ಹುಳಿಯಾರು ಪಟ್ಟಣದಿಂದ ಶಿರಾವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು ಈ ಸಂಬಂಧ ರಸ್ತೆ ವಿಸ್ತರಣೆ ಮಾಡುವಾಗ ಜಮೀನು ಕಳೆದುಕೊಳ್ಳಲಿರುವ ರೈತೆರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಇಂದು(ತಾ.18) ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಶೇಷಭೂಸ್ವಾಧೀನಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದಿಂದ ಸಭೆ ಕರೆಯಲಾಗಿದೆ.
ರಾಷ್ಟ್ರೀಯ ಹೆದ್ದಾರಿ 234 ಮಂಗಳೂರಿನಿಂದ ಪ್ರಾರಂಭವಾಗಿ ತಮಿಳುನಾಡಿನ ವಿಲ್ಲುಪುರಂ ಸಂಪರ್ಕ ಕಲ್ಪಿಸಲಿದ್ದು ಒಟ್ಟು ಮೂರು ರಾಜ್ಯಗಳಲ್ಲಿ ಹಾದುಹೋಗಲಿದೆ. ಮಂಗಳೂರಿನಿಂದ ಪ್ರಾರಂಭವಾಗಿ ಬೆಳ್ತಂಗಡಿ-ಮೂಡಗೆರೆ-ಬೇಲೂರು-ಹುಳಿಯಾರು-ಶಿರಾ-ಮಧುಗಿರಿ-ಚಿಂತಾಮಣಿ-ಆಂದ್ರಪ್ರದೇಶದ ವೆಂಕಟಗಿರಿ ಹಾದು ತಮಿಳುನಾಡಿನ ವಿಲ್ಲುಪುರಂ ತಲುಪಲಿದ್ದು ಒಟ್ಟು 715 ಕಿ.ಮೀ. ಉದ್ದದಾಗಿದೆ.
ಕೆಲವೆಡೆ ಈಗಾಗಲೇ ಕಾಮಗಾರಿ ನಡೆದಿದ್ದು , ಸದ್ಯ ಹುಳಿಯಾರು-ಶಿರಾ ನಡುವೆ ಭೂಸ್ವಾಧೀನ ಕಾರ್ಯ ನಡೆದಿದೆ. ರಾ.ಹೆದ್ದಾರಿ 234 ಹುಳಿಯಾರು-ಶಿರಾ ಸೆಕ್ಷನ್ ಗೆ ಸಂಬಂಧಿಸಿದಂತೆ ಕಿಮೀ 243.30 ರಿಂದ 290.2 ವರೆಗೆ ಹುಳಿಯಾರು-ಬಳ್ಳೆಕಟ್ಟೆ-ಮಾರುಹೊಳೆ-ಹೊಯ್ಸಳಕಟ್ಟೆ-ಬೆಳ್ಳಾರ-ಬುಕ್ಕಾಪಟ್ಟಣ-ಮೇಕರೆಹಳ್ಳಿ ಮಾರ್ಗವಾಗಿ ಹಾದುಹೋಗಲಿದೆ. ಹೆದ್ದಾರಿ ವಿಸ್ತರಣೆ ಬೇಕಾಗಿರುವ ಈ ಭಾಗದ ಜಮೀನನ್ನು ಈಗಾಗಲೇ ಸ್ವಾಧೀನ ಪಡಿಸಿಕೊಂಡಿದ್ದು, ಸಂಬಂಧಪಟ್ಟ ಜಮೀನುಗಳ ಮಾಲೀಕರ ಪಟ್ಟಿಯನ್ನು ಗೆಜೆಟ್ ನಲ್ಲಿ ಪ್ರಕಟಿಸಲಾಗಿದ್ದು , ಪರಿಹಾರಧನ ವಿತರಣೆ ಮಾಡಲು ಭೂ ಮಾಲೀಕರ ಸಭೆಯನ್ನು ಕರೆಯಲಾಗಿದೆ.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರು ತಮ್ಮ ಮೂಲ ದಾಖಲಾತಿ ಪತ್ರಗಳು, ಕ್ರಯಪತ್ರ, ಮ್ಯುಟೇಶನ್, ಪಹಣಿ, ಕಂದಾಯಪಾವತಿ ರಸೀದಿ, ಭೂಪರಿವರ್ತನೆ ಆದೇಶ, ,ಸಾಗುವಳಿಚೀಟಿ, ರೆವಿನ್ಯೂ ನಕ್ಷೆಯೊಂದಿಗೆ ತಮ್ಮ ಬೇಡಿಕೆಗಳೇನಾದರೂ ಇದ್ದಲ್ಲಿ ಖುದ್ದಾಗಿ ಅಥವಾ ವಕೀಲರ ಮೂಲಕ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ನಡೆಯುವ ಸಭೆಗೆ ಹಾಜರಾಗಿ ಭೂಸ್ವಾಧೀನಾಧಿಕಾರಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ