ಎಂಎಲ್ ಎ ಹಾಗೂ ಎಂಪಿ ಚುನಾವಣೆಗಳಿಗಿಂತ ಗ್ರಾ.ಪಂ ಚುನಾವಣೆ ಹೆಚ್ಚು ಬಿರುಸಿನಿಂದ ನಡೆಯಲಿದ್ದು , ಇಲ್ಲಿ ಪ್ರತಿಯೊಂದು ಮತಕ್ಕು ಹೆಚ್ಚು ಮನ್ನಣೆಯಿದೆ. ಒಂದೊಂದು ಮತ ಪಡೆಯಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ಮಾಡುವಂತಾಗಿದೆ.
ಜೂನ್ ೨ ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರದಿಂದ ಮೂರ್ನಾಲ್ಕು ದಿನ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಕೆಲ ಅಭ್ಯರ್ಥಿಗಳು ತಾವು ಈ ಹಿಂದೆ ಮಾಡಿದ ಕಾರ್ಯಗಳನ್ನು ಹೇಳುತ್ತಾ ಮತಯಾಚಿಸಿದರೆ, ಮತ್ತೆ ಕೆಲವರು ತಮ್ಮದೇ ಆದ ಧ್ಯೇಯಗಳನ್ನೊಳಗೊಂಡ ಕರಪತ್ರಗಳನ್ನು ಮಾಡಿಸಿ ಮತದಾರರಿಗೆ ನೀಡುವ ಮೂಲಕ ಮತಯಾಚಿಸುತ್ತಿದ್ದಾರೆ.ಇನ್ನುಳಿದ ಅಭ್ಯರ್ಥಿಗಳು ಸದಾ ತಮ್ಮ ಕೈಲಿ ಕರಪತ್ರಗಳನ್ನು ಹಿಡಿದು ತಮ್ಮ ಬ್ಲಾಕ್ ನವರು ಎಲ್ಲಾದರೂ ಕಂಡರೆ ಸಾಕು ತಮಗೊಂದು ಓಟು ಕೊಡಿ, ಮರೆಯಬೇಡಿ ನಮ್ಮ ಗುರುತು ಗೊತ್ತಲ್ಲ ಎಂದು ಕೇಳಿಕೊಳ್ಳುತ್ತಿದ್ದಾರೆ.
ಹುಳಿಯಾರು ಗ್ರಾ.ಪಂ. ಚುನಾವಣೆಯಲ್ಲಿ ಫೇಸ್ ಬುಕ್ , ವಾಟ್ಸ್ ಅಪ್ ಕೂಡ ಬಳಕೆಯಾಗುತ್ತಿದ್ದು ಅಭ್ಯರ್ಥಿಗಳು ವಾಟ್ಸ್ ಅಪ್ ನಲ್ಲಿ ಮತಯಾಚನೆ ಮಾಡಿರುವ ಚಿತ್ರ. |
ಹುಳಿಯಾರಿನ ೭ ನೇ ಬ್ಲಾಕ್ ನ ಅಭ್ಯರ್ಥಿ ಬಿ.ಎಸ್.ಮೋಹನ್ ಅವರು ತಮ್ಮದೇ ಆದ ಧ್ಯೇಯಗಳನ್ನೊಳಗೊಂಡ ಕರಪತ್ರ ಮಾಡಿಸಿ , ಅದನ್ನು ಮತದಾರರಿಗೆ ನೀಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಅವರು ಮಾಡಿಸಿರುವ ಕರಪತ್ರದಲ್ಲಿ ಸೌರದೀಪದ ಅಳವಡಿಕೆ, ಗುಣಮಟ್ಟದ ಸಿಮೆಂಟ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ಚರಂಡಿ ಸ್ವಚ್ಚತೆಗೆ ಹೆಚ್ಚು ಪ್ರಾತಿನಿಧ್ಯ, ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಂದರ ಉದ್ಯಾನವನ ನಿರ್ಮಾಣ, ರಸ್ತೆ ಬದಿ ವ್ಯಾಪ್ರಿಗಳಿಗೆ ಕಾನೂನು ಚೌಕಟ್ಟಿನಲ್ಲಿ ರಕ್ಷಣೆ, ಗ್ರಾ.ಪಂ.ಗೆ ಬರುವ ಅನುದಾನವನ್ನು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸುವುದು, ಶುದ್ದ ಕುಡಿಯುವ ನೀರಿನ ಸಮರ್ಪಕ ವಿತರಣೆ, ಹುಳಿಯಾರನ್ನು ಪಟ್ಟಣ ಪಂಚಾಯ್ತಿಯನ್ನಾಗಿಸಲು ಹೋರಾಟ, ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಂತಹ ಹತ್ತಾರು ಅಭಿವೃದ್ದಿ ಕಾರ್ಯಗಳನ್ನು ತಾವು ಮಾಡಿಸುವುದಾಗಿ ತಿಳಿಸುತ್ತಾ ಮತದಾರರ ಮನವೊಲಿಸುತ್ತಿದ್ದಾರೆ.
ಹೈಟೆಕ್ ಪ್ರಚಾರ : ಮನೆಮನೆ ಪ್ರಚಾರದೊಂದಿಗೆ ಈ ಬಾರಿ ಹೈಟೆಕ್ ಪ್ರಚಾರಕ್ಕೂ ಕೆಲವರು ಮೊರೆಹೋಗಿದ್ದಾರೆ. ಹಳ್ಳಿಗಳಲ್ಲೂ ಕೂಡ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಪೋನ್ ಇರುವುದರಿಂದ ಫೇಸ್ ಬುಕ್ ಹಾಗೂ ವಾಟ್ಸ್ ಅಪ್ ಅನ್ನು ಸಮರ್ಥವಾಗಿ ಬಳಸಿಕೊಂಡು ಸುಲಭವಾಗಿ ಅವರುಗಳನ್ನು ತಲುಪುವಂತಾಗಿದೆ. ಈ ನಿಟ್ಟಿನಲ್ಲಿ ಕೆಲವರು ಫೇಸ್ ಬುಕ್ ನಲ್ಲಿ ಹಾಗೂ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಕರಪತ್ರ ಸೇರಿದಂತೆ ಮತಯಾಚನೆಯ ಹಾಗೂ ತಮ್ಮ ಚಿಹ್ನೆ ,ಭಾವಚಿತ್ರವುಳ್ಳ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.
ಒಟ್ಟಾರೆ ಮತದಾರರ ಮನವೊಲಿಸಲು ನಾನಾ ರೀತಿಯ ಕಸರತ್ತುಗಳು ನಡೆಯುತ್ತಿದ್ದು ಪಟ್ಟಣದ ಟೀ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಚುನಾವಣೆಯದ್ದೆ ಸದ್ದಾಗಿದೆ.ಯಾವ ಬ್ಲಾಕ್ ನಲ್ಲಿ ಯಾರು ನಿಂತಿದ್ದಾರೆ, ಯಾರ ವರ್ಚಸ್ಸು ಹೆಚ್ಚಿದೆ ಯಾರಯಾರ ನಡುವೆ ಹೆಚ್ಚಿನ ಪೈಪೋಟಿಯಿದೆ ಎಂಬ ಮಾತುಗಳೇ ಕೇಳಿ ಬರುತ್ತಿದೆ.
---------
ಹಿಂದಿನ ಅವಧಿಯ ಅಭಿವೃದ್ದಿಕಾರ್ಯದ ಬಗ್ಗೆ ಯಾರ ಚಕಾರವೆತ್ತುತ್ತಿಲ್ಲ ಗೆದ್ದರೆ ಏನು ಮಾಡುತ್ತೀವೆ ಎಂದು ಹೇಳುತ್ತಾರೆ ಹೊರತು ಗೆದ್ದ ನಂತರ ಯಾರೊಬ್ಬರು ತಿರುಗಿ ನೋಡುವುದಿಲ್ಲ, ಅದರೂ ಕೂಡ ಚುನಾವಣೆಗೆ ಪೈಪೋಟಿ ನಡೆಯುವುದು ಸಾಮಾನ್ಯವಾಗಿದೆ : ಸತೀಶ್, ೬ನೇ ಬ್ಲಾಕ್ ಮತದಾರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ