ಹಿಂದಿನ ಕಾಲದಲ್ಲಿ ರೈತರು ಬಿತ್ತನೆ ಬೀಜದ ಕಾಳುಗಳನ್ನು ಸುರಕ್ಷಿತವಾಗಿಟ್ಟು ಕೊಂಡು ಅವುಗಳನ್ನೇ ಮುಂದಿನ ವರ್ಷದಲ್ಲಿ ಬಿತ್ತನೆ ಮಾಡುತ್ತಿದ್ದರು. ಆದರೆ ಈಗ ಬರಗಾಲದಿಂದಾಗಿ ಫಸಲು ಬಾರದೆ, ಬಿತ್ತಲು ಬೀಜದಕಾಳುಗಳಿಲ್ಲದೆ, ಬಿತ್ತನೆ ಬೀಜಕ್ಕಾಗಿ ಕೃಷಿ ಇಲಾಖೆಯ ಮೊರೆ ಹೋಗುವಂತಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ತಿಳಿಸಿದರು.
ಹುಳಿಯಾರಿನಲ್ಲಿ ಕೃಷಿ ಇಲಾಖೆವತಿಯಿಂದ ನಡೆದ ಭೂಚೇತನಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನ ಕೇಂದ್ರ ರಾಮಕೃಷ್ಣಪ್ಪ ಉದ್ಘಾಟಿಸಿದರು. |
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕೃಷಿ ಇಲಾಖೆವತಿಯಿಂದ ಆಯೋಜಿಸಿದ್ದ ಭೂಚೇತನ ಯೋಜನೆಯಡಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂಚೇತನ ಯೋಜನೆ ಭೂಮಿಗೆ ಚೇತನವನ್ನು ನೀಡುವಂತ ಯೋಜನೆಯಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಿದ್ದು ಅವುಗಳನ್ನು ಸಮಗ್ರವಾಗಿ ಬಳಸಿಕೊಳ್ಳುವ ಮೂಲಕ ಫಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿಗೆ ಹೊಸ ಚೇತನವನ್ನು ನೀಡುವಂತಾಗಬೇಕು ಎಂದರು. ರೈತರಿಗೆ ಸೂಕ್ತ ಮಾರ್ಗದರ್ಶನ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಕೃಷಿ ಇಲಾಖೆ ಸ್ಥಾಪಿಸಿದ್ದು ಅದರಡಿ ಬೆಳೆ ಬಿತ್ತಲು, ಕಾಲಕ್ಕೆ ತಕ್ಕಂತೆ ಗೊಬ್ಬರ,ನೀರು ಹಾಯಿಸುವುದರ ಬಗ್ಗೆ, ಕೃಷಿಯಲ್ಲಿ ಯಂತ್ರಗಳ ಬಳಕೆ ಹಾಗೂ ತಾಂತ್ರಿಕ ಸಲಹೆಗಳನ್ನ ಪಡೆಯುವಲ್ಲಿ ರೈತರು ಮುಂದಾಗಬೇಕು ಎಂದರು. ಶ್ರಮಪಟ್ಟು ದುಡಿಯುವವರನ್ನ ಹಾಗೂ ಸಾವಯವ ಕೃಷಿಯಲ್ಲಿ ತೊಡಗಿರುವವರನ್ನು ಭೂ ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಕೃಷಿ ನಿರ್ದೇಶಕ ವನದಾಸೆಗೌಡ್ರು ಮಾತನಾಡಿ ತಮ್ಮ ಇಲಾಖೆಯಲ್ಲಿನ ಯೋಜನೆಗಳು,ದೊರೆಯಬಹುದಾದ ಸೌಲಭ್ಯ, ಸಬ್ಸಿಡಿ, ಗೊಬ್ಬರಬಿತ್ತನೆ ಬೀಜ ಸೇರಿದಂತೆ ಇತರ ಮಾಹಿಗಳನ್ನು ನೀಡಿದರಲ್ಲದೆ, ಕೃಷಿಭಾಗ್ಯ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಹಸಿರು ಸೇನೆಯ ಕೆಂಕೆರೆ ಸತೀಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು , ಸರ್ಕಾರದಿಂದ ಹೆಚ್ಚಿನ ನೆರವು ಸಿಗುವಂತಾಗಬೇಕಿದೆ ಎಂದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿ ನೂರುಲ್ಲಾ, ತಿಪ್ಪೇಸ್ವಾಮಿ,ಶಿವಣ್ಣ, ಮುಖಂಡರಾದ ನಂದಿಹಳ್ಳಿ, ಜಲಾಲ್ ಸಾಬ್, ರಹಮತುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹುಳಿಯಾರು ಸೇರಿದಂತೆ ಸುತ್ತಮುತ್ತಲ ರೈತರು, ರೈತಅನುವುಗಾರರು ಹಾಜರಿದ್ದು ತಮ್ಮ ಸಮಸ್ಯೆಗಳನ್ನು ತಿಳಿಸಿ ಮಾಹಿತಿ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ