ಸ್ಥಳೀಯ ಗ್ರಾ.ಪಂ.ಚುನಾವಣೆಗಳಲ್ಲಿ ಕುತೂಹಲ ಕೆರಳಿಸಿರುವ ಹುಳಿಯಾರು ಗ್ರಾ.ಪಂ ಯ ೩೯ ಸದಸ್ಯ ಸ್ಥಾನಗಳಿಗೆ ಒಟ್ಟು ೧೯೦ ಉಮೇದುವಾರಿಕೆ ಸಲ್ಲಿಕೆಯಾಗಿ, ೩ ನಾಮಪತ್ರ ತಿರಸ್ಕೃತವಾಗಿ ಉಳಿದಿದ್ದ ೧೮೭ ಆಕಾಂಕ್ಷಿಗಳ ಪೈಕಿ ಸೋಮವಾರ ೨೬ ಮಂದಿ ತಮ್ಮ ನಾಮಪತ್ರ ವಾಪಸ್ಸ್ ಪಡೆದಿದ್ದು ಅಂತಿಮವಾಗಿ ಒಟ್ಟು ೧೬೧ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.
ಹುಳಿಯಾರು ಗ್ರಾ.ಪಂ. ಆವರಣದಲ್ಲಿ ಚಿಹ್ನೆ ಪಡೆಯಲು ಬೆಂಬಲಿಗರೊಂದಿಗೆ ಕಾದುನಿಂತಿದ್ದ ಅಭ್ಯರ್ಥಿಗಳು. |
ಹರಸಾಹಸ: ಕಳೆದೆರಡು ದಿನಗಳಿಂದ ತಮ್ಮತಮ್ಮ ವಾರ್ಡ್ ಗಳಲ್ಲಿ ಗೆಲ್ಲಲು ಅಡ್ಡಿಯಾಗಿರುವ ಕೆಲವರ ನಾಮಪತ್ರ ವಾಪಸ್ಸ್ ತೆಗೆಯಲು ಹರಸಾಹಸ ನಡೆಸಿದ್ದ ಕೆಲ ಅಭ್ಯರ್ಥಿಗಳು. ಎದುರಾಳಿಗಳಿಗೆ ನಾನಾರೀತಿಯ ಅಮೀಷವೊಡ್ಡಿ, ಪ್ರಭಾವಿಗಳಿಂದ ಹೇಳಿಸಿ, ರಾಜಕೀಯ ನಾಯಕರುಗಳಿಂದ ಒತ್ತಡ ತರುವ ಮೂಲಕ ಮನವೊಲಿಸಿ ಇಂದು ಪಂಚಾಯ್ತಿಯಲ್ಲಿ ನಾಮಪತ್ರ ವಾಪಸ್ಸ್ ಪಡಿಸುವಂತೆ ಮಾಡುವಲ್ಲಿ ಸಫಲರಾದರು. ಅವರನ್ನು ಎಲ್ಲೂ ಹೋಗದಂತೆ ಕಾಯ್ದುಕೊಂಡಿದ್ದು ಇಂದು ಮಧ್ಯಾಹ್ನ ೩ರರೊಳಗೆ ನಾಮಪತ್ರ ವಾಪಸ್ಸ್ ತೆಗೆಸುವ ಮೂಲಕ ನಿಟ್ಟುಸಿರು ಬಿಟ್ಟರು. ನಾಮಪತ್ರ ವಾಪಸ್ಸ್ ಪಡೆಯುವ ಹಿನ್ನಲೆಯಲ್ಲಿ ಗ್ರಾ.ಪಂ.ಆವರಣ ಬಾರಿ ಜನಸ್ತೋಮದಿಂದ ತುಂಬಿತುಳುಕುತ್ತಿತ್ತು.
ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯ್ತಿ ಹಾಗೂ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಖ್ಯಾತಿ ಹೊಂದಿರುವ ಹುಳಿಯಾರು ಗ್ರಾ.ಪಂ. ಚುನಾವಣೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದೆ. ಇಂದು ಚಿಹ್ನೆ ಪಡೆದಿರುವ ಅಭ್ಯರ್ಥಿಗಳು ಕರಪತ್ರ ಮಾಡಿಸಲು ಮುಂದಾಗಿದ್ದು ಪ್ರಚಾರಕ್ಕೆ ಶುರುವಿಟ್ಟುಕೊಂಡಿದ್ದಾರೆ. ಪಟ್ಟಣದ ೧೩ ಬ್ಲಾಕ್ ಗಳಲ್ಲಿ ೩೯ ಸ್ಥಾನಕ್ಕೆ ೧ : ೪ ರ ಪ್ರಮಾಣದಲ್ಲಿ ಒಟ್ಟು ೧೬೧ ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರರಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆಂಬ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ನಾಮಪತ್ರ ವಾಪಸ್ಸ್ ಪಡೆದವರು : ೧ ನೇ ಬ್ಲಾಕ್ ನಲ್ಲಿ ಇಬ್ಬರು ( ಜಗದೀಶ್ ಹಾಗೂ ಬಿ.ಎಸ್. ಮೋಹನ್) , ೨ ನೇ ಬ್ಲಾಕ್ ನಲ್ಲಿ ನಾಲ್ವರು (ತಬಸುಂ ಸುಲ್ತಾನ್,ಹೆಚ್.ಎಲ್.ನಾಗರಾಜನ್ ಹೆಚ್.ಪಿ.ರಾಘವೇಂದ್ರ,ರಿಜ್ವಾನ್ ಭಾನು),೩ ನೇ ಬ್ಲಾಕ್ ನಿಂದ ನೂರ್ಜಾನ್ ಬೀ, ೪ ನೇ ಬ್ಲಾಕ್ ನಲ್ಲಿ ಇಬ್ಬರು ( ಹೆಚ್.ಆರ್.ಓಂಕಾರಮೂರ್ತಿ,ಹೆಚ್.ಎನ್.ಗವಿರಂಗನಾಥ್), ೫ ನೇ ಬ್ಲಾಕ್ ನಲ್ಲಿ ಇಬ್ಬರು ( ಇನಾಯತ್, ಎಸ್.ಜಯಮ್ಮ),೬ ನೇ ಬ್ಲಾಕ್ ನಲ್ಲಿ ಮೂವರು( ಹೆಚ್.ಎನ್.ಕುಮಾರ್, ಹೆಚ್.ಎಸ್.ಮೋಹನ್ ಕುಮಾರ್,ಹೆಚ್.ಎಲ್.ನಾಗರಾಜನ್) , ೭ ನೇ ಬ್ಲಾಕ್ ನಲ್ಲಿ ಯಾವುದು ಇಲ್ಲ, ೮ ನೇ ಬ್ಲಾಕ್ ನಲ್ಲಿ ಆರು ಮಂದಿ ( ಗಂಗಮ್ಮ,ಜಯಮ್ಮ,ಫೈರೋಜ್,ಸಿದ್ದಗಂಗಮ್ಮ, ಸಯ್ಯದ್ ಮೊಹಿದ್ದೀನ್, ಸೈಯ್ಯದ್ ಮೆಹಬೂಬ್), ೯ ನೇ ಬ್ಲಾಕ್ ನಲ್ಲಿ ಮೂವರು ( ನಾಗೇಂದ್ರಪ್ಪ,ಮಲ್ಲಿಕ್ ಸಾಬ್, ಸೈಯ್ಯದ್ ಇಂತಾಜ್ ಪಾಷ),೧೦ ನೇ ಬ್ಲಾಕ್ ನಲ್ಲಿ ಇಬ್ಬರು ( ದಯಾಮಣಿ, ಮಹೇಶ್), ೧೧ ಮತ್ತು ೧೨ ನೇ ಬ್ಲಾಕ್ ನಲ್ಲಿ ಯಾವುದು ಇಲ್ಲ , ೧೩ ನೇ ಬ್ಲಾಕ್ ಸೈಯದ್ ಹಫೀಕ್ ಸೇರಿದಂತೆ ಒಟ್ಟು ೨೬ ಮಂದಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ನಾಮಪತ್ರ ವಾಪಸ್ಸ್ ಪಡೆದು ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ವಿಂಗಡಿಸಲಾಯಿತು.
ಯಾವ ಚಿಹ್ನೆಗೆ ಹೆಚ್ಚು ಬೇಡಿಕೆ : ಸೂಚನಾ ಫಲಕದಲ್ಲಿ ೮೦ಕ್ಕೂ ಅಧಿಕ ಚಿಹ್ನೆಗಳನ್ನು ಹಾಕಿದ್ದರೂ ಸಹ ಕೆಲ ಚಿಹ್ನೆಗಳ ಬೇಡಿಕೆ ಹೆಚ್ಚಿದ್ದು ಕಂಡುಬಂತು. ಆಟೋ, ಟಿವಿ, ಗ್ಯಾಸ್ ಸಿಲಿಂಡರ್,ತೆಂಗಿನಕಾಯಿ, ಹಣ್ಣಿನ ಬುಟ್ಟಿ, ಫ್ರೆಶರ್ ಕುಕ್ಕರ್ ಚಿಹ್ನೆಗಳನ್ನೇ ಹೆಚ್ಚು ಅಭ್ಯರ್ಥಿಗಳು ಸೂಚಿಸಿದ್ದರು.
ಒಟ್ಟಾರೆ ಹುಳಿಯಾರು ಗ್ರಾ.ಪಂ. ಚುನಾವಣೆ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದು, ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದೀಗ ಚುನಾವಣೆ ಕಾವು ಹೆಚ್ಚಾಗಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನಿಂದ ಕೂಡಿದ್ದು ಯಾರುಯಾರು ಗ್ರಾ.ಪಂ. ಸದಸ್ಯ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ