ರಾಜ್ಯದ್ಯಾಂತ ಗ್ರಾಮಪಂಚಾಯ್ತಿಯ ಚುನಾವಣೆ ಕಾವು ಹೆಚ್ಚಿದ್ದು ಅಂತೆಯೇ ಹುಳಿಯಾರಿನಲ್ಲೂ ಸಹ ಒಂದೆಡೆ ಅಭ್ಯರ್ಥಿಗಳು ಚುನಾವಣೆಯ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಕೆಲ ಸಾರ್ವಜನಿಕರು ಹುಳಿಯಾರು ಗ್ರಾ.ಪಂ.ಚುನಾವಣೆ ನಡೆಸದಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.
ಹುಳಿಯಾರನ್ನು ಪ.ಪಂ.ಯನ್ನಾಗಿಸುವ ತನಕ ಚುನಾವಣೆ ನಡೆಸದಂತೆ ಒತ್ತಾಯಿಸಿ ಪಟ್ಟಣದ ಎಂಜಿನೀಯರ್ ಲಿಂಗರಾಜು,ಫೈಜಲು ಸಾಬ್,ಟೈಲರ್ ಗೋಪಿ,ಮೈಲಾರಪ್ಪ,ಎಂ.ಆರ್ ನಟರಾಜು ಅವರು ವಕೀಲ ಕೃಷ್ಣಮೂರ್ತಿ ಅವರ ಮೂಲಕ ಹೈಕೋರ್ಟ್ ಗೆ ಮೊರೆಹೋಗಲಿದ್ದಾರೆ.
ಕಾರಣ : ಹುಳಿಯಾರು ಗ್ರಾ.ಪಂ. ಪಟ್ಟಣ ಪಂಚಾಯ್ತಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವಲ್ಲಿ ಸರ್ಕಾರ ಹಿಂದೇಟಾಕಿರುವುದನ್ನು ಇಲ್ಲಿನ ಕೆಲ ಸಾರ್ವಜನಿಕರು ಖಂಡಿಸಿದ್ದಾರೆ. ಕಳೆದ ನಾಲ್ಕೈದು ವರ್ಷದಿಂದ ಹುಳಿಯಾರನ್ನು ಪ.ಪಂಯಾಗಿ ಮಾಡುವಂತೆ ಒತ್ತಾಯಿಸಿ ಸಾಕಷ್ಟು ಮನವಿ, ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ೨೦೧೪ರ ಮೇ ತಿಂಗಳಲ್ಲಿ ಬೆಂಗಳೂರಿನ ಪೌರಾಡಾಳಿತ ನಿರ್ದೇಶನಾಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು , ತುಮಕೂರು ಜಿಲ್ಲೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಕೆಲವೊಂದು ಮಾಹಿತಿಯನ್ನು ಹುಳಿಯಾರು ಪಂಚಾಯ್ತಿಯಿಂದ ತುರ್ತಾಗಿ ತರಿಸಿಕೊಂಡಿದ್ದರಾದರೂ ಸಹ ಇಂದು ಮೇಲ್ದರ್ಜೆಗೇರಿಸಿಲ್ಲವೆಂದು ದೂರಿದ್ದಾರೆ.
ಹುಳಿಯಾರು ಗ್ರಾ.ಪಂ. ೨೮೯೯ ಎಕರೆ ೧೬ ಗುಂಟೆ ವಿಸ್ತೀರ್ಣ ಹೊಂದಿದ್ದು, ೨೦೧೧ರ ಜನಗಣತಿ ಅನ್ವಯ ೧೫೪೧೩ ಜನಸಂಖ್ಯೆಇದ್ದು ಇದೀಗ ಅಂದಾಜು ೨೦ ಸಾವಿರದಷ್ಟಾಗಿದೆ. ಅಲ್ಲದೆ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾ.ಪಂ ಹಾಗೂ ಬರೋಬರಿ ೩೩( ಈ ಬಾರಿ ಚುನಾವಣೆಯಲ್ಲಿ ೩೯) ಸದಸ್ಯ ಸ್ಥಾನವನ್ನು ಹೊಂದಿರುವ ಹೆಗ್ಗಳಿಕೆ ಹೊಂದಿರುವುದರ ಜೊತೆಗೆ ಹೆಚ್ಚಿನ ಅಂದಾಯ ಹುಳಿಯಾರು ಪಂಚಾಯ್ತಿಯಲ್ಲಿ ಬರುತ್ತಿದೆ. ಇಷ್ಟೇಲ್ಲಾ ಅರ್ಹತೆ ಇದ್ದರೂ ಪ.ಪಂ.ಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ ಹಾಗೂ ಈ ರೀತಿ ಹಿಂದೇಟಾಕಲು ಕಾರಣವೇನೆಂಬುದು ಕೋರ್ಟ್ ಮೂಲಕವೇ ಬಯಲಿಗೆ ತರುವ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲೇರಿರುವುದಾಗಿ ಎಂಜಿನೀಯರ್ ಲಿಂಗರಾಜು ತಿಳಿಸುತ್ತಾರೆ.
ಹುಳಿಯಾರು ಪಟ್ಟಣ ಪಂಚಾಯಾದರೆ ಸದಸ್ಯರ ಸ್ಥಾನ ಕಡಿಮೆಯಾಗುತ್ತದೆ ಈಗಿರುವ ಕೆಲ ಗ್ರಾ.ಪಂ.ಸದಸ್ಯರು ನಾವು ಗೆಲ್ಲುತ್ತೇವೆ ಇಲ್ಲವೋ ಎಂಬ ಭಯದಿಂದ ತಮ್ಮ ರಾಜಕೀಯ ತಂತ್ರಬಳಸಿದ್ದಾರೆ. ಹಾಲಿ ಶಾಸಕರಾಗಲಿ, ಮಾಜಿ ಶಾಸಕರಾಗಲಿ ಹಾಗೂ ಸಂಸದರು ಈ ಬಗ್ಗೆ ಮಾತನಾಡುತ್ತಾರೆ ಹೊರತು ಯಾವುದೇ ದೃಢ ನಿರ್ಧಾರಕ್ಕೆ ಮುಂದಾಗಿಲ್ಲ ಇದನ್ನು ಗಮನಿಸಿದರೆ ಇವರುಗಳಿಗೂ ಸಹ ಹುಳಿಯಾರು ಪ.ಪಂ ಆಗುವುದು ಬೇಡವೇನೋ ಎಂಬ ಅಭಿಪ್ರಾಯ ಮೂಡುವಂತೆ ಮಾಡಿದೆ ಎಂದು ಮೈಲಾರಪ್ಪ ದೂರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ