ಇಲ್ಲಿನ ಯುವ ಕಾಂಗ್ರೆಸ್ ಘಟಕದವತಿಯಿಂದ ಜಮ್ಮು-ಕಾಶ್ಮೀರದ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಪಟ್ಟಣದ ಅಂಗಡಿಗಳ ಹಾಗೂ ದಾನಿಗಳಲ್ಲಿ ನಿಧಿ ಸಂಗ್ರಹಿಸಲಾಯಿತು.
ಹುಳಿಯಾರಿನಲ್ಲಿ ಯುವಕಾಂಗ್ರೆಸ್ ವತಿಯಿಂದ ಜಮ್ಮು-ಕಾಶ್ಮೀರದ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಿಧಿ ಸಂಗ್ರಹಿಸಲಾಯಿತು. |
ನಿಧಿ ಸಂಗ್ರಹಣೆಯ ನೇತೃತ್ವವಹಿಸಿದ್ದ ಚಿ.ನಾ.ಹಳ್ಳಿ ತಾಲ್ಲೂಕು ಯುವಕಾಂಗ್ರೆಸ್ ನ ಅಧ್ಯಕ್ಷ ಹೊಸಳ್ಳಿ ಅಶೋಕ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪದಿಂದಾಗಿ ಸಹಸ್ರಾರು ಜನ ನಿರ್ಗತಿಕರಾಗಿದ್ದು ಊಟ,ಬಟ್ಟೆಗೆ ಪರದಾಡುವಂತ ಚಿಂತಾಜನಕ ಸ್ಥಿತಿ ಉಂಟಾಗಿದೆ. ಅಲ್ಲಿನ ಜನಕ್ಕೆ ಈಗ ನೆರವಿನ ಅವಶ್ಯಕತೆಯಿದ್ದು ನಮ್ಮಿಂದಾಗುವ ಸಹಾಯ ಮಾಡುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಣೆ ಮಾಡುತ್ತಿರುವುದಾಗಿ ತಿಳಿಸಿದರು. ಇಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರಲ್ಲಿಗೆ ಕಳುಹಿಸಲಿದ್ದು , ಅಲ್ಲಿಂದ ನೆರೆ ಸಂತ್ರಸ್ತರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ . ಅಂಗಡಿಯವರು, ಸಾರ್ವಜನಿಕರು ತಮ್ಮ ಸ್ವಯಂಪ್ರೇರಣೆಯಿಂದ ಹಣ ನೀಡಿದ್ದು ಒಟ್ಟು 8880 ರೂ ಸಂಗ್ರಹವಾಗಿದ್ದು , ಇನ್ನು ಹೆಚ್ಚಿನ ಮೊತ್ತ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಶ್ರೀಧರ್, ಮುಖಂಡರಾದ ವೈ.ಸಿ.ಸಿದ್ರಾಮಯ್ಯ, ಪದಾಧಿಕಾರಿಗಳಾದ ಮುನಾವರ್ ಪಾಷ,ಶ್ರೀನಿವಾಸ್,ಗಂಗಾಧರ್,ಈಶಯ್ಯ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ