ವರ್ಷಪೂರ್ತಿ ಅಭ್ಯಾಸ ಮಾಡಿದ ಮಕ್ಕಳ ಸಾಮರ್ಥ ಅಳೆಯುವ ನಿಟ್ಟಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂತಹ ಪರೀಕ್ಷೆಗಳಲ್ಲಿ ನಕಲು ನಡೆದರೆ ನಂತರ ಆ ಪರೀಕ್ಷೆಯಿಂದ ಉತ್ತೀರ್ಣರಾಗಿ ಹೊರಬರುವ ವಿದ್ಯಾರ್ಥಿಗಳೂ ಸಹ ದೇಶದಲ್ಲಿ ನಕಲಿ ಪ್ರಜೆಗಳಾಗುತ್ತಾರೆ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದ ಸರಸ್ವತಿಸ್ವಾಮೀಜಿ ವಿಷಾದಿಸಿದರು. ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದವತಿಯಿಂದ ಪಟ್ಟಣದ ಕಾಳಿಕಾಂಭ ಸಮುದಾಯಭವನದಲ್ಲಿ ಆಯೋಜಿಸಿದ್ದ ಏಳನೇಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅವರು ಅಶೀರ್ವಚನ ನೀಡಿದರು.
ಹುಳಿಯಾರಿನಲ್ಲಿ ನಡೆದ ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದ ಏಳನೇಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದ ಸರಸ್ವತಿಸ್ವಾಮೀಜಿ ಉದ್ಘಾಟಿಸಿದರು. |
ನಕಲುತನ ಎಂಬುದು ನಮಗೆ ದಾಸ್ಯವನ್ನು ತಂದುಕೊಡುತ್ತದೆ ಹೊರತು ನಮ್ಮನ್ನು ಸ್ವಾಭಿಮಾನಿಗಳನ್ನಾಗಿ ಮಾಡುವುದಿಲ್ಲ. ಪರೀಕ್ಷೆಗಳಲ್ಲಿ ನಕಲು ಮಾಡಿ ತೇರ್ಗಡೆಯಾದ ವಿದ್ಯಾರ್ಥಿಗಳು ಎಂದಿಗೂ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲಾಗದೆ , ಸದಾಕಾಲ ಪರಾವಲಂಭಿಗಳಾಗಿ ಜೀವನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡನಾಡಿನ ನಾವುಗಳು ಕನ್ನಡ ಕಲಿಯುವುದು ನಮ್ಮ ಧರ್ಮವಾಗಿದ್ದು, ಅದರಂತೆ ಇಂಗ್ಲಿಷ್ ಕಲಿಯುವುದು ಸಹ ನಮ್ಮ ಕರ್ಮವಾಗಿದೆ ಎಂದರು. ಅನಗತ್ಯ ಪದಗಳು, ವಾಕ್ಯಗಳ ಬಳಕೆಯಿಂದ ಭಾಷೆಯ ಬೆಳವಣಿಯಾಗದೆ ಕುಂಠಿತವಾಗುತ್ತದೆ. ಆದ್ದರಿಂದ ಭಾಷೆಯ ಬರವಣಿಗೆ ಅಥವಾ ಉಚ್ಚಾರಣೆಯಲ್ಲಿ ನಮಗೆ ಭಾಷೆಯ ಮೇಲೆ ಉತ್ಕಟವಾದ ಅಭಿಮಾನವಿರಬೇಕು ಎಂದರು.ಕನ್ನಡ ಭಾಷೆಯ ಶ್ರೇಯಸ್ಸು ಕನ್ನಡನಾಡಿನ ನಮ್ಮೆಲ್ಲರ ಶ್ರೇಯಸ್ಸಾಗಿದ್ದು ಅದರ ಬೆಳವಣಿಗೆಗೆ ಶ್ರಮಿಸಬೇಕು, ಕನ್ನಡ ಭಾಷಾ ಬೋಧಕರು ಸದಾಕಾಲ ಹೆಚ್ಚು ಕ್ರೀಯಾಶೀಲರಾಗಿರಬೇಕು. ಜೊತೆಗೆ ನಿರಂತರ ಕಲಿಕೆ, ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಪುಸ್ತಕಗಳನ್ನು ರಚಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಚಿ.ನಾ.ಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಇಓ ಸಾ.ಚಿ.ನಾಗೇಶ್ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಕನ್ನಡ ಭಾಷಾಬೋಧಕರ ಸಂಗದ ಅಧ್ಯಕ್ಷ ಗೋವಿಂದರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಕನ್ನಡ ಭಾಷಾ ಬೋಧಕರ ಸಂಘದ ಕಾರ್ಯದರ್ಶಿ ಮಾದಾಪುರ ಶಿವಯ್ಯ, ತಿಪಟೂರಿನ ಕ.ಭಾ.ಬೋ.ಸಂಘದ ಅಧ್ಯಕ್ಷ ಗುರುಸ್ವಾಮಿ,ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಗದ ಕೃಷ್ಣಯ್ಯ, ಮುಖ್ಯ ಶಿಕ್ಷಕರಾದ ಚೆನ್ನಿಗರಾಯಪ್ಪ,ಸಿದ್ದರಾಜು, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.ಇದೇ ಸಂಧರ್ಭದಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಹಾಗೂ ಆ ಶಾಲೆಯ ಕನ್ನಡ ಭಾಷಾ ಬೋದಕರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ