ಬಿಸಿಲು,ಮಳೆಯನ್ನದೆ ತನ್ನ ಮೈ ಬೆವರು ಬಸಿದು ಹೊಲದಲ್ಲಿ ಕೆಲಸ ಮಾಡಿ ಆಹಾರ ಧಾನ್ಯಗಳನ್ನು ಬೆಳೆದು ಇಡಿ ರಾಷ್ಟ್ರಕ್ಕೆ ಅನ್ನ ನೀಡುವ ನೇಗಿಲಯೋಗಿಗೆ ಈ ಬಾರಿ ಉತ್ತಮ ಮಳೆಯಾಗದೆ ಬರಗಾಲ ಆವರಿಸಿ ಅನ್ನಕ್ಕಾಗಿ ಪರಿತಪಿಸುವಂತ ದುಸ್ಥಿತಿಯೊದಗಿದೆ ಎಂದು ರೈತಸಂಘದ ತುಮಕೂರು ಜಿಲ್ಲಾಧ್ಯಕ್ಷ ಗೋವಿಂದರಾಜು ವಿಷಾದಿಸಿದರು..
ಹುಳಿಯಾರಿನ ಲಿಂಗಪ್ಪನಪಾಳ್ಯದಲ್ಲಿ ರೈತಸಂಘದ ಗ್ರಾಮಘಟಕದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಗೋವಿಂದರಾಜು ಸಂಘಟನೆ ಕುರಿತು ಮಾತನಾಡಿದರು. |
ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ನಡೆದ ರೈತಸಂಘ (ಪುಟ್ಟಣ್ಣಯ್ಯ ಬಣ) ಹಾಗೂ ಹಸಿರುಸೇನೆಯ ಗ್ರಾಮಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರೇ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ಇಂದು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗುತ್ತಿಲ್ಲ. ಅಲ್ಲದೆ ರಾಜಕಾರಣಿಗಳು ತಮ್ಮ ಪಕ್ಷದ ಹಿತವನ್ನೇ ಮುಖ್ಯವಾಗಿಸಿ ಕೊಂಡು ಸಾಗುತ್ತಿದ್ದಾರೆ ಹೊರತು ದೇಶದ ರೈತ ಬಗ್ಗೆ ಗಮನಗೊಡುತ್ತಿಲ್ಲ ಎಂದರು. ಹುಳಿಯಾರು ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಅಂತರ್ಜಲ ಕುಸಿದು ಬೋರ್ ವೆಲ್ ಗಳು ಬತ್ತಿಹೋಗಿದ್ದು ನೀರಿಲ್ಲದೆ ಇಲ್ಲಿನ ಕೃಷಿಚಟುವಟಿಕೆಗಳು ಸ್ಥಗಿತಗೊಳ್ಳುವಂತಾಗಿವೆ. ಈ ಬಗ್ಗೆ ಸಚಿವರಿಗೆ,ಶಾಸಕರಿಗೆ ತಿಳಿದಿದ್ದರೂ ಸಹ ಇದುವರೆಗೂ ಈ ಬಗ್ಗೆ ಕ್ರಮಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ರೈತರು ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಸುಮ್ಮನೆ ಕುಳಿತಲ್ಲಿ ಪಡೆಯಲಾಗುವುದಿಲ್ಲ ಅದಕ್ಕೆ ರೈತರೆಲ್ಲಾ ಸೇರಿ ಹೋರಾಟ, ಪ್ರತಿಭಟನೆಯ ಹಾದಿಯಲ್ಲಿ ಸಾಗಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕಿದೆ ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಎಲ್ಲಾ ರೈತರು ಸಂಘಟನಾತ್ಮಕವಾಗಿ ಒಗ್ಗೂಡಬೇಕಿದೆ ಎಂದರು.
ರಾಜ್ಯ ರೈತಸಂಘದ ಸೋಮಗುದ್ದ ರಂಗಸ್ವಾಮಿ ಮಾತನಾಡಿ , ಹುಳಿಯಾರು ಸುತ್ತಮುತ್ತ ಅನೇಕ ದೊಡ್ಡದೊಡ್ಡ ಕೆರೆಗಳಿದ್ದು ಅವೆಲ್ಲಾ ಬರಿದಾಗಿ ಭೂಮಿಯಲ್ಲ ಒಣಗಿ ಬೆಂಡಾಗಿದೆ. ಹಿಂದೆ ಕಾಲಕ್ಕೆ ತಕ್ಕಂತೆ ಮಳೆಯಾಗಿ ಕೆರೆಕಟ್ಟೆ ತುಂಬುತ್ತಿದ್ದವು ಆದರೆ ಈಗ ಪರಿಸರದಲ್ಲಿ ಸಮತೋಲನವಿಲ್ಲದೆ ಸರಿಯಗಿ ಮಳೆ ಬಾರದೆ ಬರಗಾಲ ಆವರಿಸುತ್ತಿದೆ . ಈ ಭಾಗಕ್ಕೆ ಹೇಮಾವತಿ ನೀರು ಹರಿಸುವ ಕಾರ್ಯಕ್ಕೆ ಹಸಿರು ನಿಶಾನೆಯಿದ್ದರೂ ಸಹ ಕೆಲವರು ತಮ್ಮ ಹಿತಕಾಗಿ ಹತ್ತುಹಲವು ತೊಡಕುಗಳನ್ನೊಡಿ ಈ ಭಾಗಕ್ಕೆ ನೀರು ಹರಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಒಟ್ಟಾರೆ ರೈತರೆಲ್ಲಾ ಒಂದಾಗಿ ನಮ್ಮ ಭಾಗಕ್ಕೆ ನೀರು ತಂದೇತರುತ್ತೇವೆ ಎಂಬ ದೃಢ ಸಂಕಲ್ಪ ಮಾಡಿ ಮುನ್ನಡೆದರೆ ಯಾರಿಗೂ ಜಗ್ಗದೆ ಈ ಭಾಗಕ್ಕೆ ನೀರು ಹರಿಸಬಹುದಾಗಿದೆ ಎಂದರು.
ರೈತಸಂಘದ ಚಿ.ನಾ.ಹಳ್ಳಿ ತಾಲ್ಲೂಕು ಅಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ, ಕಾರ್ಯದರ್ಶಿ ವಕೀಲ ರಮೇಶ್, ಗಂಗಾಧರ್,ನಿರಂಜನಮೂರ್ತಿ,ಕಾಡೇನಹಳ್ಳಿ ಗಂಗಾಧರ್, ಲಿಂಗಪ್ಪನಪಾಳ್ಯದ ಕಾಯಿಕುಮಾರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ