ವಿಷಯಕ್ಕೆ ಹೋಗಿ

ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ನಲುಗಿದ ದಾಳಿಂಬೆ, ಬಾಳೆ ಹಾಗೂ ಟೊಮೋಟೊ : ಆರ್ಥಿಕ ಸಂಕಷ್ಟದಲ್ಲಿ ರೈತ

ವರದಿ : ಡಿ.ಆರ್.ನರೇಂದ್ರ ಬಾಬು
-------------
ಹುಳಿಯಾರು : ಹೋಬಳಿಯಾದ್ಯಂತ ಶುಕ್ರವಾರ ಸಂಜೆ ವರುಣನ ಅವಾಂತರ ಜೋರಾಗಿತ್ತು. ಗುಡುಗು,ಸಿಡಿಲು ಸಹಿತ ಒಂದು ಗಂಟೆಗಳ ಕಾಲ ಸುರಿದ ಆಲಿಕಲ್ಲು ಸಹಿತ ಮಳೆಗೆ ನೂರಾರು ಎಕರೆ ಪ್ರದೇಶದ ದಾಳಿಂಬೆ ಬೆಳೆ, ಬಾಳೆ ಹಾಗೂ ಟಮೋಟೊ ಬೆಳೆ ನಲುಗಿದ್ದು ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.


ಹೋಬಳಿಯ ಕೆಂಕೆರೆ, ಬಸವನಗುಡಿ, ಪುರದಮಠ, ಬರದಲೇಪಾಳ್ಯ, ಮೇಲನಹಳ್ಳಿ, ಗುರುವಾಪುರ, ದಸೂಡಿ,ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಎಣ್ಣೆಗೆರೆ, ಉಪ್ಪಿನಕಟ್ಟೆ , ಯಳನಡು ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಮುಂಗಾರು ಬೆಳೆ ಹೆಸರಿಗೆ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿನ್ನೆ ಸಂಜೆಯ ಮಳೆಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಯಿತು. ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಬಾಳೆ ಬೆಳೆಗಾರರಿಗೂ ಕೂಡ ಆಲಿಕಲ್ಲಿನ ಹೊಡೆತ ಅಪಾರ ನಷ್ಟಕ್ಕೀಡು ಮಾಡಿದೆ. ಬಾರಿ ಗಾಳಿಗೆ ಮಾವಿನಕಾಯಿ ಉದುರಿದ್ದು ಒಂದೆಡೆಯಾದರೆ ಮರದಲ್ಲಿನ ಕಾಯಿಗಳು ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿದ್ದು ಮಾವು ಗುತ್ತಿಗೆದಾರರನ್ನು ಚಿಂತೆಗೀಡುಮಾಡಿದೆ.
ದಾಳಿಂಬೆ : ದಾಳಿಂಬೆ ಕೃಷಿ ಮಾಡುವುದರಿಂದ ಉತ್ತಮ ಆದಾಯ ಬರುತ್ತದೆಂಬ ನಿರೀಕ್ಷೆಯಿಂದ ರೈತರು ವಾಣಿಜ್ಯ ಬೆಳೆಯಾದ ದಾಳಿಂಬೆಯನ್ನು ಈ ಭಾಗದಲ್ಲಿ ಹೆಚ್ಚು ಜನ ಕೃಷಿ ಮಾಡುತ್ತಿದ್ದು, ಬ್ಯಾಂಕ್ ಹಾಗೂ ಪರಿಚಯಸ್ಥರಿಂದ ಸಾಲ ಪಡೆದು ಆ ಹಣವನ್ನೆಲ್ಲಾ ದಾಳಿಂಬೆಗೆ ಖರ್ಚು ಮಾಡಿದ್ದರು. ನಿನ್ನೆಯ ಮಳೆ ಈಗಾಗಲೇ ಹಣ್ಣಿಗೆಬಿಟ್ಟಿದ್ದ ದಾಳಿಂಬೆಗೂ ಮುಳುವಾಗಿದೆ. ದುಬಾರಿ ಕೂಲಿ, ಲೋಡ್ ಗಟ್ಟಲೆ ಗೊಬ್ಬರ ಹಾಕಿ ಮನೆಮಂದಿಯೆಲ್ಲಾ ತೋಟದಲ್ಲೆ ಕಾಲಕಳೆದು ದಾಳಿಂಬೆ ಗಿಡಗಳನ್ನು ಆರೈಕೆ ಮಾಡಿ ಬೆಳೆಸಿದ್ದು ಇದೀಗ ವ್ಯರ್ಥವಾಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ. ಆಲಿಕಲ್ಲು ಹೊಡೆತಕ್ಕೆ ಸಿಕ್ಕಿ ಹಣ್ಣೆಲ್ಲಾ ಬಾಯಿ ಬಿಟ್ಟು ನೆಲಕ್ಕೆ ಬಿದ್ದಿದ್ದರೆ, ಮತ್ತೆಕೆಲವೆಡೆ ದಾಳಿಂಬೆ ಗಿಡಗಳ ಕೊಂಬೆಗಳು ಮುರಿದುಕೊಂಡು ನೆಲಕಚ್ಚಿದ್ದು ಕೈಗೆ ಬಂದ ತುತ್ತುಬಾಯಿಗೆ ಬಾರದಂತಾಗಿದೆ.
ದಾಳಿಂಬೆಯನ್ನು ಹಣ್ಣಿಗೆ ಬಿಟ್ಟಿದ್ದು ಇನ್ನೊಂದು ವಾರದಲ್ಲಿ ಹಣ್ಣು ಬಿಡಿಸಬೇಕಾಗಿತ್ತು, ವ್ಯಾಪಾರಿಗಳು ಸಹ ಬಂದು ನೋಡಿಕೊಂಡು ಹೋಗಿದ್ದರು. ಇದೀಗ ಆಲಿಕಲ್ಲು ಮಳೆಗೆ ಸಿಕ್ಕಿ ನೂರಾರು ಕೆಜಿ ದಾಳಿಂಬೆ ನೆಲಕ್ಕೆ ಬಿದ್ದದ್ದೆ. ಗಿಡದಲ್ಲಿರುವ ದಾಳಿಂಬೆ ಹಣ್ಣನ್ನು ಮಾರೋಣ ಎಂದರೆ ಯಾರು ಕೇಳುತ್ತಿಲ್ಲ ನಾವು ಮಾಡಿದ್ದ ಖರ್ಚು ಸಹ ಸಿಗದಂತಾಗಿದೆ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಮೇಲನಹಳ್ಳಿ ಸಿದ್ದೇಗೌಡ.
ಇದೀಗ ಹಣ್ಣು ಬಿಡಿಸುವ ಸಮಯದಲ್ಲಿ ನಿರೀಕ್ಷಿಸದ ರೀತಿಯಲ್ಲಿ ಮಳೆಗೆ ಸಿಕ್ಕಿದ್ದು ಮುಂದೇನೆಂದು ದಾರಿ ತೋಚದಾಗಿದೆ. ಈಗಿನ ಸ್ಥಿತಿಯಲ್ಲಿ ಮಾಡಿದ ಸಾಲವನ್ನು ತೀರಿಸುವುದೇಗೆ. ಈ ಬಗ್ಗೆ ಸರ್ಕಾರ ಗಮನಹರಿಸಿ ದಾಳಿಂಬೆ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕಲ್ಪಿಸಿಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಉಪ್ಪಿನಕಟ್ಟೆಯ ದಾಳಿಂಬೆ ಬೆಳೆಗಾರ ಬಸವರಾಜು ಅಲವತ್ತು ಕೊಳ್ಳುತ್ತಾರೆ.
ನೆಲಕಚ್ಚಿದ ಟಮೋಟೊ : ಹೋಬಳಿಯ ಪುರದಮಠದ ಕೆ.ಎಸ್.ವೀರೇಶ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಹಾಕಿದ್ದ ೬ ಸಾವಿರ ಟಮೋಟೊ ಗಿಡಗಳು ಆಲಿಕಲ್ಲು ಮಳೆಗೆ ಸಿಕ್ಕಿ ನೆಲಕಚ್ಚಿದ್ದು ಸಾವಿರಾರು ರೂಪಾಯಿ ಲುಕ್ಸಾನಾಗಿದೆ. ಇನ್ನೇನ್ನು ಫಸಲು ಬಿಡಲು ಹಂತದಲ್ಲಿದ್ದ ಟಮೋಟ ಗಿಡ ಶುಕ್ರವಾರ ಬಂದ ಮಳೆಗೆ ಬುಡಮೇಲಾಗಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಟಮೋಟೋ ಕೆಜಿಗೆ ೩೦ರೂ ನಂತೆ ಮಾರಾಟವಾಗುತ್ತಿದ್ದ ಸಮಯದಲ್ಲಿ ಹೇಗೋ ಈ ಬಾರಿ ಟಮೋಟೋಗೆ ಉತ್ತಮ ಬೆಲೆ ಬಂತಲ್ಲ ಎನ್ನುವಷ್ಟರಲ್ಲಿ ಈ ರೀತಿಯಾಗಿದೆ ಎಂದು ವಿರೇಶ್ ಮಮ್ಮಲಮರುಗಿದರು.
ಒಟ್ಟಾರೆ ಶುಕ್ರವಾರ ಸಂಜೆ ಬಂದ ಮಳೆಯಿಂದ ಹೆಸರು ಬೆಳೆಗೆ ಅನುಕೂಲವಾದರೆ ದಾಳಿಂಬೆ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದ್ದು, ಒಂದೆಡೆ ಮಳೆ ಬರಲಿಲ್ಲವಲ್ಲ ಬೆಳೆ ನಾಶವಾಯ್ತು ಎನ್ನುತ್ತಿದ್ದ ರೈತರು ಈಗ ಮಳೆ ಬಂದು ಬೆಳೆ ನಾಶವಾಯ್ತಲ್ಲ ಎನ್ನುತ್ತಾ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಸರಿಯಾದ ಪರಿಹಾರ ನೀಡಿ : ಮಳೆಯಿಂದಾಗುವ ಬೆಳೆ ಹಾನಿಯನ್ನು ಪರಿಶೀಲಿಸಿ ಪರಿಹಾರ ನೀಡಬೇಕಾಗಿದ್ದ ತೋಟಗಾರಿಕೆ ಇಲಾಖೆಯೇ ಈ ಕಡೆ ತಲೆ ಹಾಕದಿರುವುದು ಬೆಳೆಗಾರರಿಗೆ ಚಿಂತೆಗೀಡು ಮಾಡಿದೆ. ಬಿರುಗಾಳಿ ಸಹಿತ ಮಳೆಯಿಂದ ಪ್ರತಿವರ್ಷ ನಷ್ಟಕೀಡಾಗುತ್ತಿದ್ದರೂ ಇದುವರೆಗೂ ಇಲಾಖೆಯಿಂದ ವೈಜ್ಞಾನಿಕ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಅಳಲಾಗಿದೆ.ಅವೈಜ್ಞಾನಿಕವಾಗಿ ಪರಿಹಾರ ನೀಡುತ್ತಿರುವ ಬಗ್ಗೆ ಬೇಸತ್ತಿರುವ ರೈತರು ದುಬಾರಿ ಗೊಬ್ಬರ ಹಾಗೂ ಕೂಲಿ ತೆತ್ತು ಬೆಳೆದ ಬೆಳೆಗೆ ಪರಿಹಾರವೆಂದು ನೀಡುವ ಪುಡಿಗಾಸಿಗೆ ಅಲೆದಾಡುವ ಬದಲು ಸುಮ್ಮನಿರುವುದೇ ಲೇಸೆನ್ನುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ತುರ್ತು ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆಗೊಳ್ಳಲಿದ್ದು ಈ ಬಗ್ಗೆ ಕಂದಾಯ ಹಾಗೂ ತೋಟಗಾರಿಕಾ ಇಲಾಖೆಗೆ ಸೇರಿದ ತಂಡ ಬೆಳೆಹಾನಿ ಬಗ್ಗೆ ಮಾಹಿತಿ ಪಡೆದು ತುರ್ತಾಗಿ ವರದಿ ನೀಡುವ ಅವಶ್ಯಕತೆಯಿದೆ.
---------
ನಮ್ಮ ಭಾಗದಲ್ಲಿ ಹೆಚ್ಚು ಜನ ದಾಳಿಂಬೆ ಮಾಡಿದ್ದನ್ನು ಕಂಡು ನಾನು ಸಹ ಮೊದಲು ಒಂದೆರಡು ಎಕರೆಯಲ್ಲಿ ದಾಳಿಂಬೆ ಮಾಡಿದೆ. ಉತ್ತಮ ಆದಾಯಬಂದಿತ್ತು ಆದರೆ ಈ ಸಲ ೨ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚುಮಾಡಿದ್ದೆ, ಮಳೆಯಿಂದಾಗಿ ಅದರಲ್ಲಿ ಒಂದು ರೂಪಾಯಿಯೂ ವಾಪಸ್ಸ್ ಕೈಗೆ ಬರದಂತಾಗಿದೆ : ದಾಳಿಂಬೆ ಬೆಳೆಗಾರ ಬಳ್ಳಿಚಂದ್ರು.ಕೆಂಕೆರೆ.
---------

ಬಾಳೆ ಬೆಳೆಗೆ ಹಾನಿ : ಮೇಲನಹಳ್ಳಿಯ ಎಂ.ಟಿ.ಸಣ್ಣಕರಿಯಪ್ಪನವರಿಗೆ ಸೇರಿದ 800 ಬಾಳೆಗಿಡ, ಚಂದ್ರಯ್ಯನವರಿಗೆ ಸೇರಿದ 800 ಬಾಳೆಗಿಡ, ಭದ್ರಯ್ಯನವರಿಗೆ ಸೇರಿದ 400 ಬಾಳೆ, ಕರಿಯಪ್ಪನವರಿಗೆ ಸೇರಿದ 300 ಬಾಳೆ, ಸಣ್ಣಕರಿಯಪ್ಪನವರಿಗೆ ಸೇರಿದ 500 ಬಾಳೆಗಿಡ ಮಳೆಯ ಆರ್ಭಟಕ್ಕೆ ನಲುಗಿದೆ. ಗುರುವಾಪುರ ಮಲ್ಲಯ್ಯನವರ ತೋಟದಲ್ಲಿ ಸಿಡಲಿಗೆ 2 ತೆಂಗಿನಮರ, ದಾಳಿಂಬೆ, ಬಾಳೆತೋಟ ಹಾಳಾದರೆ ರೇಣುಕಪ್ರಸಾದ್ ಅವರ 600 ಬಾಳೆಗಿಡ , ಜಿ.ಎಸ್.ಶ್ರೀನಿವಾಸ್ ಅವರ 750 ದಾಳಿಂಬೆಗಿಡವೂ ಹಾಳಾಗಿ ಅಪಾರ ನಷ್ಟ ಸಂಭವಿಸಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...