ಹುಳಿಯಾರು ಹೋಬಳಿ ದಸೂಡಿ, ದಬ್ಬಗುಂಟೆ ಭಾಗದಲ್ಲಿ ಶುಕ್ರವಾರ ಹಾಗೂ ಶನಿವಾರದಂದು ಹದ ಮಳೆಯಾಗಿದ್ದು, ತೋಟ ತುಡಿಕೆ ತುಂಬಿ ಕೆರೆಗಳಿಗೆ ನೀರು ಬಂದಿರುವುದಲ್ಲದೆ, ಮಳೆಯಿಂದಾಗಿ ಮುಂಗಾರು ಬೆಳೆ ಹೆಸರು ನಳನಳಿಸುತ್ತಿದ್ದು ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ.
ಶನಿವಾರ ರಾತ್ರಿ ಬಂದ ಮಳೆಯಿಂದಾಗಿ ಹುಳಿಯಾರು ಹೋಬಳಿ ರಂಗನಕೆರೆಯ ಸಮೀಪದ ಒಡ್ಡು ತುಂಬಿ ಹರಿಯುತ್ತಿರುವುದು. |
ಶುಕ್ರವಾರ ಹೋಬಳಿಯ ಕೆಂಕೆರೆ, ದಸೂಡಿ,ದಬ್ಬಗುಂಟೆ, ಹೊಯ್ಸಳಕಟ್ಟೆ ಈ ಭಾಗದಲ್ಲಿ ಮಳೆಯಾಗಿತ್ತು. ಶನಿವಾರ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಯಾಗಿದೆ. ಕಳೆದೊಂದು ವಾರದಿಂದ ಮಳೆ ಬಾರದೆ ಚಿಗುರೊಡೆದಿದ್ದ ಹೆಸರು ಬಿಸಿಲ ಝಳಕ್ಕೆ ತತ್ತರಿಸಿ ಇನ್ನೇನು ಒಣಗಿ ಹೋಗಿತು ಎನ್ನುವಂತ ಸ್ಥಿತಿ ತಲುಪಿದ್ದ ಸಮಯದಲ್ಲಿ ವರುಣ ಕೃಪೆ ತೋರಿದ್ದಾನೆ. ಈಗ ಮತ್ತೆ ಹೆಸರು ಗಿಡಗಳು ಅಚ್ಚ ಹಸಿರಿನಿಂದ ಕಂಗೊಳಿಸುವಂತಾಗಿದೆ. ಈ ಮಳೆ ಹೆಸರು ಗಿಡಗಳು ಹೂ ಬಿಡಲು ಸಹಕಾರಿಯಾಗಿದ್ದು ಮುಂದೆಯೂ ಸಹ ಮಳೆ ಬಂದರೆ ಹೆಸರು ಉತ್ತಮವಾಗಿ ಕಾಯಿ ಕಟ್ಟುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.
ಸಿಡಿಲಿಗೆ ಮಹಿಳೆ ಬಲಿ : ಶನಿವಾರ ರಾತ್ರಿ ಮಳೆಯೊಂದಿಗೆ ಉಂಟಾದ ಸಿಡಿಲಿಗೆ ದಬ್ಬಗುಂಟೆ ಗ್ರಾಮದ ಕರಿಯಮ್ಮ(೫೮) ಎಂಬಾಕೆ ಮೃತಪಟ್ಟಿದ್ದಾರೆ. ಮನೆಯ ಒಪ್ಪಾರಿನಲ್ಲಿ ಕುಳಿತಿದ್ದ ಕರಿಯಮ್ಮನಿಗೆ ಸಿಡಿಲ ಜ್ವಾಲೆ ಬಡಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮನೆಯ ಒಳಗಿದ್ದ ಆಕೆಯ ಮಗಳು ಚಂದ್ರಮ್ಮನಿಗೂ ಸಿಡಿಲ ಕಾವು ತಗುಲಿ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಕಂದಾಯ ತನಿಖಾಧಿಕಾರಿ ಹನುಮಂತನಾಯಕ್ ಭೇಟಿ ನೀಡಿದ್ದರು.
ದಸೂಡಿ ಭಾಗದಲ್ಲಿ ಶನಿವಾರ ಸಂಜೆಯಿಂದ ಪ್ರಾರಂಭವಾದ ಮಳೆ ಮಧ್ಯರಾತ್ರಿವರೆಗೂ ಸುರಿದಿದ್ದು ತೋಟತುಡಿಕೆ, ಒಡ್ಡು, ಪಿಕಪ್ ಗಳ ತುಂಬ ಮಳೆ ನೀರು ತುಂಬಿದ್ದು ಈ ಭಾಗದ ದೇವರಮರಡಿಕೆರೆ, ರಾಮಪ್ಪನ ಕೆರೆ, ಸೋಮನಹಳ್ಳಿ ಕೆರೆಗೂ ಸಹ ನೀರು ಬಂದಿದೆ. ಉತ್ತಮ ಮಳೆಯಾಗಿ ತೋಟಗಳು ತುಂಬಿರುವುದು ತೆಂಗಿಗೆ ಹೆಚ್ಚು ಅನುಕೂಲವಾಗಿದೆ. ಬೋರನಕಣಿವೆ ಮಳೆಮಾಪನ ಕೇಂದ್ರದಲ್ಲಿ ೩೧.೪ ಮಿ.ಮೀ ಹಾಗೂ ಹುಳಿಯಾರು ಮಳೆ ಮಾಪನ ಕೇಂದ್ರದಲ್ಲಿ ೧೨.೫ ಮೀ.ಮೀ ಮಳೆಯಾಗಿರುವುದಾಗಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ