ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಹೆಚ್ಚಿನ ಶಾಲಾ ಕಾಲೇಜುಗಳು ರಜೆ ಘೋಷಿಸಿದರೆ ಇದಕ್ಕೆ ಹೊರತಾಗಿ ಇಂದು ನಮ್ಮ ಕಾಲೇಜಿನ ಶಿಷ್ಯರೆಲ್ಲಾ ಸೇರಿ ಶಿಕ್ಷಕರ ದಿನಾಚರಣೆ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಪ್ರಾಂಶುಪಾಲ ನಟರಾಜ್ ಶ್ಲಾಘಿಸಿದರು .
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರವಾರ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರವಾರ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಾಚಾರ್ಯ ನಟರಾಜ್ ಮಾತನಾಡಿದರು. |
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದುಕೊಂಡು ಭಾರತದೇಶದ ಮೊಟ್ಟಮೊದಲ ಉಪರಾಷ್ಟ್ರಪತಿಯಾದ ಹಿನ್ನಲೆಯಲ್ಲಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಸರ್ಕಾರ ಘೋಷಿಸಿ. ಅದರ ಆಚರಣೆ ನಡೆಯುತ್ತಿರುವುದು ಶಿಕ್ಷಕರಾದ ನಮಗೆಲ್ಲಾ ಸಂದ ಗೌರವವಾಗಿದೆ ಎಂದರು.
ಸಮಾಜಶಾಸ್ತ್ರ ಉಪನ್ಯಾಸಕ ಶಿವರುದ್ರಯ್ಯ ಮಾತನಾಡಿ , ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದು ಎಷ್ಟು ಮುಖ್ಯವೋ ಅದರಂತೆ ಸಮಾಜದಲ್ಲಿ ಮತ್ತೊಬ್ಬರು ನಮ್ಮನ್ನು ಗುರ್ತಿಸುವಂತೆ ನಡೆದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಇಂದು ಶಿಷ್ಯರ ಸ್ಥಾನದಲ್ಲಿರುವವರು ಮುಂದೆ ಗುರುಗಳಾದರೂ ಆಗುತ್ತಾರೆ ಆಗ ತಮಗೂ ಸಹ ಶಿಷ್ಯ ಸಮೂಹ ಲಭಿಸುತ್ತದೆ ಆ ಹಿನ್ನಲೆಯಲ್ಲಿ ಉತ್ತಮ ಅಭ್ಯಾಸ ಮಾಡುವಂತೆ ತಿಳಿಸಿದರು.
ಎನ್.ಎಸ್.ಎಸ್.ಅಧಿಕಾರಿ ಯೋಗೀಶ್ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಲ್ಲಿ ಸೆಸಿ ನೆಡುವ ಕಾರ್ಯ ಮಾಡಲಾಯಿತು. ಉಪನ್ಯಾಸಕರಾದ ಎಸ್.ಕೆ.ಜಯಣ್ಣ, ಅನಂತಯ್ಯ, ಶಶಿಭೂಷಣ್, ವಿ.ಎಚ್. ರೇವಣ್ಣ ಎಸ್.ಜಿ.ರಮೇಶ್, ಶಿವಾನಂದ್,ಮಂಜುನಾಥ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ದಿನಾಚರಣೆಯ ಅಂಗವಾಗಿ ಉಪನ್ಯಾಸಕರಿಗೆ ಮಡಕೆ ಹೊಡೆಯುವುದು, ಮೆಮೋರಿ ಟೆಸ್ಟ್ ಸೇರಿದಂತೆ ವಿವಿಧ ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು. ಲಕ್ಕಿ ಡಿಪ್ ಮೂಲಕ ಅದೃಷ್ಟಶಾಲಿ ಶಿಕ್ಷಕರಾಗಿ ಮಂಜುನಾಥ್ ಆಯ್ಕೆಯಾಗಿ ಬಹುಮಾನ ಪಡೆದರು. ವಿದ್ಯಾರ್ಥಿಗಳಾದ ಶೈಲ ಪ್ರಾರ್ಥಿಸಿ, ಶಶಿಕಲಾ ನಿರೂಪಿಸಿ ಶ್ರೀನಿವಾಸ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ