ಮಹಾಲಯ ಅಮಾವಾಸ್ಯೆ ಮುಗಿದು ಆಶ್ವಿಜ ಮಾಸದ ಪಾಡ್ಯದಿಂದ ನವರಾತ್ರಿ ಸಂಭ್ರಮ ಶುರುವಾಗಲಿದೆ.ನಾಡಹಬ್ಬವಾಗಿ ದಸರಾದ ಆಚರಣೆಯ ಸಂತಸ ಒಂದೆಡೆಯಾದರೆ ಮನೆಗಳಲ್ಲಿ ಬೊಂಬೆ ಕೂರಿಸುವ ಸಡಗರ ಮತ್ತೊಂದೆಡೆ.ಮನೆಗಳಲ್ಲಿ ಬೊಂಬೆಗಳನ್ನು ಚೆಂದವಾಗಿ ಜೋಡಿಸಿ ಪೂಜಿಸುವುದು ಕೆಲವೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ.ಬೊಂಬೆಹಬ್ಬ ನವರಾತ್ರಿಯ ಒಂಬತ್ತು ದಿನಗಳು ನಡೆಯಲಿದ್ದು ಇದಕ್ಕಾಗಿ ಎರಡು ಮೂರು ದಿನಗಳಿಂದಲೆ ಬೊಂಬೆ ಜೋಡಿಸುವ ಕಾರ್ಯ ಆರಂಭವಾಗುತ್ತದೆ.
ಪಾಡ್ಯದಂದು ಆಚರಿಸುವ ಬೊಂಬೆಹಬ್ಬದ ಪ್ರಯುಕ್ತ ಹುಳಿಯಾರಿನ ಮನೆಯೊಂದರಲ್ಲಿ ಬೊಂಬೆ ಕೂರಿಸಿರುವುದು. |
ಬೊಂಬೆ ಹಬ್ಬವೆಂದರೆ ಪಟ್ಟದ ಬೊಂಬೆಯ ಜೊತೆಗೆ ಒಂದಷ್ಟು ಬೊಂಬೆಗಳನ್ನು ಇಟ್ಟು ಪೂಜಿಸುವುದು.ಸಂಗ್ರಹದಲ್ಲಿರುವ ಎಲ್ಲಾರೀತಿಯ ಬೊಂಬೆಗಳನ್ನು ಜೋಡಿಸುತ್ತರಾದರೂ ಪಟ್ಟದ ಬೊಂಬೆಗೆ ಪ್ರಥಮ ಪ್ರಾಶಸ್ತ್ಯ. ಪಟ್ಟದ ಬೊಂಬೆಯು ಚಂದನದಿಂದ ಕೆತ್ತಿದ ಗಂಡು ಹೆಣ್ಣಿನ ಜೋಡಿಯ ಸುಂದರವಾದ ಸಾಂರದಾಯಿಕ ಶೈಲಿಯ ಬೊಂಬೆಯಾಗಿದ್ದು ಇದನ್ನು ಶ್ರೀನಿವಾಸ ಪದ್ಮಾವತಿಯ ಪ್ರತೀಕವೆಂದು ಭಾವಿಸಲಾಗುತ್ತದೆ.ಹೆಚ್ಚಾಗಿ ತಿರುಪತಿಯಲ್ಲಿ ದೊರಕುವ ಈ ಬೊಂಬೆಗೆ ಯಾವಾಗಲೂ ಅಗ್ರ ಸ್ಥಾನ.ಪಟ್ಟದ ಬೊಂಬೆಗಳಿಗೆ ಸಾಂಪ್ರದಾಯಿಕ ಉಡುಗೆ ತೊಡಿಸಿ ಶೃಂಗಾರ ಮಾಡುವುದು ಕೂಡ ಒಂದು ಕಲೆಯಾಗಿದ್ದು ಎಲ್ಲರಿಗೂ ಬರುವಂತದಲ್ಲ. ಮದುವೆಯ ಸಮಯದಲ್ಲಿ ತಾಯಿ ಮನೆಯಿಂದ ಮಗಳಿಗೆ ಈ ಬೊಂಬೆ ಕೊಡುವುದು ವಾಡಿಕೆ.ಸುಖ ದಾಂಪತ್ಯದ ಪ್ರತೀಕವೆನ್ನುವ ಈ ಬೊಂಬೆಯನ್ನು ಈ ಸಮಯದಲ್ಲಿ ಮಾತ್ರ ಪ್ರದರ್ಶನಕ್ಕಿಟ್ಟು ನಂತರ ಜೋಪಾನವಾಗಿ ತೆಗೆದಿಡಲಾಗುತ್ತದೆ.
ಬೊಂಬೆ ಜೋಡಿಸುವುದು ಸುಮ್ಮನೆಯ ಮಾತಲ್ಲ.ಕಲ್ಪನೆಯಂತೆ ಎಲ್ಲಾ ರೀತಿಯ ಬೊಂಬೆಗಳನ್ನು ಅವುಗಳ ಗಾತ್ರ,ಆಧಾರದ ಮೇಲೆ ಅಂದವಾಗಿ ಮೆಟ್ಟಿಲು ಮೆಟ್ಟಿಲಾಗಿ ಇಟ್ಟು ಜೋಡಿಸುವುದಕ್ಕೆ ಮತ್ತೊಬ್ಬರ ಸಹಕಾರ ಅಗತ್ಯ.ಮಕ್ಕಳಾಡುವ ಬೊಂಬೆಗಳಿಂದ ಹಿಡಿದು ಎಲ್ಲಾ ರೀತಿಯ ವೈವಿಧ್ಯಮಯ ಬೊಂಬೆಗಳನ್ನೂ ಕೂರಿಸುವುದಕ್ಕೆ ರೂಢಿ. ಆಡುಗೆ ಮನೆ ಸೆಟ್ಟು,ಹೊಲಗದ್ದೆ,ಅರಣ್ಯದಲ್ಲಿ ಕಾಡುಪ್ರಾಣಿಗಳು,ಮದುವೆ,ಡುಮ್ಮಡುಮ್ಮಿ,ಸೈನಿಕರುಆನೆಗಳು,ದೇಶಪ್ರೇಮದ ಬೊಂಬೆಗಳು ಹೆಚ್ಚಿನದಾಗಿ ಎಲ್ಲರ ಮನೆಯಲ್ಲೂ ಕಾಣಸಿಗುವ ಬೊಂಬೆಗಳಾಗಿವೆ
ಸಾಮಾನ್ಯವಾಗಿ ಆಶ್ವೀಜದ ಪಾಡ್ಯದಿಂದ ದಶಮಿಯವರೆಗೂ ಬೊಂಬೆ ಕೂರಿಸುವುದಿದ್ದು ಕೆಲವರು ಶಾರದೆ ಹಬ್ಬದಂದು ಕೂಡ ಕೂರಿಸುವ ಪರಿಪಾಠವಿದೆ.ಬರಿ ಬೊಂಬೆ ಇಟ್ಟರೆ ಇದು ಮುಗಿಯುವುದಿಲ್ಲ. ಪ್ರತಿದಿನ ಸಂಜೆ ಆರತಿ ಮಾಡಿ ಬೊಂಬೆ ನೋಡಲು ಬರುವ ಮಕ್ಕಳಿಗೆ ಬೊಂಬೆ ಬಾಗಿನ ಕೊಡುವ ಸಂಪ್ರದಾಯವಿದೆ.
ಒತ್ತಡದ ಬದುಕಿನಲ್ಲಿ ಬೊಂಬೆ ಹಬ್ಬಕ್ಕೆ ವ್ಯವಧಾನವಿಲ್ಲದವರೂ ಬೊಂಬೆ ಜೋಡಿಸಿದ ಶೋಕೇಸ್ ಕೆಳಗೆ ಪಟ್ಟದ ಬೊಂಬೆ ಇಟ್ಟು ಪೂಜಿಸುವ ಮೂಲಕವಾದರೂ ಹಬ್ಬವನ್ನು ಆಚರಿಸಿದ ಸಂತೃಪ್ತಿ ಪಡೆಯುತ್ತಾರೆ. ದಶಮಿಯಂದು ಪಟ್ಟದ ಬೊಂಬೆಗಳನ್ನು ಮಲಗಿಸಿ ವಿಸರ್ಜಿಸುವ ಮೂಲಕ ಬೊಂಬೆ ಹಬ್ಬಕ್ಕೆ ತೆರೆ ಬೀಳುತ್ತದೆ.
ಇಂತಹ ಹಬ್ಬ ಕಾಲನ ಸುಳಿಗೆ ಸಿಕ್ಕು ಮರೆಯಾಗುತ್ತಿರುದು ವಿಷಾದನೀಯ.ಟಿವಿ.ಕಂಪ್ಯೂಟರ್ ನಲ್ಲೆ ಕಾಲ ಕಳೆಯುವ ಇಂದಿನ ಮಕ್ಕಳಿಗೆ ಈ ಬೊಂಬೆಹಬ್ಬ ಪದವೆ ವಿಚಿತ್ರವಾಗಿ ಕೇಳಿಬಂದರೂ ಆಶ್ಚರ್ಯವಿಲ್ಲ.ಬೊಂಬೆ ಅಂದರೆ ಬಾರ್ಬಿ ಮಾತ್ರ ಎನ್ನುವ ಕಲ್ಪನೆ ಮೂಡಿರುವ ಮಕ್ಕಳಲ್ಲಿ ಬೊಂಬೆಹಬ್ಬದ ಮಹತ್ವದ ಬಗ್ಗೆ ತಿಳಿಹೇಳಬೇಕಿದೆ. ಇದೊಂದು ಸಂಪ್ರದಾಯ ಎನ್ನುವ ಕಾರಣದಿಂದ ಉಳಿದು ಬಂದಿರುವ ಈ ಹಬ್ಬದ ಬಗ್ಗೆ ಅರಿವು ಮೂಡಿಸಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ