ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಮಕ್ಕಳನ್ನು ಉದ್ದೇಶಿಸಿ ಮಾಡಿದ ಭಾಷಣದ ನೇರಪ್ರಸಾವನ್ನು ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಿಶಬ್ದವಾಗಿ ವೀಕ್ಷಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಧಾನಿಯವರ ಭಾಷಣ ವೀಕ್ಷಿಸುತ್ತಿರುವ ಶಾಲಾ ಮಕ್ಕಳು. |
ದೆಹಲಿಯ ಮಾಣಿಕ್ ಷಾ ಸಭಾಂಗಣದಲ್ಲಿ ನಡೆದ ಮೋದಿ ಭಾಷಣವನ್ನು ಟಿ.ವಿಯ ಮೂಲಕ ವೀಕ್ಷಿಸಲು ಹಾಗೂ ಧ್ವನಿವರ್ಧಕದಲ್ಲಿ ಆಲಿಸಲು ಈ ಶಾಲೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ಒಳಗಡೆ ಅಷ್ಟು ಮಕ್ಕಳನ್ನು ಕೂರಿಸಲು ಸ್ಥಳಾವಕಾಶ ಲಭ್ಯವಿಲ್ಲದಿದ್ದರಿಂದ ಎಲ್ಲಾ ಮಕ್ಕಳನ್ನು ಶಾಲಾ ಮೈದಾನದಲ್ಲಿ ಒಂದೆಡೆ ಕೂರಿಸಿ ಪ್ರಧಾನಿಯವರ ಭಾಷಣ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಭಾಷಣದ ನೇರಪ್ರಸಾರದ ವ್ಯವಸ್ಥೆ ಮಾಡುವಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿದ್ದರಿಂದ ಮುಂಚಿತವಾಗಿಯೇ ಶಿಕ್ಷಕರು ಈ ಬಗ್ಗೆ ವ್ಯವಸ್ಥೆ ಮಾಡಿಕೊಂಡಿದ್ದರು.
ಟಿ.ವಿ, ಬ್ಯಾಟರಿ ಹಾಗೂ ಸಂಪರ್ಕಕ್ಕಾಗಿ ಡಿಶ್ ನೆಟ್ ವರ್ಕನ್ನು ಬಾಡಿಗೆ ತಂದಿದ್ದಲ್ಲದೆ , ಎಲ್ಲಾ ಮಕ್ಕಳಿಗೆ ಕೇಳಿಸಲು ಅನುವು ಮಾಡಿಕೊಡಲು ಧ್ವನಿವರ್ಧಕದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಮಕ್ಕಳು ಆಸಕ್ತಿಯಿಂದ ಮೋದಿ ಭಾಷಣ ಕೇಳಿದ್ದು ಶಿಕ್ಷಕರ ಈ ಶ್ರಮ ಸಾರ್ಥಕವಾಯಿತು.
ಶಾಲೆಗೆ ರಜೆ : ಶಿಕ್ಷಕರ ದಿನಾಚರಣೆ ಪ್ರಯುಕ್ತ ಹೆಚ್ಚಿನ ಶಿಕ್ಷಕರು ತಾಲ್ಲೂಕಿನಲ್ಲಿ ನಡೆಯುವ ಸಮಾರಂಭಕ್ಕೆ ತೆರಳ ಬೇಕಾದ್ದರಿಂದ ಹೆಚ್ಚಿನ ಶಾಲೆಗಳು ಇಂದು ರಜೆ ಘೋಷಿಸಿದ್ದವು. ಈ ಬಗ್ಗೆ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿದಾಗ ಪ್ರಧಾನಿಯವರ ಭಾಷಣ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ಬಂದಿತ್ತು , ಆದರೆ ವ್ಯವಸ್ಥೆ ಕಡ್ಡಾಯವಲ್ಲ ಎಂದು ತಿಳಿಸಿದ್ದರಿಂದ ಹಾಗೂ ಶಾಲೆಗಳಲ್ಲಿ ಈ ಬಗ್ಗೆ ಸೂಕ್ತ ವ್ಯವಸ್ಥೆಯಿಲ್ಲವಾದ್ದರಿಂದ ನೇರಪ್ರಸಾರ ಕಲ್ಪಿಸಲು ಸಾಧ್ಯವಾಗಿಲ್ಲ , ಹಾಗಿದ್ದು ಕೂಡ ಪ್ರಧಾನಿಯವರ ಪ್ರಸಾರದ ನಾಳೆಯ ದಿನ ವಿದ್ಯಾರ್ಥಿಗಳು ವೀಕ್ಷಿಸಲು ಅನುವು ಮಾಡಿಕೊಡುತ್ತೇವೆ ಎಂದರು.
ತೊಡಕು : ಮೋದಿ ಭಾಷಣವನ್ನು ಶಾಲಾಮಕ್ಕಳಿಗೆ ತೋರಿಸಬೇಕೆನ್ನುವ ಉದ್ದೇಶದಿಂದ ಅದಕ್ಕೆ ಬೇಕಾದ ಟಿ.ವಿ, ಕೇಬಲ್ , ಸ್ವೀಕರ್ ಸೇರಿದಂತೆ ಇನ್ನಿತರ ಪರಿಕರಗಳ ವ್ಯವಸ್ಥೆಯನ್ನು ಹೋಬಳಿಯ ಕೆಲ ಶಾಲೆಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಮಾಡಿಕೊಂಡರೆ, ಮತ್ತೆಕೆಲ ಶಾಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ ತರಾತುರಿಯಲ್ಲಿ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಂಡು ಮಧ್ಯಾಹ್ನ ಪ್ರಾರಂಭವಾದ ಮೋದಿ ಭಾಷಣವನ್ನು ಶಾಲಾಮಕ್ಕಳಿಗೆ ತೋರಿಸಲಾಯಿತು.
ಗ್ರಾಮೀಣ ಭಾಗದ ಮಕ್ಕಳಿಗೆ ಹಿಂದೆ ಭಾಷೆ ಅರ್ಥವಾಗದೆ ಇದ್ದುದ್ದು ಪ್ರಧಾನಿಯವರ ಮಾತಿನ ಅರ್ಥ ಗ್ರಹಿಸಲು ಸಾಧ್ಯವಾಗಲಿಲ್ಲ. ನೇರಪ್ರಸಾರವಾದ್ದರಿಂದ ಅದರ ಭಾಷಾನುವಾದ ಕೂಡ ಮಾಡಲಾಗದೆ , ವೀಕ್ಷಿಸಿದ ವಿದ್ಯಾರ್ಥಿಗಳಿಂದ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ.
--------------------
ಪ್ರಧಾನಿಯವರೆಂದರೆ ಏನೋ ಎಂಬ ಭಾವವಿದ್ದ ಮಕ್ಕಳಿಗೆ ಇಂದು ಪ್ರಧಾನಿಯವರು ಮಕ್ಕಳೊಡನೆ ಮಾಡಿದ ಸಮಾಲೋಚನೆ ವೀಕ್ಷಿಸಿದ್ದರಿಂದ ಮುಂದೊಂದು ದಿನ ಎಲ್ಲ ಮಕ್ಕಳು ಸಹ ಪ್ರಧಾನಿಗಳೊಡನೆ ಸಂವಾದಿಸಬಹುದೆಂಬ ಆತ್ಮವಿಶ್ವಾಸ ಬಂದಂತಾಗಿದೆ : ವಿದ್ಯಾಕುಂಚನೂರು ವಿಜ್ಞಾನಶಿಕ್ಷಕಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ