ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳೆಲ್ಲರು ಒಟ್ಟಾಗಿ ಸೇರಿ ಹುಳಿಯಾರು ಕೆರೆಏರಿ ಮೇಲಿನ ರಸ್ತೆಯಲ್ಲಿ ದಟ್ಟವಾಗಿ ಬೆಳೆದಿದ್ದ ಜಾಲಿಮುಳ್ಳಿನ ಗಿಡಗಳನ್ನು ಶನಿವಾರಂದು ತೆರವುಗೊಳಿಸಿದರು.
ಹುಳಿಯಾರ್-ಕೆಂಕೆರೆ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೆರೆಏರಿ ಮೇಲಿನ ಮುಳ್ಳಿನ ಗಿಡಗಳನ್ನು ಕಡಿದು ತೆರವುಗೊಳಿಸುತ್ತಿರುವುದು. |
ಹುಳಿಯಾರಿನಿಂದ ಸರ್ಕಾರಿ ಪಿಯು ಕಾಲೇಜು, ಪದವಿ ಕಾಲೇಜು, ಪ್ರೌಢಶಾಲೆ ಕಡೆ ಹೋಗಲು ಇರುವ ಈ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡದೊಡ್ಡ ಜಾಲಿಮುಳ್ಳಿನ ಗಿಡಗಳು ಬೆಳೆದು ನಿತ್ಯ ಇಲ್ಲಿ ಓಡಾಡುವ ನೂರಾರು ಶಾಲಾ ಮಕ್ಕಳು , ಸಾರ್ವಜನಿಕರಿಗೆ ತೊಂದರೆಯಾಗಿದ್ದಲ್ಲದೆ ಗಿಡದ ಕೊಂಬೆಗಳು ಅರ್ಧ ರಸ್ತೆಗೆ ಆವರಿಸಿ ನಡೆದು ಹೋಗುವಾಗ ತಗುಲುತ್ತಿದ್ದವು.
ಮುಳ್ಳುಗಿಡಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತದವರಿಗೆ ತಿಳಿಸಿದ್ದರೂ ಸಹ ಯಾರೊಬ್ಬರು ಇತ್ತ ಗಮನ ನೀಡಿರಲಿಲ್ಲ. ಇದನ್ನೆಲ್ಲಾ ಕಂಡ ಪಿಯು ಕಾಲೇಜಿನ ವಿದ್ಯಾರ್ಥಿಗಳು ಎನ್.ಎಸ್.ಎಸ್.ಅಧಿಕಾರಿ ಯೋಗೀಶ್ ನೇತೃತ್ವದಲ್ಲಿ ಸ್ವಯಂಪ್ರೇರಣೆಯಿಂದ ಶನಿವಾರದಂದು ಈ ಮುಳ್ಳಿನಗಿಡಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ.
ವಿದ್ಯಾರ್ಧಿ ಹಾಗೂ ವಿದ್ಯಾರ್ಥಿನಿಯರೂ ಶನಿವಾರ ಬೆಳಿಗ್ಗಿನಿಂದ ಈ ಕಾರ್ಯದಲ್ಲಿ ತೊಡಗಿದ್ದು ತಮ್ಮ ಮನೆಗಳಿಂದ ಕೆಲ ಸಲಕರಣೆಗಳನ್ನು ತಂದು ರಸ್ತೆಯಲ್ಲಿ ಅಡ್ಡಾದಿಡ್ಡಿ ಬೆಳೆದಿದ್ದ ಮುಳ್ಳುಗಿಡಗಳನ್ನು ಕಡಿಯುತ್ತಿದ್ದರಲ್ಲದೆ, ಮೈ,ಕೈಗೆ ಮುಳ್ಳುಗಳು ತಾಕಿದರೂ ಸಹ ಅದರ ಬಗ್ಗೆ ಗಮನಗೊಡದೆ ತಮ್ಮ ಕಾರ್ಯದಲ್ಲಿ ಮಗ್ನರಾಗಿ ಶ್ರಮದಾನದಲ್ಲಿ ತೊಡಗಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಪ್ರಾಚಾರ್ಯ ನಟರಾಜ್, ಉಪನ್ಯಾಸಕರಾದ ಶಶಿಭೂಷಣ್, ವಿ.ಎಚ್.ರೇವಣ್ಣ ಸೇರಿದಂತೆ ಇತರ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ ಮುಳ್ಳುಗಿಡಗಳ ತೆರವುಕಾರ್ಯದಲ್ಲಿ ತೊಡಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ