ಹೆದ್ದಾರಿಯಲ್ಲಿನ ಗುಂಡಿಗಳಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದ್ದರೂ ಸರಿಮಾಡದ ಇಲಾಖೆಯ ಕಾರ್ಯವೈಖರಿಯಿಂದ ಬೇಸತ್ತ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೋಳಿ ಶ್ರೀನಿವಾಸ್ ಖುದ್ದಾಗಿ ತಾವೇ ನಿಂತು ಗುಂದಿಗಳಿಗೆ ಮಣ್ಣು ಹಾಕುವ ಮೂಲಕ ತಾತ್ಕಾಲಿಕವಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಹುಳಿಯಾರು ಪಟ್ಟಣದ ಆಸ್ಪತ್ರೆ ತಿರುವಿನ ರಾಜ್ಯಹೆದ್ದಾರಿಯಲ್ಲಿನ ಗುಂಡಿಗಳಿಗೆ ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್ ನೇತೃತ್ವದಲ್ಲಿ ಮಣ್ಣು ಹಾಕಿ ಮುಚ್ಚುತ್ತಿರುವುದು. |
ಹುಳಿಯಾರು ಪಟ್ಟಣದ ಮೂಲಕ ಹಾದುಹೋಗಿರುವ ಶ್ರೀರಂಗಪಟ್ಟಣ -ಬೀದರ್ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು , ಈ ರಸ್ತೆ ಹದಗೆಟ್ಟಿದ್ದು ಪಟ್ಟಣದ ಅನೇಕ ಕಡೆ ಕಿತ್ತು ಹೋಗಿ ದೊಡ್ಡಗುಂಡಿಗಳೇ ನಿರ್ಮಾಣವಾಗಿದ್ದರೂ ಸಹ ಸ್ಥಳೀಯ ಗ್ರಾ.ಪಂ.ನವರಾಗಲಿ, ಪಿಡಬ್ಯೂಡಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಅಲ್ಲದೆ ಮಳೆ ಬಂದರೆ ಈ ಗುಂಡಿಗಳಲ್ಲಿ ನೀರು ನಿಂತು ಕೆಸರುಂಟಾಗಿ ಹಲವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ಕಂಡ ಕರವೇ ಶ್ರೀನಿವಾಸ್ ಸ್ವಯಂಪ್ರೇರಿತರಾಗಿ ಈ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಪಟ್ಟಣದ ಎಪಿಎಂಸಿ ಹತ್ತಿರ, ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಹತ್ತಿರ, ಒಣ ಕಾಲುವೇ ಹತ್ತಿರವೂ ಸಹ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಂಚರಿಸಲು ಜನ ಪರದಾಡುವಂತಾಗಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ಗುಂಡಿಕಾಣದೆ ವಾಹನ ಸವಾರರು ಬೀಳುವ ಘಟನೆಗಳು ಮರುಕಳಿಸುತ್ತಿವೆ. ಇನ್ನಾದರೂ ಇಲಾಖೆಯವರು ಎಚ್ಚೆತ್ತು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚದೆ ಹೋದರೆ ಸಂಘಟನೆಯಿಂದ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ