ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸೋಮವಾರ ಸಂಜೆ ಬಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ರಸ್ತೆ ಬದಿಯ ಗುಂಡಿ, ತೋಟ ತುಡಿಕೆಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವೆಡೆ ತೆಂಗಿನ ಮರ, ಲೈಟ್ ಕಂಬಗಳು ಧರೆಗುರುಳಿವೆ.
ಹುಳಿಯಾರಿನ ಗಾಂಧಿಪೇಟೆಯ ಪಶುಆಸ್ಪತ್ರೆಯ ಪಕ್ಕದ ಮನೆಯೊಂದರ ಮೇಲೆ ಬುಡ ಸಮೇತ ಬಿದ್ದಿರುವ ಮರ. ಅದರಡಿ ಸಿಲುಕಿರುವ ಸ್ವೀಟ್ ಗಾಡಿ. |
ಸೋಮವಾರ ಬೆಳಿಗ್ಗಿನಿಂದ ಬಿಸಿಲ ಝಳ ಹೆಚ್ಚಿ ಸೆಕೆಯುಂಟಾಗಿತ್ತು ಮಧ್ಯಾಹ್ನದ ನಂತರ ದಟ್ಟ ಮೋಡ ಉಂಟಾಗಿ ಸಂಜೆ ವೇಳೆಗೆ ಬಾರಿಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು. ಗಾಳಿಯ ಅರ್ಭಟ ಹೆಚ್ಚಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಪಟ್ಟಣದ ಗಾಂಧಿಪೇಟೆಯ ಪಶು ಆಸ್ಪತ್ರೆಯ ಕಾಂಪೌಂಡ್ ನ ಹೊರ ಭಾಗದಲಿದ್ದ ಬಾರಿ ಮರವೊಂದು ಕೆಂಕೆರೆಯ ರವಿ ಅವರಿಗೆ ಸೇರಿದ ಮನೆಯ ಮೇಲೆ ಬಿದ್ದಿದೆ. ಆ ಮನೆಯಲ್ಲಿ ಅಶೋಕ್ , ಮಂಜುನಾಥ್ ಹಾಗೂ ಮುನಿಸ್ವಾಮಿ ಎಂಬುವರಿಗೆ ಬಾಡಿಗೆಗಿದ್ದರು. ಮನೆ ಮುಂದೆಯೇ ಇದ್ದ ಮರ ಗಾಳಿಯ ರಭಸಕ್ಕೆ ಬುಡ ಸಮೇತ ಮನೆ ಮೇಲೆ ಉರುಳಿದ್ದು ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್ ಗಳು ಜಖಂಗೊಂಡಿದೆ. ಅಶೋಕ್ ಅವರು ಸ್ವೀಟ್ ವ್ಯಾಪಾರ ಮಾಡಲು ಬಳಸುತ್ತಿದ್ದ ತಳ್ಳುಗಾಡಿ ಮರದ ಬುಡಕ್ಕೆ ಸಿಕ್ಕಿ ಜಖಂ ಆಗಿದೆ. ಮುನಿಸ್ವಾಮಿ ಹಾಗೂ ಮಂಜುನಾಥ್ ಅವರ ಮನೆಯೊಳಗೆ ನೀರು ನುಗ್ಗಿದ್ದು, ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಂಪನಹಳ್ಳಿಯ ಮಸೀದಿಯ ಗೋಪುರ ರಸ್ತೆ ಬಿದ್ದ ಪರಿಣಾಮ ಹುಳಿಯಾರು- ಶಿರಾ ಸಂಚಾರ ಅಸ್ಥವೆಸ್ಥಗೊಂಡು ಬಸ್ ಗಳು ಬೇರೆ ಮಾರ್ಗವಾಗಿ ಸಂಚರಿಸುವಂತಾಗಿತ್ತು. ಗೌಡಗೆರೆ ದುರ್ಗಮ್ಮದೇವಿ ದೇವಾಲಯದ ಮುಂಭಾಗ ಕುರಿಹಟ್ಟಿ ರಸ್ತೆ ಬದಿಯಲ್ಲಿದ್ದ ಬಾರಿ ಗಾತ್ರದ ಆರಳಿಮರವೊಂದು ಎರಡು ಭಾಗವಾಗಿ ಸೀಳಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಕೋರಗೆರೆ ಬಳಿ ವಿದ್ಯುತ್ ಪರಿವರ್ತಕ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಲೈಟ್ ಕಂಬಗಳು ಸಹ ಧರಗೆ ಬಿದ್ದಿವೆ ಎಂದು ಸೆಕ್ಷನ್ ಅಫೀಸರ್ ಉಮೇಶ್ ನಾಯಕ್ ತಿಳಿಸಿದ್ದಾರೆ. ಕಾರೆಹಳ್ಳಿ ಸಮೀಪದ ಶೋಭಾ ಎಂಬುವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆ ಗಾಳಿಯ ಹೊಡೆತಕ್ಕೆ ಸಂಪೂರ್ಣ ಶಿಥಿಲಗೊಂಡಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಹೋಬಳಿಯ ಕೆಲ ತೋಟಗಳಲ್ಲಿ ತೆಂಗಿನ ಮರಗಳು ಸಹ ನೆಲಕ್ಕುರುಳಿದ್ದು ಸಂಜೆ ಬಂದ ಮಳೆಯಿಂದಾಗಿ ಹೆಚ್ಚು ನಷ್ಟ ಸಂಭವಿಸುವಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ