ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಸ್ವಯಂಸೇವಕ ಯುವಕ ಸಂಘದ ಯುವಕರು ಗ್ರಾಮ ಪಂಚಾಯ್ತಿ ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ " ಎಲೆಕ್ಷನ್, ಇದು ನಿಮ್ಮ ಸೆಲೆಕ್ಷನ್" ಎಂಬ ಶಿರೋನಾಮೆಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜನಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಸ್ವಯಂಸೇವಕ ಯುವಕ ಸಂಘದ ಯುವಕರು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ " ಎಲೆಕ್ಷನ್, ಇದು ನಿಮ್ಮ ಸೆಲೆಕ್ಷನ್" ಎಂಬ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುತ್ತಿರುವುದು. |
ಗ್ರಾ.ಪಂ ಚುನಾವಣೆಯಲ್ಲಿ ಹಣ,ಹೆಂಡ ಸೇರಿದಂತೆ ಇನ್ನಿತರ ಆಮಿಷಗಳನ್ನು ಒಡ್ಡಿ ಕೆಲವರು ಮತದಾರರಿಂದ ಮತ ಪಡೆದರೆ, ಮತ್ತೆ ಕೆಲ ಸದಸ್ಯರು ಆಣೆ ಪ್ರಮಾಣಗಳನ್ನು ಮಾಡಿಸಿಕೊಂಡು ಮತ ಪಡೆಯುತ್ತಿದ್ದು ಮತದಾರರಿಗೆ ಮಂಕುಬೂದಿ ಎರಚುವ ಕಾರ್ಯ ಮಾಡುತ್ತಿದ್ದಾರೆ. ಗೆದ್ದ ನಂತರ ಮತದಾರರನ್ನೇ ಮರೆತು ತಮಿಷ್ಟದಂತೆ ಅಧಿಕಾರ ನಡೆಸುವ ಜನಪ್ರತಿನಿಧಿಗಳ ವಿರುದ್ದ ಜನಸಾಮಾನ್ಯರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವ ದೃಷ್ಠಿಯಿಂದ ಈ ಜನಜಾಗೃತಿ ಕಾರ್ಯ ಮಾಡುತ್ತಿರುವುದಾಗಿ ಸ್ವಯಂಸೇವಕ ಸಂಘದ ಹೊನ್ನಪ್ಪ ತಿಳಿಸಿದರು.
ಮತದಾರರಿಗೆ ಹಂಚುತ್ತಿರುವ ಕರಪತ್ರ. |
ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಪತ್ರ ಮಾಡಿಸಿದ್ದು ಆ ಕರಪತ್ರದಲ್ಲಿ ಹಣಪಡೆದು ಗುಲಾಮರಾಗಬೇಡಿ, ಓಟು ಹಾಕಿ ಶ್ರೀಮಂತರಾಗಿ, ಒಳ್ಳೆಯವರನ್ನು ಆರಿಸುವುದು ನಮ್ಮ ಹಕ್ಕು, ನಿಮ್ಮ ಅಮೂಲ್ಯವಾದ ಓಟು ಗ್ರಾಮದ ಭವಿಷ್ಯ ಬದಲಾಯಿಸಲಿ, ನಾವು ಒಳ್ಳೆಯವರಾದರೆ ಸಾಲದು ನಮ್ಮನ್ನು ಆಳುವವರು ಒಳ್ಳೆಯವರಾಗಿರಬೇಕು,ಪಕ್ಷಕ್ಕಿಂತ ವ್ಯಕ್ತಿ ಮುಖ್ಯ, ಜನಸ್ಪಂದಿತ ಪ್ರತಿನಿಧಿಗಳ ಆಯ್ಕೆ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಎಂಬ ಉದ್ದೇಶಗಳನ್ನು ಕರಪತ್ರದಲ್ಲಿ ಮುದ್ರಿಸಿ ಜನರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಈ ವೇಳೆ ಸ್ವಯಂಸೇವಕ ಸಂಘದ ಶರತ್, ಬಾಲಾಜಿ ಸಿಂಗ್, ಸತೀಶ್, ರಂಗಸ್ವಾಮಿ,ವಿರೂಪಾಕ್ಷ,ಚರಣ್ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ