ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಪಾಕ್ಷಿಕಕಾರ್ಯಕ್ರಮ ಪಟ್ಟಣದ ಡಿ.ಆರ್.ನರೇಂದ್ರಬಾಬು ಅವರ ಆನಂದಸಿಂಧು ನಿಲಯದಲ್ಲಿ ನಡೆಯಿತು.
ಹುಳಿಯಾರಿನ ಕಸಾಪ ವತಿಯಿಂದ ನಡೆದ ಮನೆಮನೆಗಳಲ್ಲಿ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಶಿಕ್ಷಕ ಯಲ್ಲಪ್ಪ ಸರ್ವಜ್ಞನ ತ್ರಿಪದಿಗಳ ಕುರಿತು ಉಪನ್ಯಾಸ ನೀಡಿದರು. |
ಗೋಷ್ಠಿಯಲ್ಲಿ ಶಿಕ್ಷಕ ಯಲ್ಲಪ್ಪ ಸರ್ವಜ್ಞನ ವಚನಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಸರ್ವಜ್ಞನ ಹುಟ್ಟು,ಬದುಕು, ಆತ ರಚಿಸಿದ ತ್ರಿಪದಿಗಳ ಬಗ್ಗೆ ತಿಳಿಸುತ್ತಾ ಪ್ರಸ್ತುತ ಮಾನವನ ಜೀವನಕ್ಕೆ ಪೂರಕವಾದ ವಿಷಯಗಳನ್ನು ಒಳಗೊಂಡಂತೆ ತ್ರಿಪದಿಗಳನ್ನು ರಚಿಸಿದ್ದು, ಅವು ಇಂದಿಗೂ ಪ್ರಚಲಿತದಲ್ಲಿರುವುದು ಕಾಣಬಹುದಾಗಿದೆ ಎಂದರು. ವಿದ್ಯೆ,ದಾನ,ಕೌಟುಂಬಿಕ ಜೀವನ,ಗುರು,ಗುರುಹಿರಿಮೆ,ಭಕ್ತಿ, ಮಾತು, ಜ್ಞಾನ ಸೇರಿದಂತೆ ಅನೇಕ ವಿಷಯಗಳನ್ನು ಒಳಗೊಂಡಂತೆ ತ್ರಿಪದಿ ರಚಿಸಿದ್ದು ಅವುಗಳನ್ನು ಉಲ್ಲೇಕಿಸಿ ಅದರಲ್ಲಿ ಅಡಕವಾಗಿರುವ ಅಂಶಗಳನ್ನು ವಿವರಿಸಿದರು.
ಸರ್ವಜ್ಞ ಎಂಬುವನು ಯಾವುದೇ ಉನ್ನತ ಅಭ್ಯಾಸ ಮಾಡಿದವನಲ್ಲ ಆದರೂ ಸಹ ಆತನಲ್ಲಿ ಜ್ಞಾನದ ಸಂಪತ್ತು ಮಾತ್ರ ಅಪಾರವಾಗಿತ್ತು. ಸರ್ವಜ್ಞ ತನ್ನ ಬಗ್ಗೆ ತಾನೇ ತ್ರಿಪದಿಗಳನ್ನು ರಚಿಸಿದ್ದು ತಾನು ಸರ್ವರೊಳಾಡಿ ಎಲ್ಲರಿಂದ ಒಂದೊಂದು ಅಕ್ಷರ ಕಲಿತವನ್ನು ಎಂದು ಹೇಳಿಕೊಂಡಿದ್ದಾನೆ. ಒಟ್ಟಾರೆ ಈತನ ಅಂದಿನ ನಿಲುವು ಇಂದಿನ ಸಮಾಜಕ್ಕೆ ಪೂರಕವಾಗಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಕನ್ನಡ ಶಿಕ್ಷಕಿ ಸಿ.ಟಿ.ವಿಜಯಲಕ್ಷ್ಮಿ ಮಾತನಾಡಿ , ಸರ್ವಜ್ಞನ ಕೆಲ ವಚನಗಳನ್ನು ಪಠಿಸಿ ಅವುಗಳ ವಿವರ ತಿಳಿಸಿದರು. ಅಲ್ಲದೆ ಕಸಾಪದಿಂದ ಇಂತಹ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಸಾಪದ ಗೌರವಾಧ್ಯಕ್ಷ ಹಾಗೂ ನಿವೃತ್ತ ಕನ್ನಡ ಉಪನ್ಯಾಸಕರಾದ ತ.ಶಿ.ಬಸವಮೂರ್ತಿ ಅವರನ್ನು ಅವರ ಶಿಷ್ಯ ವೃಂದದವರು ಸನ್ಮಾನಿಸಿದರು. ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್ "ಹೂವ ತರುವೆವು ಮನೆಗೆ ಹುಲ್ಲತರುವಾ" ಭಕ್ತಿಗೀತೆ ಹಾಡಿದರು. ಕಸಾಪದ ನಾರಾಯಣಪ್ಪ, ಚಿಕ್ಕಣ್ಣ, ದಯಾನಂದ್, ವೈದ್ಯ ಸಿದ್ದರಾಮಯ್ಯ, ವರ್ತಕಬಾಲಾಜಿ, ಭದ್ರೇಶ್, ಗುತ್ತಿಗೆದಾರ ಗಂಗಣ್ಣ, ರೈತಸಂಘದ ಸತೀಶ್,ಪ್ರದೀಪ್, ಪ್ರಸಾದ್, ಶಿಕ್ಷಕ ರಮೇಶ್, ಕಾಯಿಬಸವರಾಜು ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕು. ವರ್ಷಿಣಿ ಪ್ರಾರ್ಥಿಸಿ,ಶ್ರೀಮತಿ ನಾಗಲಕ್ಷ್ಮಿ ನರೇಂದ್ರಬಾಬು ಸ್ವಾಗತಿಸಿ, ನಾರಾಯಣಪ್ಪ ನಿರೂಪಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ