿಸಿ ಅಭ್ಯರ್ಥಿಗಳ ಕರಪತ್ರ ಮುದ್ರಿಸಿಕೊಡುವಷ್ಟರಲ್ಲಿ ಹೈರಾಣೆದ್ದು ಹೋಗಿದೆ.
--------
ಚುನಾವಣೆಯ ಕರಪತ್ರಗಳ ಮುದ್ರಣಕ್ಕಾಗಿ ಬೇಕಾದ ಕಾಗದ ಹಾಗೂ ಇಂಕ್ ಅನ್ನು ಈ ಮೊದಲೇ ತಂದು ದಾಸ್ತಾನು ಮಾಡಿಕೊಂಡಿದ್ದು ಎಷ್ಟೇ ಬೇಡಿಕೆ ಬಂದರೂ ಪೂರೈಸಲು ಸಿದ್ದರಿದೇವೆ. ತರಾತುರಿಯಲ್ಲಿ ಬರುವ ಅಭ್ಯರ್ಥಿಗಳ ಪೈಕಿ ಕೆಲವರು ತಮ್ಮಲ್ಲೇ ಗೊಂದಲ ಮಾಡಿಕೊಂಡು ನಮಗೂ ಗೊಂದಲ ಉಂಟು ಮಾಡುತ್ತಾರೆ : ಚಿದಾನಂದಮೂರ್ತಿ, ಮಾರುತಿ ಪ್ರಿಂಟಿಂಗ್ ಪ್ರೆಸ್, ಹುಳಿಯಾರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ