ಗ್ರಾ.ಪಂ.ಗೆ ಅಂಟಿದ ಶಾಪವೇನೋ ಎಂಬಂತೆ ಇಲ್ಲಿ ನಡೆಯುವ ಯಾವುದೇ ಸಭೆಗಳು ಎಂದೂ ಶಾಂತ ರೀತಿಯಲ್ಲಿ ನಡೆಯುವುದಿಲ್ಲ. ಅದೇ ರೀತಿ ಮಂಗಳವಾರದಂದು ಪಂಚಾಯ್ತಿ ಆವರಣದಲ್ಲಿ ನಡೆದ ಗ್ರಾಮಸಭೆಯೂ ಕೂಡ ಇದಕ್ಕೆ ಹೊರತಾಗದೆ ಗಲಾಟೆ,ಗದ್ದಲ ಮಾತಿನಚಕಮಕಿಯಲ್ಲೇ ನಡೆದಿದ್ದು ಇದಕ್ಕೆ ಇಂಬು ನೀಡುವಂತಿತ್ತು.
ಹುಳಿಯಾರು ಗ್ರಾ.ಪಂ ಗ್ರಾಮಸಭೆಯಲ್ಲಿ ಪಿಡಿಓ ಹಾಗೂ ಗ್ರಾ.ಪಂ.ಸದಸ್ಯರ ನಡುವೆ ಮಾತಿನಜಟಾಪಟಿ ನಡೆಯಿತು. |
2014-15 ನೇ ಸಾಲಿನ ಇಂದಿರಾ ಅವಾಸ್ ವಸತಿ ಯೋಜನೆಯಡಿ ಮಂಜೂರಾಗಿದ್ದ ಒಟ್ಟು 26 ಮನೆಗಳಲ್ಲಿ ಎಸ್.ಸಿ-8 , ಎಸ್.ಟಿ-3, ಅಲ್ಪಸಂಖ್ಯಾತರಿಗೆ-5, ಇತರೆ ವರ್ಗದವರಿಗೆ-10 ಮನೆಗಳ ಹಂಚಿಕೆ ಮಾಡಲು ಅರ್ಹ ಫಲಾನುಭವಿಗಳನ್ನು ಗುರ್ತಿಸುವ ನಿಟ್ಟಿನಲ್ಲಿ ಗ್ರಾಮಸಭೆ ಆಯೋಜಿಸಲಾಗಿತ್ತು. ಪ್ರಾರಂಭದಲ್ಲೇ ಆಹ್ವಾನಿತ ಇಲಾಖೆ ಅಧಿಕಾರಿಗಳು ಗೊತ್ತು ಪಡಿಸಿದ ಸಮಯಕ್ಕೆ ಬಂದಿಲ್ಲ ಎಂದು ಪ್ರಾರಂಭವಾದ ಗದ್ದಲ ಅಂತ್ಯದವರೆಗೂ ಒಂದಲ್ಲ ಒಂದು ಕಾರಣಕ್ಕೆ ಕೂಗಾಟದಲ್ಲೇ ಕೊನೆಗೊಂಡಿತು.
ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳ ಬಗ್ಗೆ ಗ್ರಾ.ಪಂ.ಸದಸ್ಯರುಗಳು ಗರಂ ಆಗಿ ಇಲಾಖೆ ಅಧಿಕಾರಿಗಳು ಬರುವವರೆಗೂ ಸಭೆ ಮಾಡದಂತೆ ಪಟ್ಟು ಹಿಡಿದಿದ್ದರು. ನಂತರ ಒಂದುಗಂಟೆ ತಡವಾಗಿ ಆಗಮಿಸಿದ ನೋಡಲ್ ಅಧಿಕಾರಿ ರಾಜೇಂದ್ರ ಅವರನ್ನು ಪ್ರಶ್ನಿಸಲು ಮುಂದಾದರು.
ಸಮಸ್ಯೆಯಲ್ಲೇ ಶುರುವಾರ ಸಭೆ : ನಿಗದಿಯಂತೆ ಆಗಮಿಸಬೇಕಾಗಿದ್ದ ನೋಡಲ್ ಅಧಿಕಾರಿ ಗೈರು ಹಾಜರಿಯಲ್ಲಿ ಆಗಮಿಸಿದ ಬೇರೊಬ್ಬ ನೋಡಲ್ ಅಧಿಕಾರಿ ರಾಜೇಂದ್ರ ಅವರನ್ನು ಗ್ರಾ.ಪಂ.ಸದಸ್ಯರುಗಳು ಪ್ರಶ್ನಿಸಲು ಮುಂದಾದರು. ನಂತರ ಕರ್ಕಶವಾದ ಮೈಕ್ ಬಗ್ಗೆ ತರಾಟೆಗೆ ತೆಗೆದುಕೊಂಡು ಬೇರೆ ಮೈಕ್ ತಂದು ಹಾಕಿ ಸಭೆ ಮುಂದುವರಿಸಿ ಎಂದಿದ್ದರಿಂದ ಸಭೆ ಮುಂದುವರಿಸಲು ಕೆಲ ಕಾಲ ತಡವಾಯಿತು.
ಆಯ್ಕೆ ಸಮಂಜಸವಾಗಿಲ್ಲ : ಪಂಚಾಯ್ತಿಯ ಹತ್ತನೇ ವಾರ್ಡ್ ನಲ್ಲಿ ಫಲಾನುಭವಿಗಳ ಆಯ್ಕೆ ಸಮಂಜಸವಾಗಿಲ್ಲ ಅರ್ಜಿ ಕೊಟ್ಟವರ ಬಗ್ಗೆ ಸರಿಯಾಗಿ ಪರಿಶೀಲಿಸದೆ, ಎಲ್ಲೋಕುಳಿತು ಫಲಾನುಭವಿಗಳ ಆಯ್ಕೆ ಮಾಡಿದ್ದಾರೆಂದು ಪ್ರಸನ್ನಕುಮಾರ್, ಮೋಹನ್ ಕುಮಾರ್ ರೈ ಪ್ರತಿಭಟಿಸಿ, ಮಾತಿನಚಕಮಕಿಗೆ ಮುಂದಾಗಿದ್ದರಿಂದ ಪೋಲಿಸರು ಮಧ್ಯೆ ಪ್ರವೇಶಿಸುವಂತಾಯಿತು. ಕೆಲವೊಂದು ವಾರ್ಡ್ ಸದಸ್ಯರುಗಳಲ್ಲಿ ತಾವು ಹೇಳಿದವರಿಗೆ ಕೊಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಗೊಂದಲ ಉಂಟಾಗಿತ್ತು. ಅರ್ಹ ಫಲಾನುಭವಿಗಳನ್ನು ಸರಿಯಾಗಿ ಗುರ್ತಿಸದೆ ತಮಗೆ ಬೇಕಾದವರಿಗೆ ಕೊಡಮಾಡಿದ್ದಾರೆಂಬ ಮಾತು ಕೇಳಿಬಂತು.
ಹಾಜರಿಲ್ಲದ ಜನಪ್ರತಿನಿಧಿಗಳು : ಶಿಷ್ಟಾಚಾರಪಾಲನೆಗೋಸ್ಕರ ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದ್ದ ಸಂಸದರಾಗಲಿ, ಶಾಸಕರಾಗಲಿ, ವಿಧಾನಪರಿಷತ್ ಸದಸ್ಯರಾಗಲಿ, ತಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಲಿ ಹಾಗೂ ಕಾರ್ಯನಿರ್ವಹಣ ಅಧಿಕಾರಿಗಳಾಗಲಿ ಹಾಜರಿರಲಿಲ್ಲ. ಕೇವಲ ಗ್ರಾ.ಪಂ ಸದಸ್ಯರುಗಳು ಮಾತ್ರ ಹಾಜರಿದ್ದರು.
ಪ್ರಾರಂಭದಿಂದ ಅಂತ್ಯದವರೆಗೆ ಇಡಿ ಸಭೆ ಗದ್ದಲ , ಕೂಗಾಟಗಳ ನಡುವೆಯೇ ನಡೆದಿದ್ದು ವಿಪರ್ಯಾಸ. ಫಲಾನುಭವಿಗಳಿಗಿಂತ ಗ್ರಾ.ಪಂ.ಸದಸ್ಯರ ನಡುವೆಯೇ ಮಾತಿನಚಕಮಕಿ ನಡೆದಿದ್ದು ಅವ್ಯಾಹತವಾಗಿ ಗ್ರಾ.ಪಂ.ಸದಸ್ಯರುಗಳೇ ಪರಸ್ಪರ ಮಾತಿನ ಚಕಮಕಿ ನಡೆಸಿದರು.
ಪ್ರತಿ ಬಾರಿ ಎಂಬಂತೆ ಈ ಬಾರಿಯೂ ಸಹ ಸಾರ್ವಜನಿಕರ ಉಪಸ್ಥಿತಿ ಮಾತ್ರ ವಿರಳವಾಗಿತ್ತು. ಇದಕ್ಕೆ ಪ್ರಚಾರದ ಕೊರತೆಯೊ, ಜನರಲ್ಲಿ ಗ್ರಾಮಸಭೆಯ ಬಗ್ಗೆ ಇರುವ ಅಸಮಾದಾನವೋ ಎಂಬುದು ಯಕ್ಷಪ್ರಶ್ನೆಯಾಗಿದೆ.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಸಭೆಯ ಅಧ್ಯಕ್ಷತೆವಹಿಸಿದ್ದು , ಜಿ.ಪಂ.ಸದಸ್ಯೆ ಮಂಜುಳಾ, ತಾ.ಪಂ.ಸದಸ್ಯೆ ಬೀಬಿಫಾತಿಮಾ, ನೋಡೆಲ್ ಅಧಿಕಾರಿ ರಾಜೇಂದ್ರ, ತಾ.ಪಂ.ಸಹಾಯಕ ನಿರ್ದೇಶಕ ರವೀಂದ್ರಕುಮಾರ್, ಗ್ರಾ.ಪಂ.ಉಪಾಧ್ಯಕ್ಷೆ ಅಬಿದುನ್ನಿಸಾ, ಸದಸ್ಯರಾದ ಅಶೋಕ್ ಬಾಬು,ಧನುಷ್ ರಂಗನಾಥ್,ಜಹೀರ್ ಸಾಬ್,ಸೈಯ್ಯದ್ ಅನ್ಸರ್ ಅಲಿ, ಭೈರೇಶ್, ಗೀತಾಬಾಬು,ರಾಘವೇಂದ್ರ, ಹೇಮಂತ್, ವೆಂಕಟಮ್ಮ, ಗಂಗಾಧರರಾವ್,ಬಾಲಣ್ಣ,ಬಡ್ಡಿಪುಟ್ಟಣ್ಣ,ಪಟಾಕಿಶಿವಣ್ಣ,ಡಿಶ್ ಬಾಬು,ಸಿದ್ದಗಂಗಮ್ಮ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
---------------------------------------
ಹುಳಿಯಾರು ಗ್ರಾ.ಪಂ. ಸಭೆಯ ಕೆಲವು ಚಿತ್ರಗಳು
ಹತ್ತನೇ ವಾರ್ಡ್ ಸಭೆ ಸರಿಯಾಗಿ ನಡೆಸದೆ ಅವೈಜ್ಞಾನಿಕವಾಗಿ ಫಲಾನುಭವಿಸಗಳ ಆಯ್ಕೆ ನಡೆಸಿದ್ದು ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ಸಲ್ಲಿಸಲಿದ್ದೇನೆ : ಪ್ರಸನ್ನ ಕುಮಾರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ