ತಾಲ್ಲೂಕು ಆಡಳಿತದಿಂದ ಹುಳಿಯಾರು ಅಮಾನಿಕೆರೆ ಒತ್ತುವರಿ ಜಾಗದ ಸರ್ವೆಕಾರ್ಯ ಮುಗಿದಿದ್ದು ತೆರವುಗೊಳಿಸಲು ಕ್ಷಣಗಣನೆ ನಡೆದಿದೆ. ಹಿಂದೆ ಹಲವು ಬಾರಿ ಕಾರ್ಯಾಚರಣೆ ನಡೆದಿದ್ದರೂ ಸಹ ರಾಜಕೀಯ ಒತ್ತಡದ ನಡುವೆ ಕೈಬಿಡಲಾಗಿತ್ತು. ಸದ್ಯ ಕೋರ್ಟ್ ಆದೇಶದಂತೆ ಅತಿಕ್ರಮ ತೆರವುಗೊಳಿಸಲು ಮುಂದಾಗಿರುವ ತಾಲ್ಲೂಕು ಆಡಳಿತ ಈ ನಿಟ್ಟಿನಲ್ಲಿ ಕೆರೆ ಅಂಗಳದ ಸಮೀಕ್ಷೆ ಪೂರ್ಣಗೊಳಿಸಿ ಒತ್ತುವರಿ ಜಾಗವನ್ನು ಗುರುತು ಮಾಡಿದ್ದಾರೆ.
ಹುಳಿಯಾರಿನ ಶಂಕರಪುರಬಡಾವಣೆಯ ಕೆರೆ ಅಂಗಳದಲ್ಲಿನ ನಿರ್ಗತಿಕರ ಗುಡಿಸಲುಗಳು. |
ಹುಳಿಯಾರು ಕೆರೆ ಸಾಕಷ್ಟು ವಿಸ್ತೀರ್ಣವಾಗಿದ್ದು ಕೇಶವಾಪುರ, ವಳಗೆರೆಹಳ್ಳಿ,ಶಂಕರಪುರ ಹಾಗೂ ಬಸ್ ನಿಲ್ದಾಣದ ಸೇರಿದಂತೆ ಒಟ್ಟು 45 ಎಕರೆ ಪ್ರದೇಶದಷ್ಟು ಜಾಗ ಜಮೀನು , ಇಟ್ಟಿಗೆ ಫ್ಯಾಕ್ಟರಿ,ಮನೆ ಹಾಗೂ ಅಂಗಡಿದಾರರಿಂದ ಒತ್ತುವರಿಯಾಗಿದೆ.ಸಮೀಕ್ಷೆಯಲ್ಲಿ 199 ಮಂದಿಯ ಪಟ್ಟಿ ಮಾಡಲಾಗಿದ್ದು ಅದರಲ್ಲಿ 90 ಹಾಗೂ 86 ಅಂಗಡಿಗಳು ಸೇರಿದೆ.
ಗುಡಿಸಲುವಾಸಿಗಳು: ಸುಮಾರು 90ಕ್ಕೂ ಅಧಿಕ ಕುಟುಂಬಗಳು ಕಳೆದ ಹತ್ತಾರು ವರ್ಷಗಳಿಂದ ಮನೆಕಟ್ಟಿಕೊಂಡು ಇಲ್ಲಿ ಬೀಡುಬಿಟ್ಟಿದ್ದು, ಬಹುತೇಕರು ನಿರ್ಗತಿಕರು ಹಾಗೂ ಕೂಲಿನಾಲಿ ಮಾಡುವ ಗುಡಿಸಲು ವಾಸಿಗಳೇ ಜನರೇ ಆಗಿದ್ದು, ನಿತ್ಯ ಕೂಲಿಮಾಡಿ ಅದರಿಂದ ಬರುವ ಪುಡಿಗಾಸಿನಿಂದ ಜೀವನ ನಡೆಸುತ್ತಿದ್ದಾರೆ,ಇವರಿಗೆ ಸ್ವಂತ ಜಮೀನಾಗಲಿ, ಖಾಯಂ ಕೆಲಸಗಳಾಗಲಿ,ವರಮಾನ ಬರುವ ಯಾವುದೇ ಮೂಲವೂ ಸಹ ಇಲ್ಲದ ಇವರು ಕೆರೆ ಅಂಗಳದಲ್ಲಿ ಗುಡಿಸಲು ಕಟ್ಟಿಕೊಂಡು ಹೇಗೋ ಜೀವನ ನಡೆಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರಿದ್ದು ಚುನಾವಣೆಗಳಲ್ಲಿ ತಮ್ಮ ಮತವನ್ನು ಸಹ ಚಲಾಯಿಸಿದ್ದಾರೆ. ಇದೀಗ ಕೆರೆ ಒತ್ತುವರಿ ನಡೆಯುತ್ತಿರುವುದರಿಂದ ಈ ಎಲ್ಲರೂ ತಮ್ಮ ಮನೆ,ಗುಡಿಸಲುಗಳನ್ನು ಕಳೆದುಕೊಂಡು ನಿರ್ಗತಿಕರಾಗುವಂತ ಪರಿಸ್ಥಿತಿ ಎದುರಾಗಿದೆ.
ಶಂಕರಪುರ 6 ನೇ ಬ್ಲಾಕ್ ನ ನಿವಾಸಿಗಳೆಂದು ಪರಿಗಣಿಸುವ ಇವರನ್ನು ಇಲ್ಲಿನ ಗ್ರಾ.ಪಂ. ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆಯೇ ಹೊರತು ಇವರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಅಲ್ಲದೆ ಇದುವರೆಗೂ ಇಲ್ಲಿನ ನಿವಾಸಿಗಳಿಗೆ ಬೇರೆಡೆ ನಿವೇಶನವನ್ನು ನೀಡುವ ಯಾವುದೇ ವ್ಯವಸ್ಥೆ ಮಾಡಿಲ್ಲ. ಆ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಗಮನಗೊಡದಿರುವುದು ಇಲ್ಲಿನ ನಿವಾಸಿಗಳಲ್ಲಿ ಬೇಸರವನ್ನುಂಟುಮಾಡಿದೆ.
ಅನೇಕ ವರ್ಷದಿಂದ ಪಟ್ಟಣದಲ್ಲೇ ವಾಸವಾಗಿರುವ ಇಲ್ಲಿನ ನಿವಾಸಿಗಳು ತೆರವು ಕಾರ್ಯಾಚರಣೆಯಿಂದ ಈಗಿರುವ ತಮ್ಮ ಸೂರನ್ನು ಕಳೆದುಕೊಂಡು ಬೀದಿಗೆ ಬಂದಂತಾಗುತ್ತದೆ. ನಿರಾಶ್ರಿತರಾಗುವ ಇವರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಲಿದ್ದು, ಸರ್ಕಾರ ಇವರಿಗೆ ಬೇರೆಡೆ ಎಲ್ಲಾದರೂ ಜಾಗ ಕಲ್ಪಿಸಿಕೊಡುವ ಮೂಲಕ ಅವರಿಗೆ ನೆರವಿನ ಹಸ್ತ ಚಾಚುತದೋ ಇಲ್ಲವೋ ಎಂಬುದು ತಿಳಿಯದಾಗಿದೆ
ನಿವಾಸಿಗಳಲ್ಲಿ ಆತಂಕ : ಕೆರೆ ಸರ್ವೆಕಾರ್ಯ ಆಗಿದೆ ಇನ್ನೇನು ನಮ್ಮ ಮನೆಗಳನ್ನು ತೆರವು ಮಾಡುತ್ತಾರೆ ಮುಂದೆ ನಾವು ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂಬ ದುಗುಡ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಈ ಹಿಂದೆಯೇ ಹಲವಾರು ಬಾರಿ ನಿವೇಶನಕ್ಕಾಗಿ ಹಾಗೂ ಹಕ್ಕುಪತ್ರಕ್ಕಾಗಿ ಅರ್ಜಿಸಲುತ್ತಲೇ ಬಂದಿದ್ದರೂ ಯಾರೊಬ್ಬರೂ ಕಿವಿಗೊಡದಿದ್ದಿದ್ದು , ಇವರ ಅನಧಿಕೃತ ಗುಡಿಸಲು ವಾಸಿಗಳೆಂದೆ ಗುರ್ತಿಸುವಂತಾಯಿತು. ಸದ್ಯ ಯಾವ ಕ್ಷಣದಲ್ಲಿ ಜೆಸಿಬಿ ಯಂತ್ರಗಳು ನಮ್ಮ ಮನೆ ಕೆಡವಲಿವೆ ಎಂಬ ಆತಂಕದಲ್ಲಿರುವ ಇವರ ಕೂಗಿಗೆ ಸರ್ಕಾರ ಸ್ಪಂದಿಸುತ್ತದೆಯೋ ಎಂದು ಕಾದುನೋಡಬೇಕಿದೆ.
ವ್ಯಾಪಾರಸ್ಥರಿಗೆ ದುಗುಡ : ತಾಲ್ಲೂಕು ಆಡಳಿತ ಬಸ್ ನಿಲ್ದಾಣದಲ್ಲಿ ತಲೆ ಎತ್ತಿರುವ 86 ಅಂಗಡಿಗಳ ಪಟ್ಟಿ ಮಾಡಿದ್ದು, ತೆರವಿಗೆ ಮುಂದಾದರೆ ಮುಂದೇನು ಎಂಬ ಪ್ರಶ್ನೆ ಅಂಗಡಿದಾರರಿಗೆ ಕಾಡಿದೆ.
ಕೆರೆ ಪ್ರದೇಶದಲ್ಲಿ ಕಟ್ಟಡ ಕಟ್ಟಿ ವಹಿವಾಟು ನಡೆಸುತ್ತಿರುವ ಅಂಗಡಿದಾರರನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದ್ದು ಎಲ್ಲೆಡೆ ಕಾರ್ಯಾಚರಣೆ ನಡೆಯುತ್ತಿರುವುದರಿಂದ ನಾವೂ ಕೂಡ ಜಾಗ ಕಳೆದುಕೊಳ್ಳುತ್ತೇವೆ ಎಂಬುದು ಒತ್ತುವರಿದಾರರಿಗೆ ಮನದಟ್ಟಾಗಿದ್ದು , ಮುಂದೇನು ಎಂಬ ಚಿಂತೆ ಆವರಿಸಿದೆ.
ಒಟ್ಟಾರೆ ಒತ್ತುವರಿ ತೆರವಿಗೆ ಮುಂದಾಗಿರುವ ತಾಲ್ಲೂಕು ಆಡಳಿತದ ಕ್ರಮ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ.ಮತ ಕೇಳಲು ಬರುವ ಜನಪ್ರತಿನಿಧಿಗಳು ಈ ಸಮಯದಲ್ಲಿ ಬಂದು ನಮಗೆ ಒತ್ತಾಸೆಯಾಗಿ ನಿಲ್ಲಲ್ಲಿ ಎಂಬುದು ಇವರ ಮನದಾಳದ ಮಾತಾಗಿದೆ.
---------------------------------
ಹುಳಿಯಾರು ಕೆರೆ ಅಂಗಳ ಒತ್ತುವರಿ ಮಾಡಿಕೊಂಡು ಅನಧಿಕೃತ ವಾಸವಿರುವ ಕುಟುಂಬಗಳನ್ನು ಗುರ್ತಿಸಲಾಗಿದ್ದು ಅವರ ಪುನರ್ವಸತಿಗಾಗಿ ಸರ್ಕಾರಿ ಖಾಲಿ ಜಾಗವನ್ನು ಗುರ್ತಿಸಿ ಅಭಿವೃದ್ದಿಪಡಿಸಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುವುದು : ತಹಶೀಲ್ದಾರ್ ಕಾಮಕ್ಷಮ್ಮ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ