ಇಂದಿನ ಒತ್ತಡಮಯ ಜೀವನಜೆಂಜಾಟದಲ್ಲಿ ಸುಖ,ಶಾಂತಿ ,ನೆಮ್ಮದಿ ಎಂಬುದು ಕಣ್ಮರೆಯಾಗುತ್ತಿದ್ದು ಕಲೆ, ಸಂಗೀತದ ಆಸ್ವಾದನೆ ಮೂಲಕ ಕೆಲಸಮಯವಾದರೂ ಇಂತಹ ಒತ್ತಡಮಯ ಜೀವನದಿಂದ ಮುಕ್ತರಾಗಬಹುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪಟ್ಟಣದ ಎಂಪಿಎಸ್ ಶಾಲಾವರಣದಲ್ಲಿ ಗುರುವಾರ ಸಂಜೆ ಅಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು. |
ಮರೆಯಾಗುತ್ತಿರುವ ಜಾನಪದ ಕಲೆಯನ್ನು ಮೆಲುಕುಹಾಕುವಂತೆ ಹಾಗೂ ಜಾನಪದ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಡಿಕೊಂಡು ಬರುತ್ತಿದ್ದು ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು. ಪ್ರಸ್ತುತದ ದಿನಗಳಲ್ಲಿ ಜನ ಟಿ.ವಿ ಗೆ ಮಾರು ಹೋಗಿದ್ದು ಗ್ರಾಮಗಳಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು. ಜಿಲ್ಲೆ,ತಾಲ್ಲೂಕು ಹಂತದಲ್ಲಿ ನಡೆಯುವಂತಹ ಕಾರ್ಯಕ್ರಮ ಹುಳಿಯಾರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಸೊಗಡನ್ನು ಬಿತ್ತರಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ,ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಜಿ.ಎಸ್.ಶ್ರೀಕಂಠಭಟ್ ತಂಡದಿಂದ ಭಕ್ತಿ ಸಂಗೀತ, ಪ್ರಕಾಶ್ ಹೆಗ್ಗಡೆ ತಂಡದವರಿಂದ ಕೊಳಲುವಾದನ, ವಾಣಿವೆಂಕಟರಾಮು ತಂಡದಿಂದ ಭರತನಾಟ್ಯ, ಡಾ.ಲಕ್ಷ್ಮಣದಾಸ್ ತಂಡದಿಂದ ರಂಗಗೀತೆಗಳ ಗಾಯನ, ಮಲ್ಲಿಕಾರ್ಜುನ್ ಕೆಂಕೆರೆ ತಂಡವರಿಂದ ಸುಗಮ ಸಂಗೀತ, ವಿದ್ಯಾವಾರಿಧಿ ಶಾಲಾಮಕ್ಕಳಿಂದ ಜನಪದ ನೃತ್ಯಪ್ರದರ್ಶನ ಹಾಗೂ ಮಾರುತಿ ನಾಟಕ ಮಂಡಳಿಯಿಂದ "ದೈವ ತಂದ ಬಿರುಗಾಳಿ" ನಾಟಕ ಪ್ರದರ್ಶನ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸಿದ್ದು,ಜಿ.ಪಂ.ಸದಸ್ಯರಾದ ಮಂಜುಳಾ, ನಿಂಗಮ್ಮ, ತಾ.ಪಂ.ಸದಸ್ಯರಾದ ಫಾತೀಮಾ, ಜಯಲಕ್ಷ್ಮಿ,ಕವಿತಾ, ತಾಲ್ಲೂಕು ಕಸಾಪ ಅಧ್ಯಕ್ಷ ರವಿಕುಮಾರ್,ಗ್ರಾ.ಪಂ.ಉಪಾಧ್ಯಕ್ಷ ಅಬಿದುನ್ನಿಸ್ಸಾ, ಸದಸ್ಯರಾದ ಅಶೋಕ್ ಬಾಬು,ಗೀತಾಬಾಬು,ಹೇಮಂತ್,ಜಹೀರ್ ಸಾಬ್,ಗಂಗಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ