ಬಿಜೆಪಿ ತೆಕ್ಕೆಗೆ ಹುಳಿಯಾರು ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿ 2 ನೇ ಬಾರಿ ಸಣ್ಣಯ್ಯನಿಗೊಲಿದ ಎಪಿಎಂಸಿ ಅಧ್ಯಕ್ಷಗಾದಿ
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಈ ಬಾರಿಯೂ ಬಿಜೆಪಿಗೆ ಒಲಿದಿದ್ದು, ಈ ಸ್ಥಾನಗಳಿಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಣ್ಣಯ್ಯವರು ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿಯವರೇ ಆದ ದ್ರಾಕ್ಷಾಯಿಣಿ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಹುಳಿಯಾರು ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಸಣ್ಣಯ್ಯ ಹಾಗೂ ದ್ರಾಕ್ಷಾಯಿಣಿ ಅವರನ್ನು ಬೆಂಬಲಿಗರು ಅಭಿನಂದಿಸಿದರು. |
ಸರ್ಕಾರದ ಆದೇಶದಂತೆ ಅಧಿಕಾರ ವಿಕೇಂದ್ರಿಕರಣದಂತೆ ಬಿಜೆಪಿ-ಕೆಜೆಪಿ ಹೊಂದಾಣಿಕೆಯಲ್ಲಿ ಅಧ್ಯಕ್ಷರ ಸ್ಥಾನ ಹಂಚಿಕೆ ಮಾಡಿಕೊಂಡು ಕಳೆದ ಐದು ತಿಂಗಳ ಹಿಂದೆ ಸಣ್ಣಯ್ಯ ಅವರು ಅಧ್ಯಕ್ಷರಾಗಿದ್ದರು. ಈಗ ಅವಧಿ ಮುಗಿದಿದ್ದ ಕಾರಣ ಈ ಚುನಾವಣೆ ನಡೆಸಿದ್ದು ಎಪಿಎಂಸಿಯ ಒಟ್ಟು 16 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸಣ್ಣಯ್ಯ ಹಾಗೂ ಕಾಂಗ್ರೆಸ್ ನಿಂದ ಸಿದ್ರಾಮಯ್ಯ ನಾಮಪತ್ರ ಸಲ್ಲಿಸಿದ್ದರು.
ಕೂತೂಹಲಕಾರಿ ಚುನಾವಣೆ : ಈ ಬಾರಿಯ ಎಪಿಎಂಸಿ ಚುನಾವಣೆ ಬಾರಿ ಕುತೂಹಲಕಾರಿಯಾಗಿ ನಡೆದಿದ್ದು, ಈ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೆ ಸಾಮಾನ್ಯವಾಗಿ ಅವಿರೋಧವಾಗಿ ಆಯ್ಕೆ ನಡೆಯುತ್ತಿತ್ತು. ಆದರೆ ಈ ಸಲ ಮಾತ್ರ 9 ಸದಸ್ಯರನ್ನು ಹೊಂದಿದ ಬಿಜೆಪಿಯೇ ಗೆಲ್ಲುವ ಭರವಸೆಯಿದ್ದರೂ ಕೂಡ ಕಾಂಗ್ರೆಸ್ ನ ಸಿದ್ರಾಮಯ್ಯ ಸ್ಪರ್ಧಿಸಿದ್ದು ತೀವ್ರ ಪೈಪೂಟಿಗೆ ಕಾರಣವಾಯಿತು. ಸಚಿವರ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯ ಸದಸ್ಯರನ್ನು ಸೆಳೆಯಬಹುದೆಂಬ ನಿರೀಕ್ಷೆಯಿಂದ ಚುನಾವಣೆ ರಂಗೇರಿತ್ತು. 11 ಗಂಟೆಗಿದ್ದ ಚುನಾವಣೆಗೆ ಎರಡು ಕಡೆಯ ಕಾರ್ಯಕರ್ತರು ಬೆಳಗಿನಿಂದಲೆ ಜಮಾಯಿಸಿದ್ದರು. ಕಡೆ ಕ್ಷಣದವರೆಗೂ ಸಿದ್ರಾಮಯ್ಯ ಹಾಗೂ ಸಣ್ಣಯ್ಯ ಇಬ್ಬರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಕೂತೂಹಲ ಕೆರಳಿಸಿತ್ತು.
ಕಾಂಗ್ರೆಸ್ ನ ಸಿದ್ರಾಮಯ್ಯ ಅವರು ಅಧ್ಯಕ್ಷರಾಗಬೇಕು ಎಂಬ ನಿಲುವಿನಿಂದ ಉಳಿದ ಸದಸ್ಯರನ್ನು ತಮ್ಮತ್ತ ಸೆಳೆಯುವ ಯತ್ನ ಮಾಡಿದ್ದರು ಎಂಬ ಮಾತುಗಳು ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ಬಿಜೆಪಿಯ ನಾಯಕರು ತಮ್ಮ ಬೆಂಬಲಿತ ಸದಸ್ಯರಿಗೆ ಸಣ್ಣಯ್ಯನವರಿಗೆ ಮತ ಚಲಾಯಿಸುವಂತೆ ಹುಕುಂ ಹೊರಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಕಾಮಾಕ್ಷಮ್ಮ ಆಗಮಿಸಿದ್ದು ಅವರ ಸಮಕ್ಷಮದಲ್ಲಿ ಮತದಾನ ನಡೆದು ಸಣ್ಣಯ್ಯ ಅವರಿಗೆ 9 ಮತಗಳು ಹಾಗೂ ಸಿದ್ರಾಮಯ್ಯನಿಗೆ 6 ಮತಗಳು ಲಭಿಸಿದ್ದು, 1 ಮತ ತಿರಸ್ಕೃತವಾಗಿ ಅಂತಿಮವಾಗಿ ಹೆಚ್ಚು ಮತಪಡೆದ ಸಣ್ಣಯ್ಯ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು.
ಪೊಲೀಸ್ ಬಂದೋಬಸ್ತ್ : ಇದೇ ಮೊದಲ ಬಾರಿಗೆ ಬಾರಿ ಸಂಖ್ಯೆಯ ಪೊಲೀಸರು ಎಪಿಎಂಸಿಗೆ ಜಮಾಯಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಚುನಾವಣೆಯಲ್ಲಿ ಯಾವುದೇ ರೀತಿಯ ಅವಗಡಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸರ್ಕಲ್ ಇಸ್ಪೆಕ್ಟರ್ ಜಯಕುಮಾರ್ ಹಾಗೂ ಪಿಎಸೈ ಘೋರ್ಪಡೆ ಖುದ್ದು ಹಾಜರಿದ್ದರು. ಅಲ್ಲದೆ ಚುನಾವಣೆ ಮುಗಿಯುವ ತನಕವೂ ಸಹ ಸದಸ್ಯರ ಮೊಬೈಲ್ ಗಳನ್ನು ನಿಷೇಧಿಸಿದ್ದರು.
ಗೆಲುವಿನ ನಗೆ ಬೀರಿದ ಸಣ್ಣಯ್ಯ ಅವರನ್ನು ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್ , ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್, ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್, ವಸಂತಯ್ಯ, ಶಶಿಧರ್, ಸೀತಾರಾಮ್, ಎಪಿಎಂಸಿ ಸದಸ್ಯರಾದ ಸಿಂಗದಹಳ್ಳಿ ರಾಜ್ ಕುಮಾರ್, ಶಿವರಾಜ್,ಶಾಂತಣ್ಣ, ಜಿಲ್ಲಾ ಹಾಲುಉತ್ಪಾದಕರ ಸಂಘದ ಹಳೆಮನೆ ಶಿವನಂಜಪ್ಪ ಸೇರಿದಂತೆ ಎಪಿಎಂಸಿ ಸದಸ್ಯರು, ಬಿಜೆಪಿಯ ಅನೇಕ ಕಾರ್ಯಕರ್ತರು ಆಗಮಿಸಿ ಅಭಿನಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ