ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ಗುರಿಹೊಂದಿ ಅಭ್ಯಾಸಮಾಡಿದಲ್ಲಿ ಜೀವನದಲ್ಲಿ ಉನ್ನತಘಟ್ಟ ಮುಟ್ಟಬಹುದು ಎಂಬುದಕ್ಕೆ ಹೋಬಳಿಯ ಹೆಚ್.ಮೇಲನಹಳ್ಳಿಯ ಎಂ.ಕೆ.ಶ್ರೀರಂಗಯ್ಯ ಅವರು ಜಿಲ್ಲಾಧಿಕಾರಿ ಸ್ಥಾನಕ್ಕೆ ಏರಿರುವುದು ಸಾಕ್ಷಿಯಾಗಿದೆ.
ಅಪರಜಿಲ್ಲಾಧಿಕಾರಿ ಬಡ್ತಿಪಡೆದು ತಮ್ಮ ಸ್ವಗ್ರಾಮ ಹುಳಿಯಾರು ಹೋಬಳಿ ಹೆಚ್.ಮೇಲನಹಳ್ಳಿ ಆಗಮಿಸಿದ ಶ್ರೀರಂಗಯ್ಯ ಅವರನ್ನು ಗ್ರಾಮಸ್ಥರೆಲ್ಲಾ ಸೇರಿ ಪೂರ್ಣಕುಂಭದ ಮೂಲಕ ಸ್ವಾಗತಿಸಿದರು. |
ಈಗಲೂ ಸಹ ಸರಿಯಾದ ಸಂಪರ್ಕ ವ್ಯವಸ್ಥೆಯಿಲ್ಲದ ಕುಗ್ರಾಮವಾಗೆ ಉಳಿದಿರುವ ಹೆಚ್.ಮೇಲನಹಳ್ಳಿಯಲ್ಲಿ ಆಡಿ ಬೆಳೆದ ಶ್ರೀರಂಗಯ್ಯನವರು ಇಂದು ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದ ಇವರನ್ನು ಸ್ವಗ್ರಾಮಕ್ಕೆ ಕರೆಸಿದ ಗ್ರಾಮದವರು ನಮ್ಮೂರ ಹುಡುಗ ಈಗ ಜಿಲ್ಲಾಧಿಕಾರಿಯೆಂದು ಈತನನ್ನು ಅಭೂತಪೂರ್ವವಾಗಿ ಸ್ವಾಗತಿಸಿ ಸಂಭ್ರಮಿಸಿದರು.
ಇದಕ್ಕಾಗಿ ಗ್ರಾಮದ ರಸ್ತೆಗಳನೆಲ್ಲಾ ಹಸಿರು ತೋರಣಗಳಿಂದ ಅಲಂಕರಿಸಿ, ಗ್ರಾಮದ ಚಿಕ್ಕಮಕ್ಕಳು ಕಳಸವನ್ನು ಹೊತ್ತು ,ನಾದಸ್ವರದ ಪೂರ್ಣಕುಂಬ ಸ್ವಾಗತ ನೀಡಿ ಜಿಲ್ಲಾಧಿಕಾರಿ ದಂಪತಿಗಳನ್ನು ಗ್ರಾಮದ ದೇವಾಲಯದ ಬಳಿ ಎದುರುಗೊಂಡು ಮೆರವಣಿಗೆಯಲ್ಲಿ ಕರೆದೊಯ್ದರು.
ಊರಹಬ್ಬವೇನೋ ಎಂಬಂತೆ ಹಳ್ಳಿಯಲ್ಲಿನ ಎಲ್ಲರೂ ಪಾಲ್ಗೊಂಡು ಅಭಿನಂಧನಾ ಸಮಾರಂಭ ಏರ್ಪಡಿಸಿ ಕ್ಷೇತ್ರದ ಶಾಸಕರನ್ನು, ಶಿಕ್ಷಣಕ್ಕೆ ಸಹಕರಿಸಿದ್ದ ಎಲ್ಲಾ ಸ್ನೇಹಿತರು, ಶಿಕ್ಷಕರನ್ನು ಅಕ್ಕಪಕ್ಕದ ಗ್ರಾಮಸ್ಥರನ್ನು ಬರಮಾಡಿಕೊಂಡು ಇವರನ್ನು ಸನ್ಮಾನಿಸಿ ಗೌರವಿಸಿದರು.
ಹುಳಿಯಾರು ಹೋಬಳಿ ಹೆಚ್.ಮೇಲನಹಳ್ಳಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶ್ರೀರಂಗಯ್ಯ ಅವರನ್ನು ಸನ್ಮಾನಿಸಲಾಯಿತು. |
ಬಡತನದ ನಡುವೆ ಶಿಕ್ಷಣ: ಬಡತನ ಕುಟುಂಬದ ಹಿನ್ನಲೆಯ ಇವರು ಯಾವುದಕ್ಕು ಎದೆಗುಂದದೆ ಬೇರೆಯವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಜೊತೆಗಾರ ಹುಡುಗರೊಂದಿಗೆ ಬುಗುರಿ, ಗೋಲಿ ಆಡಿಕೊಂಡು ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಇದೇ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ನಂತರ ಚಿಕ್ಕನಾಯಕನಹಳ್ಳಿಯ ದೇಶಿಯ ವಿದ್ಯಾಪೀಠದಲ್ಲಿ ಪಿ.ಯು.ಸಿ. ಹಾಗೂ ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪಡೆದರು . ಪ್ರತಿ ಹಂತದಲ್ಲೂ ಶಿಕ್ಷಣಕ್ಕಾಗಿ, ಪುಸ್ತಕ ಬಟ್ಟೆಗಾಗಿ ಸಮಸ್ಯೆಗಳನ್ನೇ ಎದುರಿಸಿ, ಒಂದು ಹಂತದಲ್ಲಿ ಹಾಸ್ಟಲ್ ದೊರೆಯದೆ ತಿನ್ನಲು ಊಟ, ತಿಂಡಿಯಿಲ್ಲದೆ ಮಲಗಿದ ದಿನಗಳಿದ್ದವು. ಸ್ನೇಹಿತರು ಮಧ್ಯಾಹ್ನ ಶಾಲೆಯಲ್ಲಿ ಕೊಡುತಿದ್ದ ಉಪ್ಪಿಟ್ಟನ್ನು ಪೇಪರಲ್ಲಿ ಕಟ್ಟಿಕೊಂಡು ತಂದು ವಾಸವಿದ್ದ ರೂಮಿನ ಕಿಟಕಿಯಲ್ಲಿ ಇಟ್ಟು ಹೋಗಿದ್ದ ದಿನಗಳಿದ್ದವು.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.ಸಿ. ಇಂಗ್ಲೀಷ್ ಮತ್ತು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಎಲ್.ಎಲ್.ಬಿ. ಶಿಕ್ಷಣದಲ್ಲೂ ಸಹಾ ಉತ್ತಮ ಫಲಿತಾಂಶ ಪಡೆದಿರುವ ಇವರು ಶೈಕ್ಷಣಿಕ ಹಂತವನ್ನು ಮತ್ತೊಬ್ಬರ ನೆರವು ಹಾಗೂ ಸಹಾಯದಿಂದ ಮುಗಿದ ದಿನಗಳನ್ನು ಇನ್ನು ಮರೆತಿಲ್ಲ.
ಉದ್ಯೋಗದ ಹಾದಿ : ಮಂಡ್ಯಜಿಲ್ಲೆಯ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಂತರದ ದಿನಗಳಲ್ಲಿ, ತುಮಕೂರು ಹಾಲೂ ಒಕ್ಕೂಟ್ಟದಲ್ಲಿ, ಬೆಂಗಳೂರು ಯೋಜನ ಇಲಾಖೆಯಲ್ಲಿ ಸಹನಿರ್ದೇಶಕರಾಗಿ ಉಪನಿರ್ದೇಶಕರಾಗಿ ಪ್ರಗತಿ ಕಾಣುತ್ತಾ ಹೋದ ಇವರು ಕೆ.ಎ.ಎಸ್. ತೇರ್ಗಡೆಯಾಗಿ ಬೆಂಗಳೂರು ಮತ್ತು ಕುಣಿಗಲ್ ನಲ್ಲಿ ತಹಶೀಲ್ದಾರ್ ಆಗಿ , ಎ.ಸಿ.ಯಾಗಿ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಇದೀಗ ಅಪರ ಜಿಲ್ಲಾಧಿಕಾರಿಯಾಗಿ ಭಡ್ತಿ ಪಡೆದು ಚಿತ್ರದುರ್ಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನಮ್ಮೂರಿನ ಹುಡುಗ ಜಿಲ್ಲೆಗೆ ಅಧಿಕಾರಿಯಾಗಿರುವುದು ನಮ್ಮ ಗ್ರಾಮಕ್ಕೆ ಒಂದು ಕಿರೀಟವಿಟ್ಟಂತೆ ಎಂದು ಭಾವಿಸಿದ ಗ್ರಾಮಸ್ಥರು ಅಭಿಮಾನಪೂರ್ವಕವಾಗಿ ಕರೆದು ಸತ್ಕರಿಸಿದರು.
ಇವರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು , ಉತ್ತಮ ಶಿಕ್ಷಣ ಯಶಸ್ಸಿಗೆ ದಾರಿ ಎಂಬುದನ್ನ ಇವರು ತೋರಿಸಿದ್ದಾರೆ. ಇವರನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನ ಹೊಂದಿ ಸಮಾಜದ ಅಭಿವೃದ್ದಿಗೆ ಮುಂದಾಗುವಂತೆ ಸಲಹೆ ನೀಡಿದರು.
ಈ ಸಮಾರಂಭದಲ್ಲಿ ಹೊಸದುರ್ಗ ತಹಶೀಲ್ದಾರ್ ಲಕ್ಷ್ಮಣಪ್ಪ, ಹಿರಿಯ ಶಿಕ್ಷಕ ಪ್ರಸನ್ನಕುಮಾರ ಶೆಟ್ರು, ಮಹದೇವಮ್ಮ ಶ್ರೀರಂಗಯ್ಯ, ವಕೀಲ ಸದಾಶಿವು, ಪಿ.ಎಸ್.ಐ.ಘೋರ್ಪಡೆ, ಶಿಕ್ಷಕರಾದ ರಾಜಣ್ಣ, ಮಂಜುಳ, ನಾಗರಾಜು, ಸಿದ್ದಯ್ಯ, ಕರಿಯಪ್ಪ, ಮುಖಂಡರಾದ ಶಾಂತಮೂರ್ತಿ, ಮೋಹನ್, ಬಸವರಾಜು, ಮಲ್ಲಿಕಾರ್ಜುನಯ್ಯ, ಸುರೇಶ್ ಇತರರು ಹಾಜರಿದ್ದರು.
------------------------------
ವಿದ್ಯೆ ಯಾರ ಸ್ವತ್ತು ಅಲ್ಲ ಆದು ಸಾಧಕನ ಸ್ವತ್ತು, ಶ್ರದ್ಧೆ ಹಾಗೂ ಪರಿಶ್ರಮದಿಂದ ಓದಿದರೆ ಏನೂ ಬೇಕಾದರು ಸಾಧಿಸಬಹುದು ಎಂಬುದಕ್ಕೆ ಇವರು ಸಾಕ್ಷಿ : ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ