ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಚರಂಡಿಯಲ್ಲಿ ಸತ್ತ ಪ್ರಾಣಿಯ ಕೊಳೆತ ಗಬ್ಬು ವಾಸನೆ ಬರುತ್ತಿದ್ದು, ನಿಲ್ದಾಣಕ್ಕೆ ಬಸ್ ಹತ್ತಲು ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುವಂತಾಗಿದೆ.
ಹುಳಿಯಾರು ಬಸ್ ನಿಲ್ದಾಣದ ಚರಂಡಿಯಲ್ಲಿ ತ್ಯಾಜ್ಯ ತುಂಬಿ ದುರ್ನಾತ ಬರುತ್ತಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುವಂತಾಗಿದೆ. |
ಬಸ್ ನಿಲ್ದಾಣದ ಪ್ಲಾಟ್ ಫಾರಂ ಪಕ್ಕದ ಚರಂಡಿಗಳಲ್ಲಿ ಕಸ,ಕಡ್ಡಿ , ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯವಸ್ತುಗಳು ತುಂಬಿದ್ದು, ಮಳೆ ಬಂದರೆ ನೀರು ಸಹ ಸರಾಗವಾಗಿ ಹೋಗದೆ ನಿಲ್ದಾಣದಲ್ಲೇ ನಿಲ್ಲುವಂತಾಗಿದೆ. ಅಲ್ಲದೆ ಕಳೆದ ಒಂದುವಾರದಿಂದ ಚರಂಡಿಯಲ್ಲಿ ಯಾವುದೋ ಪ್ರಾಣಿ ಸತ್ತಿದೆಯೋ ಅಥವಾ ಶೇಖರಣೆಯಾದ ತ್ಯಾಜ್ಯವಸ್ತುಗಳು ಕೊಳೆತು ದುರ್ನಾತ ಹೊಡೆಯುತ್ತಿದ್ದು, ಇದರ ವಾಸನೆಯಿಂದ ವಾಂತಿ ಬರುವಂತಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತದವರಿಗೆ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಯಕರ್ನಾಟಕ ಸಂಘಟನೆಯ ಮೋಹನ್ ಕುಮಾರೈ ಆರೋಪಿಸುತ್ತಾರೆ.
ಹುಳಿಯಾರು ನಿಲ್ದಾಣಕ್ಕೆ ನಿತ್ಯ ನೂರಾರು ಮಂದಿ ಪ್ರಯಾಣಿಕರು ಬರುತ್ತಾರೆ. ಪಂಚನಹಳ್ಳಿ,ತಿಪಟೂರು ಕಡೆ ಹೋಗುವ ಬಸ್ ಗಳು ನಿಲ್ಲುವ ಜಾಗದ ಚರಂಡಿಯಲ್ಲಿ ವಾಸನೆ ಹೆಚ್ಚಾಗಿ ಬರುತ್ತಿದ್ದು ಪ್ರಯಾಣಿಕರು ಮೂಗುಮುಚ್ಚಿಕೊಂಡು ನಿಲ್ಲುತ್ತಿದ್ದಾರೆ. ಗ್ರಾ.ಪಂ.ನವರು ಪ್ರತಿ ಬಸ್ ಹಾಗೂ ಇಲ್ಲಿನ ಪುಟ್ ಬಾತ್ ಅಂಗಡಿಗಳಿಂದ ನಿತ್ಯ ಸುಂಕ ವಸೂಲಿ ಮಾಡುತ್ತಾರೆ ಹೊರತು ಇಲ್ಲಿನ ಸಮಸ್ಯೆ ಬಗ್ಗೆ ಕಿವಿಗೊಡುತ್ತಿಲ್ಲ. ಶೀಘ್ರವೇ ಗ್ರಾ.ಪಂ.ನವರು ಚರಂಡಿ ಸ್ವಚ್ಚಗೊಳಿಸದಿದ್ದಲ್ಲಿ ತಮ್ಮ ಸಂಘಟನೆವತಿಯಿಂದ ಪ್ರತಿಭಟಿಸುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ಒಂದುವಾರದಿಂದ ಈ ದುರ್ವಾಸನೆಯಿಂದ ಅಂಗಡಿಗೆ ಗಿರಾಕಿಗಳು ಬಾರದೆ ವ್ಯಾಪಾರವಿಲ್ಲದಂತಾಗಿದೆ. ನಾವು ಸಹ ಮೂಗಿಗೆ ಬಟ್ಟೆಕಟ್ಟಿಕೊಂಡು ಅಂಗಡಿಯಲ್ಲಿದ್ದೇವೆ.ಸಮಸ್ಯೆ ಬಗ್ಗೆ ಗಮನ ನೀಡದ ಪಂಚಾಯ್ತಿಯವರು ನಿತ್ಯ ಸುಂಕ ವಸೂಲಿಗೆ ತಪ್ಪದೆ ಹಾಜರ್ ಆಗುತ್ತಾರೆ ಎಂದು ನಿಲ್ದಾಣದಲ್ಲಿನ ಚಿಲ್ಲರೆಅಂಗಡಿಯವರು ದೂರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ