ಜೂನ್ ೨ ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಬಹಿರಂಗಪ್ರಚಾರ ನಡೆಯುತ್ತಿದ್ದು ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ತಮ್ಮತಮ್ಮಲ್ಲಿ ಯಾವುದೇ ರೀತಿಯ ಗಲಾಟೆ, ಗದ್ದಲಗಳನ್ನು ಮಾಡಿಕೊಂಡು ಕಲಹಕ್ಕೆ ದಾರಿ ಮಾಡಿಕೊಡದೆ ಶಾಂತಯುತವಾಗಿ ಚುನಾವಣಾ ಪ್ರಚಾರ ಮಾಡಿಕೊಳ್ಳಿ ಎಂದು ಚಿ.ನಾ.ಹಳ್ಳಿಯ ಸರ್ಕಲ್ ಇಸ್ಪೆಕ್ಟರ್ ಎ.ಮಾರಪ್ಪ ತಿಳಿಸಿದರು.
ಹುಳಿಯಾರಿನ ದುರ್ಗಮ್ಮನ ದೇವಾಲಯದ ಆವರಣದಲ್ಲಿ ನಡೆದ ಚುನಾವಣಾ ಪೂರ್ವ ಶಾಂತಿ ಸಭೆಯಲ್ಲಿ ಸಿಪಿಐ ಮಾರಪ್ಪ ಮಾತನಾಡಿದರು. |
ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಪೋಲಿಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಚುನಾವಣ ಸಮಯದಲ್ಲಿ ಶಾಂತಿ ಕಾಪಾಡುವ ಬಗ್ಗೆ ಮಾತನಾಡಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳು ಇತರ ಚುನಾವಣೆಗಿಂತ ಭಿನ್ನವಾಗಿ ನಡೆಯುವುದಿದ್ದು ಸ್ಪರ್ಧಿಸಿದ ಪ್ರತಿಯೊಬ್ಬರು ನಾನು ಗೆಲ್ಲಬೇಕು ಎಂಬ ಹಂಬಲದಿಂದ ಮತದಾರರ ಓಲೈಕೆಗೆ ಮುಂದಾಗುತ್ತಾರೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಲು ಮುಂದಾಗಿ ಗಲಾಟೆ ಗದ್ದಲಗಳುಂಟಾಗುತ್ತವೆ ಎಂದರು. ಮತದಾರರಿಗೆ ಆಮಿಷವೊಡ್ಡುವುದು ಕಾನೂನು ಬಾಹಿರವಾಗಿದ್ದು ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದೆಂದರು. ಮತದಾರರ ಬ್ಲಾಕ್ ಗಳಲ್ಲಿ ಹಣ, ಹೆಂಡ ಹಂಚುವುದು ಹಾಗೂ ಶಾಂತಿಗೆ ಧಕ್ಕೆತರುವಂತಹ ಘಟನೆಗಳು ಕಂಡುಬಂದಲ್ಲಿ ಠಾಣೆಯ ಗಮನಕ್ಕೆ ತರುವಂತೆ ತಿಳಿಸಿದರು.
ಹುಳಿಯಾರು ಠಾಣೆಯ ಪಿಎಸೈ ಬಿ.ಪ್ರವೀಣ್ ಕುಮಾರ್ ಮಾತನಾಡಿ , ಹುಳಿಯಾರಿನಲ್ಲಿ ಈ ಬಾರಿಯ ಚುನಾವಣೆ ಹೆಚ್ಚು ಕಾವುಪಡೆದಿದೆ. ಮತದಾನದ ದಿನದಂದು ಯಾವುದೇ ಪ್ರಚಾರ ನಡೆಸದೆ ಶಾಂತರೀತಿಯಲ್ಲಿ ನಡೆದುಕೊಳ್ಳುವಂತೆ ತಿಳಿಸಿದರು. ಚುನಾವಣೆಯ ಅಂಗವಾಗಿ ಹೆಚ್ಚುವರಿ ಪೋಲಿಸ್ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂಜಾಗರಣ ವೇದಿಕೆಯ ಅಧ್ಯಕ್ಷ ಬಡಗಿರಾಮಣ್ಣ, ಪಟೇಲ್ ರಾಜ್ ಕುಮಾರ್, ಭವಾನಿ ರಮೇಶ್, ಬಾಲಣ್ಣ, ಹನೀಪ್ ,ಪೈಲ್ವಾನ್ ಜಯಣ್ಣ ಜಯಲಕ್ಷ್ಮಮ್ಮ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ