ಮಾಹಿತಿ ಹಕ್ಕು ಕಾಯ್ದೆ-೨೦೦೫ರಂತೆ ಅಗತ್ಯ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದವರಿಗೆ ಮಾಹಿತಿ ನೀಡದೆ ಕಾಯ್ದೆ ಉಲ್ಲಂಘಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿ ಚಿಕ್ಕನಾಯಕನಹಳ್ಳಿಯ ತಹಸೀಲ್ದಾರ್ ಅವರಿಗೆ ರಾಜ್ಯ ಮಾಹಿತಿ ಅಯೋಗ ೨೫ ಸಾವಿರ ದಂಡ ವಿಧಿಸಿದೆ.
ಹುಳಿಯಾರು ಪಟ್ಟಣದ ಬಸವೇಶ್ವರ ನಗರದ ನಿವಾಸಿ ರವಿಮೂರ್ತಿ ಎಂಬುವವರು ದಿನಾಂಕ ೧೯.೦೨.೨೦೧೪ ರಂದು ಮಾಹಿತಿ ಕೇಳಿ ಚಿ.ನಾ.ಹಳ್ಳಿ ತಾಲ್ಲೂಕ್ ತಹಸೀಲ್ದಾರ್ ಕಾಮಾಕ್ಷಮ್ಮ ಅವರಿಗೆ ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನುನಿಗದಿತ ಅವಧಿಯೊಳಗೆ ನೀಡಿರುವುದಿಲ್ಲ. ನಂತರ ತಿಪಟೂರು ಉಪವಿಭಾಗಾಧಿಕಾರಿ ಅವರಿಗೆ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಗಳು ಸಹ ಮಾಹಿತಿ ನೀಡುವಂತೆ ತಹಸೀಲ್ದಾರ್ ಅವರಿಗೆ ನಿರ್ದೇಶಿಸಿದ್ದರೂ ಸಹ ಈ ಬಗ್ಗೆ ನಿರ್ಲಕ್ಷಿಸಿದ ತಹಸೀಲ್ದಾರ್ ವಿರುದ್ದ ಮಾಹಿತಿ ಆಯೋಗಕ್ಕೆ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿದ ಅಯೋಗ ಮಾಹಿತಿ ನೀಡುವಂತೆ ತಹಸೀಲ್ದಾರ್ ಅವರಿಗೆ ನಿರ್ದೇಶಿಸಿ ಮಾಹಿತಿ ನೀಡದೆ ಹೋದಲ್ಲಿ ದಂಡ ವಿಧಿಸಲಾಗುವುದೆಂದು ನಿರ್ದೇಶಿಸಿತ್ತು.
ತಹಸೀಲ್ದಾರ್ ಕಾಮಾಕ್ಷಮ್ಮ ಅವರು ಅರ್ಜಿದಾರರಿಗೆ ನಿಗಧಿ ಸಮಯದಲ್ಲಿ ಮಾಹಿತಿ ನೀಡದೆ ಇರುವುದು , ಉಪವಿಭಾಗಾಧಿಕಾರಿಗಳ ಮೆಲ್ಮನವಿ ವಿಚಾರಣೆಯ ನಂತವೂ ಸಹ ಮಾಹಿತಿ ಒದಗಿಸದಿರುವುದು ಹಾಗೂ ದಂಡ ವಿಧಿಸಲಾಗುವುದೆಂದು ನಿರ್ದೇಶನ ನೀಡಿದ್ದರೂ ಸಹ ಯಾವುದೇ ರೀತಿಯ ಲಿಖಿತ ಸಮಜಾಯಿಸಿ ನೀಡದೇ ಇರುವುದರಿಂದ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ಕಾಲಂ೨೦(೧) ರನ್ವಯ ಅರ್ಜಿದಾರರಿಗೆ ಉದ್ದೇಶಪೂರ್ವಕವಾಗಿಯೇ ಮಾಹಿತಿ ನೀಡಿರುವುದಿಲ್ಲವೆಂದು ಅಯೋಗ ಪರಿಗಣಿಸಿದ್ದು ತಹಸೀಲ್ದಾರ್ ಅವರಿಗೆ ೨೫ ಸಾವಿರ ರೂ ದಂಡ ವಿಧಿಸಿದೆ.
ಸಾರ್ವಜನಿಕ ಅಧಿಕಾರಿಯಾಗಿರುವ ತಹಸೀಲ್ದಾರ್ ಕಾಮಾಕ್ಷಮ್ಮಅವರಿಗೆ ಅಯೋಗವು ವಿಧಿಸಿರುವ ದಂಡವನ್ನು ಅವರ ಮುಂದಿನ ೫ ತಿಂಗಳುಗಳ ಸಂಬಳದಲ್ಲಿ ತಲಾ ೫ ಸಾವಿರದಂತೆ ಕಡಿತಗೊಳಿಸುವುದಾಗಿ ತಿಳಿಸಿದೆ.
ಅರ್ಜಿದಾರರು ಕೋರಿದ ಮಾಹಿತಿಯನ್ನು ೩೦ ದಿನಗಳೊಳಗಾಗಿ ಉಚಿತ ನೊಂದಾಯಿತಿ ಅಂಚೆ ಸ್ವೀಕ್ತಿ ಮುಖಾಂತರ ದೃಢೀಕರಿಸಿದ ಮಾಹಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಹಾಗೂ ಮುಂದಿನ ವಿಚಾರಣೆ ದಿನಾಂಕದಂದು ವರದಿಯನ್ನು ಸಲ್ಲಿಸುವಂತೆ ಅಯೋಗವು ತಹಸೀಲ್ದಾರ್ ಅವರಿಗೆ ನಿರ್ದೇಶಿಸಿದೆ.
ಒಟ್ಟಾರೆ ಮಾಹಿತಿ ನೀಡದ ಸಾರ್ವಜನಿಕ ಅಧಿಕಾರಿಗೆ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿರುವುದು ಇತರ ಅಧಿಕಾರಿಗಳಿಗೆ ತಕ್ಕ ಪಾಠವಾಗಿದ್ದು . ಇನ್ನಾದರೂ ಸಾರ್ವಜನಿಕ ಅಧಿಕಾರಿಗಳು ಎಚ್ಚೆತ್ತು ಆರ್.ಟಿ.ಐ ನಡಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಸೂಕ್ತ ಮಾಹಿತಿ ನೀಡಲು ಮುಂದಾಗಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ