ಹುಳಿಯಾರು ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ಗಣಿತ ಶಿಕ್ಷಕ ಮುಜಾಮಿಲ್ ಪಾಷ ಅವರಿಗೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವ ಹಿನ್ನಲೆಯಲ್ಲಿ ಜಾಮೀಯ ಮಸೀದಿ ಸಮಿತಿ ಹಾಗೂ ಮುಸ್ಲಿಂಯುವಕ ಸಂಘದವತಿಯಿಂದ ಅವರನ್ನು ಗುರುವಾರ ಸನ್ಮಾನಿಸಿ ಗೌರವಿಸಲಾಯಿತು.
ಉತ್ತಮಶಿಕ್ಷಕ ಪ್ರಶಸ್ತಿ ವಿಜೇತರಾದ ಉರ್ದುಶಾಲೆಯ ಶಿಕ್ಷಕ ಮುಜಾಮಿಲ್ ಪಾಷ ಅವರನ್ನು ಹುಳಿಯಾರಿನ ಜಾಮೀಯ ಮಸೀದಿ ಸಮಿತಿ ಹಾಗೂ ಮುಸ್ಲಿಂಯುವಕ ಸಂಘದಿಂದ ಸನ್ಮಾನಿಸಲಾಯಿತು. |
ಸನ್ಮಾನ ಸ್ವೀಕರಿಸಿದ ಶಿಕ್ಷಕ ಮುಜಾಮಿಲ್ ಪಾಷ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಉರ್ದು ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ತಾನು ಕೆಲಸ ಮಾಡುತ್ತಿದ್ದು, ಮಕ್ಕಳಿಗೆ ಸಾಧ್ಯವಾದಷ್ಟು ವಿಚಾರಗಳನ್ನು ಕಲಿಸಿದ್ದು ಮಕ್ಕಳು ಸಹ ತಾವು ಹೇಳಿದ ಪಾಠಗಳನ್ನು ಅಚ್ಚುಕಟ್ಟಾಗಿ ಕಲಿಯುತ್ತಿದ್ದು, ಗಣಿತ ವಿಷಯದಲ್ಲಿ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವುದು ಸಂತಸ ತಂದಿದೆ. ನನ್ನ ಕಾರ್ಯವನ್ನು ಮೆಚ್ಚಿ ಶಿಕ್ಷಕರ ದಿನಾಚರಣೆಯಲ್ಲಿ ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಮತ್ತಷ್ಟು ಕಲಿಸಲಿಕ್ಕೆ ಉತ್ತೇಜನ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹುಳಿಯಾರು ಜಾಮೀಯ ಮಸೀದಿಯ ಮುತುವಲ್ಲಿ ಜಬೀಉಲ್ಲಾ ಮಾತನಾಡಿ , ಪ್ರತಿಯೊಬ್ಬ ಶಿಕ್ಷಕರೂ ಸಹ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು, ಆ ಹಿನ್ನಲೆಯಲ್ಲಿ ಶಿಕ್ಷಕರಾದವರು ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ವಿಚಾರಗಳನ್ನು ತಿಳಿಸುವಲ್ಲಿ ಸದಾ ಮುಂದಾಗಿರಬೇಕು ಎಂದರು.
ಮುಸ್ಕಿಂ ಯುವಕ ಸಂಘದ ಅಧ್ಯಕ್ಷ ಇಮ್ರಾಜ್, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಅಧ್ಯಕ್ಷ ಸಯ್ಯದ್ ಹಮೀದ್, ಸಂಘಟನೆಯ ನಾಸಿರ್ ಬೇಗ್, ಶಾಬಾಸ್ ಖಾನ್, ಅಮಾನ್ ಉಲ್ಲಾ, ಮೆಹಬೂಬ್ ಪಾಷ, ಉರ್ದುಶಾಲೆಯ ಮುಖ್ಯ ಶಿಕ್ಷಕ ಚೆನ್ನಿಗರಾಯಪ್ಪ, ದೈಹಿಕ ಶಿಕ್ಷಕ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ